Monday, 25th June 2018

Recent News

ಗಣಪತಿ ಕೇಸ್: ಸುಪ್ರೀಂ ನ್ಯಾಯಮೂರ್ತಿಗಳ ಪ್ರಶ್ನೆಗಳಿಗೆ ಸರ್ಕಾರಿ ವಕೀಲರು ಸುಸ್ತು: ಕಲಾಪದ ಪೂರ್ಣ ವರದಿ ಇಲ್ಲಿದೆ

ನವದೆಹಲಿ: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ನ್ಯಾ, ಉದಯ ಲಲಿತ್, ನ್ಯಾ ಆದರ್ಶಕುಮಾರ್ ನೇತೃತ್ವದ ದ್ವಿಸದಸ್ಯ ಪೀಠದಿಂದ ಮಹತ್ವದ ಆದೇಶ ಪ್ರಕಟವಾಗಿದೆ.

ವಿಚಾರಣೆ ವೇಳೆ ಪೀಠ ಸರ್ಕಾರಿ ವಕೀಲರಿಗೆ ಪ್ರಶ್ನೆಗಳನ್ನು ಕೇಳಿತ್ತು. ಆತ್ಮಹತ್ಯೆ ಗೆ ಬಳಸಿದ ವಸ್ತುವಿನ ಬಗ್ಗೆ ಸರ್ಕಾರದ ಪರ ವಕೀಲರು ಸ್ವಷ್ಟ ಮಾಹಿತಿ ನೀಡಲಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವ ಮೊದಲೇ ಸಿಐಡಿ ತನಿಖೆ ಪೂರ್ಣಗೊಳಿಸಿ ವರದಿ ನೀಡಿದ್ದು ಹೇಗೆ ಮತ್ತು ಯಾಕೆ? ಆತ್ಮಹತ್ಯೆಗೆ ಬಳಸಿದ ಸಾಧನ ಯಾವುದು ಎಂದು ಪ್ರಶ್ನಿಸಿದ ಪೀಠ ಸಿಐಡಿ ತನಿಖೆಯಲ್ಲಿ ಗೊಂದಲವಿದೆ ಎಂದು ತೀರ್ಮಾನಿಸಿ ಸಿಬಿಐ ತನಿಖೆಗೆ ಆದೇಶಿಸಿದೆ.

ಸರ್ಕಾರಿ ವಕೀಲರಿಗೆ ಪ್ರಶ್ನೆಗಳ ಸುರಿಮಳೆ:
ಸಿಐಡಿ ವರದಿಯಲ್ಲಿ ಗೊಂದಲವಿದ್ದು ಗುಂಡು ಹಾರಿದ ಬಗ್ಗೆ ಅನುಮಾನವಿದೆ. ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳ ಬಹುದಿತ್ತು. ಮಾಡಿಕೊಳ್ಳಲಿಲ್ಲ ಯಾಕೆ? ಗಣಪತಿ ಆತ್ಮಹತ್ಯೆ ಗೆ ಬಳಸಿದ ವಸ್ತು ಯಾವುದು? ರಿವಾಲ್ವರ್ ಇದ್ದರೂ ನೇಣು ಬಿಗಿದುಕೊಳ್ಳಲು ಕಾರಣವೇನು? ಬದುಕಿದ ಕೊನೆ ಸಮಯದಲ್ಲಿ ಯಾರನ್ನು ಭೇಟಿಯಾಗಿದ್ದರು? ಅವರನ್ನ ಸಂದರ್ಶನ ನಡೆಸಿದ ವರದಿಗಾರ ಯಾರು, ಹೇಗೆ ಪರಿಚಯ? ಆತ್ಮಹತ್ಯೆ ಹತ್ಯೆ ಬಳಿಕ ಮೊದಲು ನೋಡಿದವರು ಯಾರು? ಜೊತೆಗೆ ಒಳಗೆ ಮೃತ ದೇಹ ಇರುವ ಬಗ್ಗೆ ಹೇಗೆ ಗೊತ್ತಾಯಿತು ಎಂದು ಪ್ರಶ್ನಿಸಿತು.

ಗಂಭೀರ ಸಂದರ್ಶನದ ಬಳಿಕವೂ ವರದಿಗಾರ ಗಣಪತಿಯ ಸಂಬಂಧಿಕರಿಗೆ ಯಾಕೆ ಮಾಹಿತಿ ಕೊಡಲಿಲ್ಲ ಎಂದು ಪ್ರಶ್ನಿಸಿತು. ಆತ್ಮಹತ್ಯೆಗೆ ಬಳಸಿದ ವಸ್ತು ಯವುದು ಎಂದು ಕೇಳಿದ್ದಕ್ಕೆ ಒಮ್ಮೆ ಹಸಿರು ಬಣ್ಣದ ನೈಲಾನ್ ಬಟ್ಟೆ ಇನ್ನೊಮ್ಮೆ ಚರ್ಮದ ಬೆಲ್ಟ್ ಎಂದು ಸರ್ಕಾರಿ ವಕೀಲರು ಉತ್ತರಿಸಿದರು. ಕೂಡಲೇ ಜಡ್ಜ್ ಆ ವಸ್ತು ಅಲ್ಲಿ ದೊರಕ್ಕಿದ್ದು ಹೇಗೆ? ಸಾಮಾನ್ಯವಾಗಿ ಆ ವಸ್ತು ಬೇಗ ಸಿಗುವುದಿಲ್ಲ. ಮೊದಲೇ ಪ್ಲಾನ್ ಮಾಡಲಾಗಿತ್ತಾ ಎಂದು ಪ್ರಶ್ನಿಸಿದರು.

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಸರ್ವಿಸ್ ರಿವಾಲ್ವರ್ ನಿಂದ ಎರಡು ಬುಲೆಟ್ ಹೊರ ಬಂದಿದ್ದು ಹೇಗೆ? ಒಂದು ವೇಳೆ ಕೊಲೆ ಬಂದಾಗ ಸ್ವಯಂ ರಕ್ಷಣೆಗೆ ಗಣಪತಿ ಅವರೇ ಶೂಟ್ ಮಾಡಿರಬಹುದಲ್ಲವೇ? ಒಂದು ಬುಲೆಟ್ ಗೋಡೆಯಲ್ಲಿ ಇನ್ನೊಂದು ಬುಲೆಟ್ ಹಾಸಿಗೆಯಲ್ಲಿ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆಗಳನ್ನು ಕೋರ್ಟ್ ಕೇಳಿತು. ಈ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡುವಲ್ಲಿ ಸರ್ಕಾರಿ ವಕೀಲರು ವಿಫಲರಾದರು.

ಸರ್ಕಾರಿ ವಕೀಲರ ಉತ್ತರ ಹೀಗಿತ್ತು:
ಮಂಗಳೂರಿನಲ್ಲಿ ನಡೆದ ಚರ್ಚ್ ಗಲಾಟೆಯಲ್ಲಿ ಗಣಪತಿ ಅವರ ಪಾತ್ರವಿತ್ತು. ಅಷ್ಟೇ ಅಲ್ಲದೇ ಅವರನ್ನು ವರ್ಗಾವಣೆ ಮಾಡಿದ ವಿಚಾರದಲ್ಲಿ ನೊಂದಿದ್ದರು. ಈ ಮಧ್ಯೆ ಕುಟುಂಬ ಸಮಸ್ಯೆ ಇತ್ತು. ಹೀಗಾಗಿ ಗಣಪತಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ವರ್ಗಾವಣೆ ವಿಚಾರದಲ್ಲಿ ನೊಂದಿದ್ದ ಕಾರಣ ತನ್ನ ವರ್ಗಾವಣೆಗೆ ಕಾರಣರಾದವರ ಹೆಸರನ್ನು ಪ್ರಸ್ತಾಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದರು. ಈ ಉತ್ತರಕ್ಕೆ ನ್ಯಾ.ಉದಯ್ ಲಲಿತ್ ಅವರು ಬೇರೆಯವರು ಹೇಳಿದ್ದಾರೆ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರುವುದು ಎಷ್ಟು ಸರಿ? ಮಾನಸಿಕ ಖಿನ್ನತೆ ಒಳಗಾದ ವ್ಯಕ್ತಿಯನ್ನು ಪರೀಕ್ಷೆ ಮಾಡಿದರೆ ಮಾತ್ರ ಅವರಿಗೆ ಏನಾಗಿದೆ ಎನ್ನುವುದನ್ನು ತಿಳಿಯಬಹುದು. ಏನು ಪರೀಕ್ಷೆಗೆ ಮಾಡದೇ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತೀರ್ಮಾನಿಸಿ ಹೇಗೆ ವರದಿ ನೀಡುತ್ತೀರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

ಮತ್ತೆ ವಿಚಾರಣೆ: ಸಚಿವ ಕೆಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ, ಎಎನ್‍ಎಸ್ ಪ್ರಸಾದ್‍ಗೆ ಅಲ್ಲದೇ ಸಂದರ್ಶನದಲ್ಲಿ 15 ಜನರ ಹೆಸರನ್ನು ಗಣಪತಿ ಪ್ರಸ್ತಾಪಿಸಿದ್ದರು. ಹೀಗಾಗಿ ಈ ವಿಡಿಯೋದಲ್ಲಿ ಪ್ರಸ್ತಾಪವಾಗಿರುವ ಎಲ್ಲ ಐಪಿಎಸ್ ಅಧಿಕಾರಿಗಳನ್ನು ರಾಜಕಾರಣಿಗಳನ್ನು ಸಿಬಿಐ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ಏನಿದು ಪ್ರಕರಣ? 2016 ಜುಲೈ 7 ರಂದು ಡಿವೈಎಸ್ಪಿ ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಆತ್ಮಹತ್ಯೆ ಶರಣಾಗುವ ಮುನ್ನ ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಮುಂದೆ ನನಗೆ ಏನಾದ್ರೂ ಆದರೆ ಅದಕ್ಕೆ ಸಚಿವ ಕೆಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಅಶಿತ್ ಮೋಹನ್ ಪ್ರಸಾದ್ ಮತ್ತು ಪ್ರಣಬ್ ಮೊಹಂತಿ ಕಾರಣ ಎಂದು ನೇರವಾಗಿ ಆರೋಪಿಸಿದ್ದರು. ಈ ಸಂದರ್ಶನ ನೀಡಿದ ಬಳಿಕ ಸಂಜೆ ಮಡಿಕೇರಿ ನಗರದ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದರು. ಈ ಪ್ರಕರಣದ ತನಿಖೆಯನ್ನು ನಡೆಸಿದ ಸಿಐಡಿ ಸಚಿವ ಜಾರ್ಜ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಬಿ ರಿಪೋರ್ಟ್ ಸಲ್ಲಿಸಿ ಕ್ಲೀನ್ ಚಿಟ್ ನೀಡಿತ್ತು.

ಸಿಐಡಿ ವರದಿಯಲ್ಲಿ ಸಚಿವ ಜಾರ್ಜ್ ಗೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ತನಿಖೆಗೆ ಆಗ್ರಹಿಸುವಂತೆ ಗಣಪತಿ ತಂದೆ ಕುಶಾಲಪ್ಪ ಈ ಹಿಂದೆ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ನ್ಯಾ.ಎಸ್.ಅಬ್ದುಲ್ ನಜೀರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕುಶಾಲಪ್ಪ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು.

ದಾಖಲೆಗಳು ನಾಶ: ಗಣಪತಿ ಪ್ರಕರಣಕ್ಕೆ ಒಂದು ವರ್ಷ ಕಳೆಯುತ್ತಿದ್ದಂತೆ ರಾಷ್ಟ್ರೀಯ ಸುದ್ದಿ ವಾಹಿನಿ ಟೈಮ್ಸ್ ನೌ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಾಕ್ಷ್ಯ ನಾಶ ಮಾಡಿರುವ ಬಗ್ಗೆ ಉಲ್ಲೇಖ ಇರುವುದನ್ನು ಬಹಿರಂಗಪಡಿಸಿತ್ತು. ಆತ್ಮಹತ್ಯೆ ಮಾಡಿಕೊಂಡ ದಿನಾಂಕದ ಬಳಿಕ ಹಾಲಿ ಮಂತ್ರಿ, ಮಾಜಿ ಮಂತ್ರಿ, ಹಾಲಿ ಶಾಸಕರು, ಕೇಂದ್ರ ಸಚಿವರ ಸಂಬಂಧಿ, ಮುಖಂಡರು, ಇಬ್ಬರು ಪೊಲೀಸ್ ಅಧಿಕಾರಿಗಳ ಕರೆ ದಾಖಲೆ, ಮೊಬೈಲ್ ದಾಖಲೆ ನಾಶ ಮಾಡಿರುವುದು ಹಾಗೂ ಕಂಪ್ಯೂಟರ್ ದಾಖಲೆ ನಾಶ ಮಾಡಿರೋದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಐಡಿ ಫೊರೆನ್ಸಿಕ್ ವರದಿಯನ್ನು ತನಿಖೆ ವೇಳೆ ಪರಿಗಣಿಸಿದೇ ಸಚಿವ ಜಾರ್ಜ್ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಕ್ಲೀನ್ ಚೀಟ್ ನೀಡಿದೆ. ಈ ವೇಳೆ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳನ್ನು ವಾಹಿನಿ ಮಾತನಾಡಿಸಿತ್ತು. ಜಗನ್ ಬೆಳ್ಳಿಯಪ್ಪ ಮಾತನಾಡಿ, ಪೊಲೀಸ್ ಅಧಿಕಾರಿಗಳು ನಮ್ಮ ಜೊತೆ ಜಾಸ್ತಿ ಪ್ರಶ್ನೆ ಕೇಳಿಲ್ಲ. ಕೆಲ ಪ್ರಶ್ನೆ ಕೇಳಿದರು. ಏನು ಪ್ರಶ್ನೆ ಕೇಳಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಕೊನೆಗೆ ಖಾಲಿ ಬಿಳಿ ಹಾಳೆಯಲ್ಲಿ ಸಹಿ ಹಾಕಲು ಹೇಳಿದರು. ನಾವು ಸಹಿ ಹಾಕಿದ್ವಿ ಎಂದು ತಿಳಿಸಿದ್ದಾರೆ.

ಏನೇನು ಡಿಲೀಟ್ ಆಗಿದೆ?: 100 ಇಮೇಲ್, 2699 ವರ್ಡ್ ಫೈಲ್, 910 ಎಂಎಸ್ ಎಕ್ಸೆಲ್ ಫೈಲ್, 145 ಪಿಡಿಎಫ್ ಫೈಲ್, 2500 ಇಮೇಜ್ ಫೈಲ್, 331 ಪಿಪಿಟಿ ಫೈಲ್, 791 ಟೆಕ್ಸ್ಟ್ ಫೈಲ್, 352 ಕಾಂಟಾಕ್ಟ್ , 52 ಮೆಸೇಜ್‍ಗಳು ಡಿಲೀಟ್ ಆಗಿದೆ ಎಂದು ವಾಹಿನಿ ವರದಿ ಪ್ರಸಾರಿಸಿತ್ತು.

ತಕರಾರು ಅರ್ಜಿ ಸಲ್ಲಿಸಿರಲಿಲ್ಲ: ಸಚಿವ ಜಾರ್ಜ್ ಅವರಿಗೆ ಸಿಐಡಿ ನೀಡಿರುವ ಬಿ ರಿಪೋರ್ಟ್ ಅನ್ನು ಗಣಪತಿ ಅವರ ಪುತ್ರ ನೇಹಾಲ್ ಒಪ್ಪಿಕೊಂಡಿದ್ದರು. ಸಿಐಡಿ ಸಲ್ಲಿಸಿದ ಬಿ ರಿಪೋರ್ಟ್ ಗೆ ಗಣಪತಿ ಪುತ್ರ ಯಾವುದೇ ತಕರಾರು ಅರ್ಜಿ ಸಲ್ಲಿಸಿರಲಿಲ್ಲ.

Leave a Reply

Your email address will not be published. Required fields are marked *