Advertisements

‘ಸೇನೆಗೆ ರಾಜೀನಾಮೆ ನೀಡಿ ಇಲ್ಲವೇ ಎಫ್‌ಬಿಯಿಂದ ಹೊರ ಬನ್ನಿ, ಆಯ್ಕೆ ನಿಮ್ಮದುʼ – ಸೇನಾಧಿಕಾರಿಗೆ ಹೈಕೋರ್ಟ್‌ ಸೂಚನೆ

ನವದೆಹಲಿ: “ಸೇನೆಗೆ ರಾಜೀನಾಮೆ ನೀಡಿ ಇಲ್ಲವೇ ಫೇಸ್‌ಬುಕ್‌ನಿಂದ ಹೊರಬನ್ನಿ, ಆಯ್ಕೆ ನಿಮ್ಮದು” ಹೀಗೆಂದು ದೆಹಲಿ ಹೈಕೋರ್ಟ್‌ ಸೇನೆಯ ಅಧಿಕಾರಿಗೆ ಖಡಕ್‌ ಆಗಿ ಸೂಚಿಸಿದೆ.

Advertisements

ಭಾರತೀಯ ಸೇನೆ ತನ್ನ ಸಿಬ್ಬಂದಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಿದ್ದಕ್ಕೆ ತಡೆ ನೀಡಬೇಕೆಂದು ಕೋರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೆಫ್ಟಿನೆಂಟ್ ಕರ್ನಲ್ ಪಿ.ಕೆ.ಚೌಧರಿ ಅವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೀವ್ ಸಹೈ ಎಂಡ್ಲಾ ಮತ್ತು ಆಶಾ ಮೆನನ್ ಅವರಿದ್ದ ದ್ವಿಸದಸ್ಯ ಪೀಠ ಯಾವುದೇ ಮಧ್ಯಂತರ ತಡೆ ನೀಡಲು ನಿರಾಕರಿಸಿತು. ವಿಶೇಷವಾಗಿ ಈ ವಿಷಯವು ದೇಶದ ಭದ್ರತೆಗೆ ಸಂಬಂಧಿಸಿದ ಕಾರಣ ಅರ್ಜಿಗೆ ಯಾವುದೇ ಮಧ್ಯಂತರ ತಡೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

Advertisements

ಒಮ್ಮೆ ಖಾತೆಯನ್ನು ಡಿಲೀಟ್‌ ಮಾಡಿದ ಬಳಿಕ ಮತ್ತೆ ಅದರಲ್ಲಿರುವ ಡೇಟಾಗಳನ್ನು ಪಡೆಯಲು ಸಾಧ್ಯವಿಲ್ಲ. ವ್ಯಕ್ತಿಗಳನ್ನು ಸಂರ್ಪಕಿಸಲು ಆಗುವುದಿಲ್ಲ.  ಇದರಿಂದಾಗುವ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಈ ರೀತಿಯ ಆದೇಶದಿಂದ ಪ್ರಕಟಿಸುವ ಮೂಲಕ ನನ್ನ ಕಕ್ಷಿದಾರರ ಖಾಸಗಿತನದ ಹಕ್ಕನ್ನು ಕಸಿಯಲಾಗಿದೆ. ಹೀಗಾಗಿ ಆದೇಶಕ್ಕೆ ತಡೆ ನೀಡಬೇಕೆಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.

ಇದಕ್ಕೆ ಕೋರ್ಟ್‌ ನೀವು ದೇಶದ ಮುಖ್ಯ ಸಂಸ್ಥೆಯ ಭಾಗವಾಗಿದ್ದೀರಿ. ಮತ್ತು ಸಂಸ್ಥೆಯ ಆದೇಶಕ್ಕೆ ಬದ್ಧರಾಗಿರಬೇಕು. ನಿಮಗೆ ಫೇಸ್‌ಬುಕ್‌ ಮುಖ್ಯವಾಗಿದ್ದರೆ ನೀವು ಸೇನೆಗೆ ರಾಜೀನಾಮೆ ನೀಡಿ ಖಾತೆಯನ್ನು ಉಳಿಸಿಕೊಳ್ಳಬಹುದು. ಆಯ್ಕೆ ನಿಮ್ಮದು. ಯಾವ ಆಯ್ಕೆಯನ್ನು ಆರಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿತು.

Advertisements

ಇಲ್ಲ. ಇಲ್ಲ. ಕ್ಷಮಿಸಿ. ನೀವು ದಯವಿಟ್ಟು ಖಾತೆಯನ್ನು ಡಿಲೀಟ್‌ ಮಾಡಿ. ಬೇಕಾದ್ರೆ ಮತ್ತೊಮ್ಮೆ ಹೊಸ ಖಾತೆಯನ್ನು ತೆರೆಯಬಹುದು. ಆದರೆ ಈ ರೀತಿ ಕೆಲಸ ಮಾಡಲು ಆಗುವುದಿಲ್ಲ. ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆ ಸಂಸ್ಥೆಯ ಆದೇಶಕ್ಕೆ ಬದ್ಧವಾಗಿರಬೇಕು ಎಂದು ಸಲಹೆ ನೀಡಿತು.

ನನ್ನ ಕುಟುಂಬದ ಸದಸ್ಯರು ಸ್ನೇಹಿತರು ವಿದೇಶದಲ್ಲಿದ್ದಾರೆ. ಇವರ ಜೊತೆ ಮಾತನಾಡಲು ಫೇಸ್‌ಬುಕ್‌ ಬೇಕು. ಈ ಆದೇಶದಿಂದಾಗಿ ವಾಕ್‌ ಸ್ವಾತಂತ್ರ್ಯದ ಹಕ್ಕು, ವೈಯಕ್ತಿಕ ಜೀವನದ ಹಕ್ಕು, ಖಾಸಗಿತನದ ಹಕ್ಕು ಉಲ್ಲಂಘನೆಯಾಗಿದೆ ಎಂದು ಸೇನಾಧಿಕಾರಿ ಮನವಿ ಮಾಡಿದರು.

ಈ ವಿಚಾರಣೆಗೆ ಕೇಂದ್ರದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌(ಎಎಸ್‌ಜಿ) ಚೇತನ್‌ ಶರ್ಮಾ ಹಾಜರಾಗಿ ಫೇಸ್‌ಬುಕ್‌ ಮೂಲಕ ನಮ್ಮ ಸಿಬ್ಬಂದಿಯನ್ನು ಗುರಿಯಾಗಿಸಿ ಸೈಬರ್‌ ದಾಳಿಯಾಗುವ ಸಾಧ್ಯತೆಯಿದೆ. ಅವರಿಗೆ ಸಂವಹನ ಮಾಡ ಬೇಕಿದ್ದರೆ ವಾಟ್ಸಪ್‌, ಸ್ಕೈಪ್‌, ಟ್ವಿಟ್ಟರ್‌ ಇದೆ ಎಂದು ಕೋರ್ಟ್‌ ಗಮನಕ್ಕೆ ತಂದರು.

ಎರಡು ಕಡೆಯ ವಾದ ಆಲಿಸಿದ ಬಳಿಕ, ಯಾವ ಆಧಾರದ ಮೇರೆಗೆ ಭಾರತೀಯ ಸೇನೆ ಸಾಮಾಜಿಕ ಜಾಲತಾಣ ಬಳಕೆಗೆ ನಿಷೇಧ ಹೇರಿದೆ? ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಬೇಕೇಂದು ಎಎಸ್‌ಜಿಗೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿತು.

ತಮ್ಮ ಮೊಬೈಲ್‌ ಫೋನ್‌ನಲ್ಲಿರುವ 89 ಆ್ಯಪ್‌ ಮತ್ತು ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ಜುಲೈ 15ರ ಒಳಗಡೆ ಡಿಲೀಟ್‌ ಮಾಡುವಂತೆ ತನ್ನ 13 ಲಕ್ಷ ಸೈನಿಕರು ಮತ್ತು ಅಧಿಕಾರಿಗಳಿಗೆ ಭೂಸೇನೆ ಜುಲೈ 8ರಂದು ಸೂಚನೆ ನೀಡಿತ್ತು

ಭದ್ರತೆ ಹಾಗೂ ಗೌಪ್ಯ ಮಾಹಿತಿಗಳ ಸೋರಿಕೆಯ ಅಪಾಯದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿರುವ ಸೇನೆ ಆದೇಶವನ್ನು ಪಾಲನೆ ಮಾಡದೇ ಇದ್ದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಈ 89 ಆ್ಯಪ್‌ಗಳಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿದ ಚೀನಾಕ್ಕೆ ಸೇರಿದ 59 ಆ್ಯಪ್‌ಗಳೂ ಸೇರಿವೆ.

Advertisements
Exit mobile version