Friday, 22nd June 2018

Recent News

ಬೀದಿಯಲ್ಲಿ ಅಲ್ಲ, ಕನ್ನಡ ಸಿನಿಮಾಗಳಿಗೆ ಥಿಯೇಟರ್‍ನಲ್ಲಿ ಹೋರಾಟ ಮಾಡ್ಬೇಕು: ಮಿತ್ರ ಬೇಸರ

ಬೆಂಗಳೂರು: ಕನ್ನಡ ಸಿನಿಮಾಗಳಿಗೆ ಹೋರಾಟದ ಮಾಡಬೇಕಾಗಿರುವುದು ಬೀದಿಯಲ್ಲಿ ಅಲ್ಲ. ಥಿಯೇಟರ್ ಗಳಲ್ಲಿ ಹೋರಾಟ ಮಾಡಬೇಕಿದೆ ಎಂದು ರಾಗಾ ಸಿನಿಮಾದ ನಟ ಮಿತ್ರ ಹೇಳಿದ್ದಾರೆ.

ಥಿಯೇಟರ್ ಗಳಲ್ಲಿ ರಾಗಾ ಸಿನಿಮಾವನ್ನು ಎತ್ತಂಗಡಿ ಮಾಡಿದ್ದಕ್ಕೆ ಪಬ್ಲಿಕ್ ಟಿವಿಯಲ್ಲಿ ಬೆಳಗ್ಗೆ ನಡೆದ ವಿಶೇಷ ಜಿಂದಗಿ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವು ನೂರಾರು ಸ್ಕ್ರೀನ್ ಗಳನ್ನು ಕೇಳುತ್ತಿಲ್ಲ. ಕನ್ನಡಿಗರ ಸ್ವಾಭಿಮಾನ ಏನು ಎನ್ನುವುದೇ ಗೊತ್ತಿಲ್ಲ. ಒಂದು ವೇಳೆ ಚಿತ್ರ ಕಳಪೆಯಾಗಿದ್ದರೆ ನಾವು ಕೇಳುತ್ತಿರಲಿಲ್ಲ. ಅದು ನಮ್ಮ ಸ್ವಯಂಕೃತ ಅಪರಾಧವಾಗುತಿತ್ತು. ಆದರೆ ಚಿತ್ರ ನೋಡಿದವರು ಚೆನ್ನಾಗಿದೆ ಎಂದು ಹೇಳಿದ್ದಾರೆ. ಉತ್ತಮವಾಗಿ ಪ್ರದರ್ಶನ ನೀಡುತ್ತಿರುವಾಗಲೇ ಚಿತ್ರವನ್ನು ಎತ್ತಂಗಡಿ ಮಾಡಿದ್ದು ಎಷ್ಟು ಸರಿ ಎಂದು ಅವು ಪ್ರಶ್ನಿಸಿದ್ದಾರೆ.

ಕಲಾವಿದನಿಗೆ ಭಾಷೆಯ ಮಿತಿ ಇಲ್ಲ. ನಾನು ಬಾಹುಬಲಿಯ ವಿರೋಧಿ ಅಲ್ಲ. ಆದ್ರೆ ರಾಗಾ ಚಿತ್ರ ತಮಿಳಿನಲ್ಲಿ ಬರುತ್ತಿದ್ದರೆ ಜನ್ರು ಕ್ಯೂನಲ್ಲಿ ನಿಂತುಕೊಂಡು ಥಿಯೇಟರ್‍ಗೆ ಬರುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಕರ್ನಾಟಕ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಟಿಕೆಟ್ ಗಳಿಗೆ 200 ರೂ. ಗರಿಷ್ಟ ದರವನ್ನು ನಿಗದಿ ಮಾಡಿದ್ದಾರೆ. ಹೀಗಾಗಿ ಥಿಯೇಟರ್‍ಗಳಲ್ಲಿ ಬಾಹುಬಲಿಗೆ ಎಷ್ಟು ಕಲೆಕ್ಷನ್ ಆಗುತ್ತದೋ ಅಷ್ಟೇ ಕಲೆಕ್ಷನ್ ನಿಮ್ಮ ಚಿತ್ರದಿಂದಲೂ ಆಗುತ್ತದೆ ಆದರೂ ಯಾಕೆ ಹೀಗೆ ಎಂದು ಪ್ರಶ್ನಿಸಿದ್ದಕ್ಕೆ, ಈ ಪ್ರಶ್ನೆಯನ್ನು ಬಾಹುಬಲಿ ಬಿಡುಗಡೆಗೆ ವಿರೋಧಿಸಿದ ಕನ್ನಡಪರ ಹೋರಾಟಗಾರರಲ್ಲಿ ಕೇಳಬೇಕು. ಈ ಪ್ರಶ್ನೆಗೆ ಉತ್ತರ ಹೇಳಲು ಕಷ್ಟವಾಗುತ್ತದೆ ಎಂದು ತಿಳಿಸಿದರು.

ರಾಗ ಸಿನಿಮಾ ಥಿಯೇಟರ್ ನಿಂದ ಎತ್ತಂಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್ ಗೆ ನಟ ನಿರ್ಮಾಪಕ ಮಿತ್ರ ಹಾಗೂ ನಿರ್ದೇಶಕ ಪಿ ಸಿ ಶೇಕರ್ ದೂರು ನೀಡಿದ್ದು, ಈಗ ಕೆಲ ಚಿತ್ರಗಳಲ್ಲಿ ಈ ಚಿತ್ರ ಪ್ರದರ್ಶನ ನಡೆಸಲು ಒಪ್ಪಿಗೆ ಸಿಕ್ಕಿದೆ.

ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ಮಿತ್ರ ಅವರು, ನಾನು ಅಳಲನ್ನು ತೋಡಿಕೊಂಡೆ. ಹೀಗಾಗಿ ಈ ಕುರಿತು ನಮಗೆ ಸಾ ರಾ ಗೋವಿಂದು ಸಹಾಯ ಮಾಡಿದ್ದಾರೆ. 4 ಕಡೆಗಳಲ್ಲಿ ಶೋಗಳಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಮಾಧ್ಯಮದವರಿಗೆ, ಸಾರಾ ಗೋವಿಂದು ಅವರಿಗೆ ನನ್ನ ಧನ್ಯವಾದಗಳು. ನಾನು ಅವರಿಗೆ ಚಿರಋಣಿ ಎಂದು ತಿಳಿಸಿದರು.

ರಾಗ ಒಂದು ಒಳ್ಳೆ ಸಿನಿಮಾ ಇದು. ಗೋಪಾಲನ್, ಐನಾಕ್ಸ್, ಮಂತ್ರಿ ಮಾಲ್ ಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಒಪ್ಪಿಗೆ ಸಿಕ್ಕಿದೆ. ನನಗೆ ನಂಬಿಕೆ ಇದೆ ಖಂಡಿತ ಕನ್ನಡಿಗರು ನನ್ನ ಸಿನಿಮಾ ಉಳಿಸುತ್ತಾರೆ. ಸಿಂಗಲ್ ಸ್ಕ್ರೀನ್ ಗಳಲ್ಲಿ ಚಿತ್ರ ಪ್ರದರ್ಶನಕ್ಕೆ ನಾನು ಜಯಣ್ಣ ಅವರ ಜೊತೆ ಮಾತನಾಡುತ್ತೇನೆ ಎಂದು ಮಿತ್ರ ಹೇಳಿದರು.

ಒಬ್ಬ ನಿರ್ದೇಶಕನಿಗೆ ಚಿತ್ರ ದೊಡ್ಡ ಕನಸು. ರಾಗ ಚಿತ್ರ ಈ ರೀತಿ ಆಗಿರುವುದು ಬೇಸರ ತಂದಿದೆ. ಮಾತುಕಥೆಯ ನಂತ್ರ ಚಿತ್ರ ಪ್ರದರ್ಶಿಸಲು ಒಪ್ಪಿಗೆ ಸಿಕ್ಕಿದೆ. ಸಿಂಗಲ್ ಸ್ಕ್ರೀನ್ ಪ್ರದರ್ಶನದ ಬಗ್ಗೆ ಮಾತುಕಥೆ ನಡೆಯುತ್ತಿದೆ ಎಂದು ನಿರ್ದೇಶಕ ಪಿ ಸಿ ಶೇಖರ್ ತಿಳಿಸಿದರು.

ಫಿಲಂ ಚೇಂಬರ್ ಅಧ್ಯಕ್ಷ ಸಾರಾ ಗೋವಿಂದ್ ಮಾತನಾಡಿ, ನಾನು ಯಾವತ್ತೂ ಹಿಂದೆ ಮುಂದೆ ಮಾತನಾಡುವವನಲ್ಲ. ಮಿತ್ರನ ಪ್ರಥಮ ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಪರಭಾಷಾ ವ್ಯಾಮೊಹವೋ ಅಥವಾ ಕನ್ನಡ ಅಭಿಮಾನದ ಕೊರತೆಯೊ ಗೊತ್ತಿಲ್ಲ. ಒಳ್ಳೆಯ ಕನ್ನಡ ಚಿತ್ರಕ್ಕೆ ಪ್ರೇಕ್ಷಕರು ಬರುತ್ತಿಲ್ಲ. ನಾನು ಈ ಕುರಿತು ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತನಾಡುವಾಗ ಕಲೆಕ್ಷನ್ ಇಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ. ಹೀಗಾಗಿ ನಾನು ನಗರದ ಎಲ್ಲ ಮಲ್ಟಿಪ್ಲೆಕ್ಸ್‍ಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ. ಎಲ್ಲರೂ ಈ ಮನವಿಗೆ ಒಂದೊಂದು ಶೋ ಪ್ರದರ್ಶಿಸಲು ಒಪ್ಪಿದ್ದಾರೆ ಎಂದು ಹೇಳಿದರು.

ಬಜೆಟ್‍ನಲ್ಲಿ ಘೋಷಣೆಯಾಗಿರುವ ಮಲ್ಟಿಪ್ಲೆಕ್ಸ್ ಥಿಯೇಟರ್ ಗರಿಷ್ಟ ಟಿಕೆಟ್ ದರ 200 ರೂ. ಯಾವಾಗ ಜಾರಿಯಾಗಲಿದೆ ಎನ್ನುವ ಪ್ರಶ್ನೆಗೆ, ಇಂದು ಅಥವಾ ನಾಳೆ ಯಾವುದೇ ಕ್ಷಣದಲ್ಲಿ ಈ ಅದೇಶ ಜಾರಿಯಾಗಬಹುದು ಎಂದು ಸಾರಾ ಗೋವಿಂದು ತಿಳಿಸಿದರು.

ಇದನ್ನೂ ಓದಿ: ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಟ ಟಿಕೆಟ್ ದರ 200 ರೂ. ಆಗಲು ಕಾರಣ ಏನು?

Leave a Reply

Your email address will not be published. Required fields are marked *