ಸುರೇಶ್ ರೈನಾ ಸಿಕ್ಸರ್ ಬಾಲ್ 6 ವರ್ಷದ ಬಾಲಕನ ಮೇಲೆ ಬಿತ್ತು!

ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ಹೊಡೆದ ಸಿಕ್ಸರ್ ಬಾಲ್ ಮೈಮೇಲೆ ಬಿದ್ದು ಬಾಲಕನೊಬ್ಬ ಗಾಯಗೊಂಡಿದ್ದಾನೆ.

6 ವರ್ಷದ ಬಾಲಕ ಸತೀಶ್ ನಿನ್ನೆ ಇಂಗ್ಲೆಂಡ್ ವಿರುದ್ಧದ ಪಂದ್ಯ ನೋಡಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‍ಗಳಲ್ಲಿ 202 ರನ್ ಗಳಿಸಿತ್ತು. ಈ ಇನ್ನಿಂಗ್ಸ್‍ ನಲ್ಲಿ ಸುರೇಶ್ ರೈನಾ ಬಾರಿಸಿದ ಸಿಕ್ಸರ್‍ಗೆ ಬಾಲ್ ಕ್ರೀಡಾಂಗಣದ ನಡುವೆ ನುಗ್ಗಿತು. ಬಾಲ್ ಬಾಲಕನ ತೊಡೆಯ ಭಾಗಕ್ಕೆ ತಾಗಿತ್ತು. ತಕ್ಷಣ ಕ್ರೀಡಾಂಗಣದಲ್ಲೇ ಹಾಸ್‍ಮ್ಯಾಟ್ ಆಸ್ಪತ್ರೆ ವೈದ್ಯರು ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿದರು.

ಬಾಲಕನಿಗೆ ಕ್ರೀಡಾಂಗಣದಲ್ಲೇ ಇರುವ ಕೆಎಸ್‍ಸಿಎ ಮೆಡಿಕಲ್ ಸೆಂಟರ್‍ನಲ್ಲಿ ಹಾಸ್‍ಮ್ಯಾಟ್ ಆಸ್ಪತ್ರೆಯ ಡಾ.ಥಾಮಸ್ ಚಾಂಡಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಇದಾದ 10 ನಿಮಿಷಗಳಲ್ಲೇ ಬಾಲಕನನ್ನು ಡಿಸ್ಚಾರ್ಜ್ ಮಾಡಿದ್ದಾರೆ ಎಂದು ಹಾಸ್‍ಮ್ಯಾಟ್ ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆಯೂ ಆಗಿತ್ತು!: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಪ್ರೇಕ್ಷಕರಿಗೆ ಗಾಯವಾಗಿದ್ದು ಇದೇ ಮೊದಲೇನಲ್ಲ. ಈ ಹಿಂದೆ 2012ರ ಏಪ್ರಿಲ್ 17ರಂದು ನಡೆದಿದ್ದ ಐಪಿಎಲ್ ಟಿ20 ಪಂದ್ಯದಲ್ಲಿ ಕ್ರಿಸ್ ಗೇಲ್ ಬ್ಯಾಟಿಂಗ್ ಅಬ್ಬರಕ್ಕೆ 11 ವರ್ಷದ ಬಾಲಕಿ ಟಿಯಾ ಭಾಟಿಯಾ ಎಂಬಾಕೆಯ ಮೂಗಿಗೆ ಗಾಯವಾಗಿತ್ತು. ಅಂದು ಪುಣೆ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ರಿಸ್ ಗೇಲ್ ರಾಯಲ್ ಚಾಲೆಂಜರ್ಸ್ ಪರ ಆಟವಾಡುತ್ತಿದ್ದರು.

ಪಂದ್ಯದ ಬಳಿಕ ವಿಷಯ ತಿಳಿದ ಕ್ರಿಸ್ ಗೇಲ್ ತಕ್ಷಣ ಬಾಲಕಿ ದಾಖಲಾಗಿದ್ದ ಮಲ್ಯ ಆಸ್ಪತ್ರೆಗೆ ತೆರಳಿ ಬಾಲಕಿಯ ಯೋಗ ಕ್ಷೇಮ ವಿಚಾರಿಸಿದ್ದರು.

You might also like More from author

Leave A Reply

Your email address will not be published.

badge