– ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದ ಯುವಕ
ಯಾದಗಿರಿ: ಅಕ್ರಮ ಮರಳುಗಾರಿಗೆ ಅವ್ಯಾಹತವಾಗಿ ನಡೆಯುತ್ತಿರುವುದನ್ನು ಕಂಡ ಯುವಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ದಂಧೆಕೋರರು ಯುವಕನಿಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಹೀಗಾಗಿ ಯುವಕ ಎಸ್ಪಿ ಕಚೇರಿಯಲ್ಲಿ ಠಿಕಾಣಿ ಹೂಡಿದ್ದಾನೆ.
ಜಿಲ್ಲೆಯ ವಡಗೇರಾ ತಾಲೂಕಿನ ಗಡ್ಡೆಸುಗುರು ಗ್ರಾಮದ ಭೀಮಾ ನದಿ ತೀರದಲ್ಲಿ ಅಕ್ರಮ ಮರಳು ದಂಧೆ ವಿಪರೀತವಾಗಿದ್ದು, ಅಕ್ರಮ ಮರಳು ದಂಧೆಕೋರರ ದರ್ಪಕ್ಕೆ ಕೊನೆ ಇಲ್ಲದಂತಾಗಿದೆ. ಇದಕ್ಕೆ ಸ್ಥಳೀಯ ಠಾಣೆಗಳ ಪೊಲೀಸರ ಕೃಪಾಕಟಾಕ್ಷ ಸಹ ಇರುವ ಅನುಮಾನ ಮೂಡಿದ್ದು, ಇದರಿಂದ ಅಮಾಯಕ ಜನರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ.
Advertisement
Advertisement
ಮರಳು ಸಾಗಾಟಕ್ಕೆ ಜೆಸಿಬಿ ಆಪರೇಟಿಂಗ್ ಮಾಡಲು, ಅದೇ ಗ್ರಾಮದ ಮಲ್ಲಿಕಾರ್ಜುನ ತೆರಳಿದ್ದ, ಇದು ಅಕ್ರಮ ದಂಧೆ ಎಂದು ತಿಳಿಯದ ಮಲ್ಲಿಕಾರ್ಜುನ, ದಂಧೆ ನಡೆಯುತ್ತಿರುವುದನ್ನು ಸೆಲ್ಫಿ ವೀಡಿಯೋ ಮಾಡಿಕೊಂಡು, ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ಬಳಿಕ ವಿಡಿಯೋ ವೈರಲ್ ಆಗಿದೆ. ಇದರಿಂದ ಕೋಪಗೊಂಡಿರುವ ಅಕ್ರಮ ಮರಳು ದಂಧೆಕೊರ ರಘುಪತಿ, ಮಲ್ಲಿಕಾರ್ಜುನ ಅವರ ಮನೆಗೆ ರಾತ್ರಿ ತೆರಳಿ ಜೀವ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಗ್ರಾಮ ಬಿಡುವಂತೆ, ಅವಾಜ್ ಸಹ ಹಾಕಿದ್ದಾನೆ. ಈ ಬಗ್ಗೆ ರಘುಪತಿ ಸೇರಿ ಇನ್ನಿತರರ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದರೂ ಆರೋಪಿಗಳ ವಿರುದ್ಧ ವಡಗೇರಾ ಠಾಣೆಯ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.
Advertisement
Advertisement
ಜೀವ ಬೆದರಿಕೆ ಹಿನ್ನೆಲೆ ಊರು ತೊರೆದಿರುವ ಮಲ್ಲಿಕಾರ್ಜುನ, ರಕ್ಷಣೆ ನೀಡಬೇಕೆಂದು ಎಸ್ಪಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಪೊಲೀಸರು ರಕ್ಷಣೆ ನೀಡದಿದ್ದರೆ ನಾವು ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತ್ತೆವೆ, ಪೊಲೀಸ್ ಅಧಿಕಾರಿಗಳು ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಒಂದು ವೇಳೆ ರಕ್ಷಣೆ ನೀಡದಿದ್ದರೆ ಮುಂದಾಗುವ ಅನಾಹುತಕ್ಕೆ ಪೊಲೀಸರೇ ಕಾರಣ ಎಂದು ಯುವಕ ಮಲ್ಲಿಕಾರ್ಜುನ ನೋವು ತೊಡಿಕೊಂಡಿದ್ದಾರೆ. ಯಾದಗಿರಿ ಎಸ್ಪಿ ಕಚೇರಿಗೆ ಆಗಮಿಸಿ ಎಸ್ಪಿಗೆ ದೂರು ಸಲ್ಲಿಸಿದ್ದಾರೆ.