Wednesday, 23rd May 2018

Recent News

ಕಾಲಭೈರವನ ಸನ್ನಿಧಿಯಲ್ಲಿ ರೆಬೆಲ್ ಶಾಸಕರಿಂದ ಅಮಾವಾಸ್ಯೆ ಪೂಜೆ

ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ನಂತರ ಇದೀಗ ಜೆಡಿಎಸ್ ಬಂಡಾಯ ಶಾಸಕರಾದ ಚಲುವರಾಯಸ್ವಾಮಿ, ರಮೇಶ್‍ಬಾಬು ಬಂಡಿಸಿದ್ದೇಗೌಡ ಹಾಗೂ ಬಾಲಕೃಷ್ಣ ಆದಿಚುಂಚನಗಿರಿ ಕಾಲಭೈರವೇಶ್ವರ ಕ್ಷೇತ್ರಾದಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಆಗಮಿಸಿರುವ ಜೆಡಿಎಸ್ ಬಂಡಾಯ ಶಾಸಕರು, ಮೊದಲು ಹೋಮದಲ್ಲಿ ಪಾಲ್ಗೊಂಡ್ರು. ಸ್ವತಃ ನಿರ್ಮಲಾನಂದನಾಥ ಸ್ವಾಮೀಜಿಗಳೇ ಮುಂದೆ ನಿಂತು ಪೂಜೆ ನೆರವೇರಿಸಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕ ರೇವಣ್ಣ ದಂಪತಿ ಆಗಮಿಸಿ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಅಮವಾಸ್ಯೆ ಪೂಜೆ ಸಲ್ಲಿಸಿದ್ರು.

ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಸತತ ಮೂರು ಅಮವಾಸ್ಯೆ ಪೂಜೆ ಸಲ್ಲಿಸಿದ್ರೆ ಇಷ್ಟಾರ್ಥ ಸಿದ್ಧಿ ಆಗುತ್ತೆ ಎಂಬ ಪ್ರಬಲವಾದ ನಂಬಿಕೆಯಿದೆ. ಹೀಗಾಗಿ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಮೂವರು ಪ್ರತ್ಯೇಕವಾಗಿ ಪತ್ನಿ ಸಮೇತರಾಗಿ ಆಗಮಿಸಿ ಮೂರು ಅಮವಾಸ್ಯೆ ಪೂಜೆ ನೆರವೇರಿಸಿದ್ರು. ರಾಜ್ಯದ ಜನರಿಗೆ ಒಳಿತಾಗಲಿ, ಜೆಡಿಎಸ್ ಅಧಿಕಾರಕ್ಕೆ ಬರಲಿ ಎಂದು ಕಾಲಭೈರವೇಶ್ವರ ಸ್ವಾಮಿಯಲ್ಲಿ ಕೇಳಿಕೊಂಡಿದ್ರು. ಇದೀಗ ಬಂಡಾಯ ಶಾಸಕರು ತಮ್ಮ ಪತ್ನಿ ಸಮೇತರಾಗಿ ಬಂದು ಪೂಜೆ ಸಲ್ಲಿಸುತ್ತಿದ್ದಾರೆ.

ಈ ಹಿಂದೆ ನಾನು ಜೆಡಿಎಸ್ ಪಕ್ಷಕ್ಕೆ, ವರಿಷ್ಠರಿಗೆ ಅನ್ಯಾಯ ಮಾಡಿಲ್ಲ. ಈ ಬಗ್ಗೆ ಮುಂದೊಂದು ದಿನ ಕಾಲಭೈರವೇಶ್ವರ ಸನ್ನಿಧಿಯಲ್ಲಿ ಪ್ರಮಾಣ ಕೂಡ ಮಾಡುತ್ತೇನೆ ಎಂದು ಚಲುವರಾಯಸ್ವಾಮಿ ಹೇಳಿದ್ರು. ಹೀಗಾಗಿ ಪೂಜೆ ನಂತ್ರ ಚಲುವರಾಯಸ್ವಾಮಿ ಪ್ರಮಾಣ ಮಾಡುತ್ತಾರಾ ಎಂಬ ಕುತೂಹಲವೂ ಮೂಡಿದ್ದು, ಬಂಡಾಯ ಶಾಸಕರ ಪೂಜೆ ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ.

 

Leave a Reply

Your email address will not be published. Required fields are marked *