Monday, 25th June 2018

Recent News

ಸುಳ್ಳು ಸುದ್ದಿ ಹರಡಿದವರ ವಿರುದ್ಧ ಸಚಿವ ಹೆಗ್ಡೆ ಯಿಂದ ಕೇಸ್ ದಾಖಲು

ಬೆಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯ ಚಾರಿತ್ರ್ಯ ಹರಣಕ್ಕೆ ಮತ್ತು ಸಮಾಜ ಒಡೆಯುವ ಕೆಲಸಕ್ಕೆ ಉದ್ದೇಶಪೂರ್ವಕವಾಗಿ ಮುಂದಾಗುತ್ತಿರುವವರಿಗೆ ಕಾನೂನು ಮೂಲಕವೇ ಉತ್ತರ ಕೊಡುತ್ತೇನೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗ್ಡೆ ಹೇಳಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಫೇಸ್‍ಬುಕ್ ನಲ್ಲಿ ಸ್ಟೇಟಸ್ ಹಾಕಿರುವ ಸಚಿವ ಅನಂತ ಕುಮಾರ್ ಹೆಗ್ಡೆ, ಸುಳ್ಳು, ವಿಕೃತ ಸುದ್ಧಿ ಹರಡುವ ಮೂಲಕ ಜನತೆಯ ದಾರಿ ತಪ್ಪಿಸುತ್ತಿರುವವರನ್ನು ಸಹ ನ್ಯಾಯಾಲಯಕ್ಕೆ ಎಳೆಯುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈಗಾಗಲೇ ಸಚಿವರ ಆಪ್ತ ಕಾರ್ಯದರ್ಶಿ ಆಗಿರುವ ಸುರೇಶ ಶೆಟ್ಟಿ ಅವರು ಸಚಿವರ ವಿರುದ್ಧ ಆಕ್ಷೇಪಾರ್ಹ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವವರ ವಿರುದ್ಧ ಶಿರಸಿ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಸಚಿವರ ವಿರುದ್ಧ ಶ್ರೇಯಸ್ ಮುರಳ್ಳಿಗೌಡ ಹಾಗೂ ಆನಂದ ರಾಮಣ್ಣ ಎಂಬುವರು ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಹಾಗೂ ನಿಂದನಾತ್ಮಕ ಸಂದೇಶ ಹರಿಬಿಟ್ಟಿದ್ದಾರೆ. ಈ ಮೂಲಕ ಸಮಾಜದಲ್ಲಿ ಗೊಂದಲ ಹಾಗೂ ಜಾತಿಗಳ ನಡುವೆ ದ್ವೇಷ ಹುಟ್ಟಿಸುವಂತೆ ಪ್ರಚೋದಿಸುವ ಕೃತ್ಯ ಮಾಡುತ್ತಿದ್ದಾರೆ. ಈ ಕುರಿತ ದಾಖಲೆಗಳನ್ನು ಲಗತ್ತಿಸಿಲಾಗಿದ್ದು, ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಸಚಿವರ ಫೇಸ್ ಬುಕ್ ಸ್ಟೇಟಸ್‍ನಲ್ಲಿ ಏನಿದೆ?
ಸಂವಿಧಾನದ ಮೂಲ ಹಕ್ಕುಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಒಂದು. ಯಾವುದೇ ವ್ಯಕ್ತಿ ತನ್ನ ಅಭಿಪ್ರಾಯವನ್ನು ಹೊಂದಲು ಮತ್ತು ವ್ಯಕ್ತಪಡಿಸಲು ನಮ್ಮ ದೇಶದಲ್ಲಿ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ಇದನ್ನು ಬಳಸಿಕೊಂಡು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ವ್ಯಕ್ತಿಯ ಚಾರಿತ್ರ್ಯ ಹರಣಕ್ಕೆ ಮತ್ತು ಸಮಾಜ ಒಡೆಯುವ ಕೆಲಸಕ್ಕೆ ಉದ್ದೇಶಪೂರ್ವಕ ಮುಂದಾದಲ್ಲಿ, ಅದು ಖಂಡಿತವಾಗಿಯೂ ಸಹಿಸಲಾಗದ ಅಪರಾಧವಾಗುತ್ತದೆ.

ಮಾನ್ಯ ಪ್ರಧಾನ ಮಂತ್ರಿ ಮೋದಿಯವರು ನಮ್ಮ ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿ ತಮ್ಮ ಪ್ರತಿಯೊಂದು ಸಭೆಯಲ್ಲೂ ಸರ್ಕಾರದ ಯೋಜನೆಗಳ ಬಳಕೆ ಬಗ್ಗೆ ಅರಿವು ಮೂಡಿಸುತ್ತಿದ್ದರೆ, ಕೆಲವು ಪ್ರತಿಪಕ್ಷಗಳು ಹಾಗು ಅದರ ನಾಯಕತ್ವ ವಹಿಸಿದವರು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಕೌಂಟುಗಳ ಸೃಷ್ಟಿಗೆ ಪ್ರೋತ್ಸಾಹ ಕೊಡುತ್ತಿರುವ ಕಾಲವು ಹೌದು. ಇವತ್ತಿನ Digital ದಿನಮಾನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಅನಿಷ್ಟ ಬೆಳವಣಿಗೆ ಬಹಳ ವೇಗವಾಗಿ ಮತ್ತು ಅಪಾಯಕಾರವಾಗಿ ಹರಡುತ್ತಿದೆ.

ಭಾರತ ವಿಭಿನ್ನ ಸಂಸ್ಕೃತಿಯ ದೇಶ. ಇಲ್ಲಿಯ ವರ್ಣಮಯ ಜೀವನ ಪದ್ಧತಿ, ಪ್ರದೇಶವಾರು ವಿಂಗಡಣೆಗಳು ಆಯಾ ಪ್ರದೇಶದ ಜನಪ್ರತಿನಿಧಿಗಳಿಗೆ ಹತ್ತಿರದಿಂದ ತಿಳಿದಿರುತ್ತದೆ. ವೈಯುಕ್ತಿಕವಾಗಿ ದಲಿತರ ಮತ್ತು ಇತರೆ ಹಿಂದುಳಿದ ಜಾತಿಗಳ ಬಗ್ಗೆ ಅಪಾರ ಗೌರವ ಇರುವ ನಾನು ಅವರ ಶ್ರೀಮಂತ ಸಂಸ್ಕೃತಿ ಮತ್ತು ಆಚರಣೆಗಳನ್ನು ಅತೀವ ಶ್ರದ್ಧೆ ಮತ್ತು ಗೌರವದಿಂದ ಕಾಣುತ್ತಾ ಬಂದಿದ್ದೇನೆ. ಅವರ ಮುಗ್ಧತೆಗೆ ಸಹ ಮಾರು ಹೋಗಿದ್ದೇನೆ. ದೇಶದಲ್ಲಿ ದಲಿತರಿಗೆ ಸಂಪೂರ್ಣ ಸ್ಥಾನಮಾನ ದೊರೆಕಿಸಲು ತಮ್ಮ ಜೀವನವನ್ನೇ ತೇಯ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನನ್ನ ಅಚ್ಚು-ಮೆಚ್ಚಿನ ಆರಾಧ್ಯ ಪುರುಷರು. ಅವರ ಚಿಂತನೆ ಮತ್ತು ಸಮಾಜ ಜೋಡಿಸಿದ ಪರಿ, ಅವರು ದಲಿತರಿಗೆ ಮಾತ್ರವಲ್ಲ, ಇಡೀ ಸಮಸ್ತ ವಿಶ್ವಕ್ಕೆ ಅವರು ನಾಯಕರು. ಇನ್ನು ಕುರುಬ ಜನಾಂಗದವರು ಈ ನಾಡಿನ ಸಂಸ್ಕೃತಿಗೆ ನೀಡಿದ ಕೊಡುಗೆಯಂತೂ ಅನನ್ಯ. ಅವರ ಪರಂಪರೆ ಕೂಡ ಅಷ್ಟೇ ಸ್ಪೂರ್ತಿದಾಯಕ. ಭಕ್ತಿ ಪರಂಪರೆಯಿಂದ ಹಿಡಿದು ದೇಶ ಕಾಯುವ ಶೌರ್ಯ ಮೆರೆಯುವರೆಗೂ ಈ ಜನಾಂಗದವರ ಕೀರ್ತಿ ಅಪಾರ. ಈ ದೇಶದ ಇತಿಹಾಸದಲ್ಲಿ ಕನಕದಾಸರನ್ನು ಭಕ್ತಿಯ ಪರಾಕಾಷ್ಠೆಗೆ ಹೋಲಿಸಿದರೆ, ವೀರ-ಪರಾಕ್ರಮಕ್ಕೆ ಇನ್ನೊಂದು ಹೆಸರೇ ಸಂಗೊಳ್ಳಿ ರಾಯಣ್ಣ ಎಂದರೆ ಎಂತವರನ್ನು ಬಡಿದೆಬ್ಬಿಸುವುದು. ಇಂತವರನ್ನು ಪಡೆದ ನಾವೇ ಧನ್ಯರು.

ನನ್ನ ಕ್ಷೇತ್ರದ ಅಭಿವೃದ್ಧಿಗೆ ಮತ್ತು ನಮ್ಮ ಸಮಸ್ತ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮನಸ್ಥಿತಿಯುಳ್ಳ ನಾನು ಎಂದು ಚಿಂತಿಸದ, ಎಲ್ಲಿಯೂ ಹೇಳದ, ಎಲ್ಲಿಯೂ ಬಳಸದ ಪದಗಳನ್ನು ಸೃಷ್ಟಿಸಿ, ಅದಕ್ಕೊಂದು ವ್ಯವಸ್ಥಿತ ರೂಪ ನೀಡಿ ವಿಷ ಹರಡುವ ವಿಕೃತ ಮನೋಸ್ಥಿತಿಗಳ ತಂಡವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಕಾರ್ಯಪ್ರವೃತ್ತವಾಗಿದೆ. ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೊದಿಕೆಯಲ್ಲಿ, ವಿಕೃತ ಅವಹೇಳನಕಾರಿ ಮತ್ತು ಅಸಭ್ಯ ರೂಪದಲ್ಲಿ ಜನರಿಗೆ ತಲುಪಿಸುವ ಕೆಲಸವನ್ನು, ಈ ವ್ಯಕ್ತಿಗಳು ಮಾಡುತ್ತಿರುವುದು ಕಂಡು ಬಂದಿದೆ. ಸಾಮಾಜಿಕ ಸ್ವಾಸ್ಥ್ಯಕ್ಕಾಗಿ, ಜನರ ಹಕ್ಕುಗಳ ಮತ್ತು ವೈಯುಕ್ತಿಕ ಸ್ವಾತಂತ್ರ್ಯದ ರಕ್ಷಣೆಗಾಗಿ ಈ ದುಷ್ಟ-ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಇಂದು ಬಹಳ ಅನಿವಾರ್ಯ ಮತ್ತು ಅವಶ್ಯಕತೆಯಾಗಿದೆ. ಇದು ಕೂಡ ರಾಜ್ಯ ಚುನಾವಣೆಯ ಸಂದರ್ಭದಲ್ಲಿಯೇ ಸೃಷ್ಟಿಯಾಗುತ್ತಿರುವುದು ಇವರ ಕಾರ್ಯ ಸೂಚಿ ಏನೆಂದು ಅರಿಯಬಹುದಾಗಿದೆ. ಕೆಲವು ಮುಗ್ಧ ಭಾಂದವರು ಈ ಸುಳ್ಳು ವದಂತಿಗಳಿಗೆ ಬಲಿಯಾಗುವ ಸಂದರ್ಭವು ಉಂಟು.

ಇಂತಹ ಕೆಲವು ಸಮಾಜ-ವಿರೋಧಿ ವ್ಯಕ್ತಿಗಳ ವಿವರಗಳು ನಮಗೆ ಲಭ್ಯವಾಗಿದ್ದು, ಈ ವ್ಯಕ್ತಿಗಳು ಫೇಸ್ ಬುಕ್ ಮತ್ತು ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲ-ತಾಣಗಳಲ್ಲಿ ಅವಹೇಳನಕರ ಹೇಳಿಕೆಗಳನ್ನು ನೀಡಿದ್ದು, ಸುಳ್ಳು ಸುದ್ಧಿ ಸೃಷ್ಟಿಸಿ ಸಮಾಜದಲ್ಲಿ ವಿವಿಧ ಸಮುದಾಯಗಳ ನಡುವೆ ಇರುವ ಸಾಮರಸ್ಯ ಕೆಡಿಸುತ್ತಿದ್ದಾರೆ. ಜನತೆಯನ್ನು ದಾರಿ ತಪ್ಪಿಸಲು ಸೋಗಲಾಡಿ ಸಿದ್ಧ ಸರಕಾರವೇ ಇಂತಹ ವ್ಯಕ್ತಿಗಳ ಹಿಂದೆ ನಿಲ್ಲುತ್ತಿರುವುದರಿಂದ ನಾನು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಸರ್ಕಾರವೇ ನಮ್ಮದು ಎಂದು ಅಹಂನಿಂದ ವರ್ತಿಸುತ್ತಿರುವ ಈ ಮೂರ್ಖಶಿಖಾಮಣಿಗಳಿಗೆ ಕಾನೂನಿನ ರುಚಿ ತೋರಿಸಲೇಬೇಕಾದ ಅನಿವಾರ್ಯತೆ ಇಂದಿನ ತುರ್ತು ಅಗತ್ಯಗಳಲ್ಲಿ ಒಂದು. ಈ ಶತಮೂರ್ಖರು ಎಷ್ಟೇ ದೊಡ್ಡವರಾದರು ಸಹ ಅವರ ಬಗ್ಗೆ ಕ್ರಮ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ.

ಸಾಮಾಜಿಕ ಜಾಲ-ತಾಣಗಳಲ್ಲದೆ ಬೇರೆ-ಬೇರೆ ವೇದಿಕೆಗಳಲ್ಲಿ, ಜನತೆಯನ್ನು ದಾರಿ ತಪ್ಪಿಸುತ್ತಿರುವ ಎಡ-ಬಿಡಂಗಿಗಳನ್ನು ಸಹ ನ್ಯಾಯಾಲಯಕ್ಕೆ ಎಳೆಯುತ್ತಿದ್ದೇನೆ. ಜನರ ತೆರಿಗೆ ಹಣವನ್ನು ನೆಕ್ಕುತ್ತಿರುವ ಸಿದ್ಧನ ಕೃಪಾ-ಪೋಷಿತ ಗಂಜಿ ಗಿರಾಕಿಗಳಿಗೆ ಸಮಾಜ ಒಡೆಯುವ ಕೃತ್ಯಕ್ಕೆ ತಡೆ ಹಾಕಲೇಬೇಕಿದೆ. ಮುಂದೆ ಇಂತಹ ಕೃತ್ಯಗಳಲ್ಲಿ ತೊಡಗುವವರಿಗೆ ಇದೊಂದು ಮುನ್ನೆಚ್ಚರಿಕೆಯಾಗಲಿ.

 

Leave a Reply

Your email address will not be published. Required fields are marked *