Thursday, 19th April 2018

ಮಹಿಳೆಯರಿಗೆ ಮಾದರಿಯಾದ್ರು ಹುಬ್ಬಳ್ಳಿಯ ಈ ಮಹಿಳಾ ಬಸ್ ಡ್ರೈವರ್!

– ವಾಯವ್ಯ ಸಾರಿಗೆ ಸಂಸ್ಥೆಯ ಮೊದಲ ಮಹಿಳಾ ಬಸ್ ಚಾಲಕಿಯಾಗಿರೋ ಶ್ರೀದೇವಿ

ಹುಬ್ಬಳ್ಳಿ: ಹೆಣ್ಣು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಈ ಯುವತಿಯೇ ಸಾಕ್ಷಿ. ಗ್ರಾಮೀಣ ಪ್ರದೇಶದಲ್ಲಿ ಇದ್ದುಕೊಂಡು ಹತ್ತಾರು ಸಮಸ್ಯೆಗಳ ನಡುವೆ ಯಾವುದಕ್ಕೂ ಅಂಜದೆ ಮುಜುಗರವನ್ನು ಮಾಡಿಕೊಳ್ಳದೇ ಕಷ್ಟ ಪಟ್ಟು ಡ್ರೈವಿಂಗ್ ಕಲಿತಿದ್ದಾರೆ.

ಕಾಲ, ಸಮಾಜ, ಜನಜೀವನ ಹೀಗೆ ಎಲ್ಲವೂ ಬದಲಾದಂತೆ ಮಹಿಳೆಯರು ಕೂಡಾ ಬದಲಾಗಿದ್ದಾರೆ. ಬದಲಾದ ಇಂದಿನ ಜಗತ್ತಿನಲ್ಲಿ ಪುರುಷರಷ್ಟೇ ನಾವು ಸಮಾನರು ಎನ್ನುತ್ತಾ ಎಲ್ಲಾ ಕ್ಷೇತ್ರಗಳಲ್ಲೂ ಪಾರುಪತ್ಯವನ್ನು ಮೆರೆಯುತ್ತಿದ್ದಾರೆ. ಈ ಮಾತಿಗೆ ಸಾಕ್ಷಿ ಬಸ್ ಡ್ರೈವ್ ಮಾಡುತ್ತಿರುವ 28 ವರ್ಷದ ಶ್ರೀದೇವಿ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರು ಗ್ರಾಮದ ನಿವಾಸಿಯಾಗಿರೋ ಇವರ ತಂದೆ-ತಾಯಿಗೆ ಮೂವರು ಮಕ್ಕಳು. ಅವರಲ್ಲಿ ಕೊನೆಯ ಮಗಳು ಶ್ರೀದೇವಿ. ಇವರ ತಂದೆ-ತಾಯಿಗೆ ಗಂಡು ಮಕ್ಕಳಿಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು. ಹೀಗಾಗಿ ಅದನ್ನೇ ಸವಾಲಾಗಿ ಸ್ವೀಕರಿಸಿದ ಶ್ರೀದೇವಿ, ಏನಾದರೂ ಸಾಧನೆ ಮಾಡಬೇಕು ಎಂದು ಬಸ್ ಡ್ರೈವಿಂಗ್ ಕಲಿತರು. ಹಿಂದೆ ಗುರುವಿಲ್ಲವಾದ್ರೂ ಮುಂದೆ ಗುರಿಯನ್ನು ಇಟ್ಟುಕೊಂಡು ಹೊರಟ ಶ್ರೀದೇವಿಗೆ ಖಾಸಗಿ ಸಾರಿಗೆ ಸಂಸ್ಥೆ ಕೂಡ ಒಂದು ಅವಕಾಶ ನೀಡಿತ್ತು. ನಂತರ 6-7 ವರುಷಗಳ ಕಾಲ ಖಾಸಗಿ ಬಸ್ ಸಂಸ್ಥೆಯಲ್ಲಿ ಬಸ್ ಚಾಲನೆ ಮಾಡಿದ್ರು. ಸದ್ಯ ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಡ್ರೈವರ್ ಮತ್ತು ನಿರ್ವಾಹಕಿಯಾಗಿ ನೇಮಕಗೊಂಡಿದ್ದಾರೆ.

ಗ್ರಾಮೀಣ ಪ್ರದೇಶವಾಗಿದ್ದರೂ ಕೂಡಾ ಹತ್ತಾರು ಸಮಸ್ಯೆ, ಮುಜುಗರ, ಸಂಕೋಚ, ಆರಂಭದಲ್ಲಿ ಡ್ರೈವಿಂಗ್ ಕಲಿಸುವವರು ಇಲ್ಲ ಇಂತಹ ಪರಿಸ್ಥಿತಿಯಲ್ಲಿ ನಗರಕ್ಕೆ ಕೈಯಲ್ಲೊಂದು ಬಯೋಡಾಟಾ ಹಿಡಿದುಕೊಂಡು ಬಂದ ಈ ಶ್ರೀದೇವಿಗೆ ಖಾಸಗಿ ಸಂಸ್ಥೆ ಅವಕಾಶವನ್ನು ನೀಡಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಕಷ್ಟ ಪಟ್ಟು ತರಬೇತಿಯನ್ನು ಪಡೆದುಕೊಂಡ ಶ್ರೀದೇವಿ, ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಮೊದಲ ಮಹಿಳಾ ಬಸ್ ಚಾಲಕಿ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ. ಇದೀಗ ಇವರ ಈ ಸಾಧನೆಯನ್ನು ಕಂಡು ಜನ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಗರ ಪ್ರದೇಶವೆಂದರೆ ಅಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್, ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ಸ್ವಲ್ಪ ಯಾಮಾರಿದರೂ ಸಾಕು ಅಪಘಾತಗಳಾಗುತ್ತವೆ. ಎಷ್ಟೇ ಜಾಗರೂಕತೆಯಿಂದ ಇದ್ದರೂ ಕೂಡಾ ಭಯ ಇದ್ದೇ ಇರುತ್ತದೆ. ಇಂಥಹ ಪರಸ್ಥಿತಿಯಲ್ಲಿ ಶ್ರೀದೇವಿ ಅವರ ಬಸ್ ಚಾಲನೆಯನ್ನು ನೋಡುತ್ತಿದ್ದರೆ ಅಚ್ಚರಿ ಎನಿಸುತ್ತದೆ. ಮಹಿಳೆ ಮನಸ್ಸು ಮಾಡಿದರೆ ಏನಾದರೂ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಕೊಟ್ಟಿರುವ ಶ್ರೀದೇವಿಯವರು ನಿಜಕ್ಕೂ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *