ನಿಮ್ಮನ್ನು ಜೈಲಿಗೆ ಕಳುಹಿಸಿದ್ರೆ ಹೇಗೆ? ಎನ್‍ಜಿಟಿ ಮುಂದೆ ಮಂಡಿಯೂರಿದ ಬಿಬಿಎಂಪಿ

– ಬೆಳ್ಳಂದೂರು ಕೆರೆ ಸುರಕ್ಷತೆಗೆ ಖಡಕ್ ಸೂಚನೆ

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕಿದ್ದ ಬೆಳ್ಳಂದೂರು ಕೆರೆ ಸಮಸ್ಯೆ ಸಂಬಂಧ ಬಿಬಿಎಂಪಿ ಮತ್ತು ಬಿಡಿಎಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಚಳಿಜ್ವರ ಬಿಡಿಸಿದೆ.

ಬೆಳ್ಳಂದೂರು ಕೆರೆಯ ಸುತ್ತಲಿನ ಹೆಚ್ಚು ಮಾಲಿನ್ಯಕಾರಕ ಕೈಗಾರಿಕೆಗಳನ್ನ ತಕ್ಷಣವೇ ಮುಚ್ಚಿ ಅಂತ ಟ್ರಿಬ್ಯೂನಲ್ ಮಧ್ಯಂತರ ಆದೇಶ ನೀಡಿದೆ. ಕೆರೆಗೆ ಬೆಂಕಿಬಿದ್ದ ಪ್ರಕರಣ ಸಂಬಂಧ ಇವತ್ತು ಹಾಜರಾದ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಮತ್ತು ಅಧಿಕಾರಿಗಳಿಗೆ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ತರಾಟೆಗೆ ತೆಗೆದುಕೊಂಡರು.

ನ್ಯಾಯಪೀಠದ ಸುತ್ತೋಲೆ ನಮ್ಮ ವ್ಯಾಪ್ತಿಗೆ ಬರೋದಿಲ್ಲ ಎಂದು ಹೇಳ್ತೀರಾ? ನ್ಯಾಯಾಂಗಕ್ಕೆ ಬೆಲೆ ಕೊಡದ ನಿಮ್ಮನ್ನ ನ್ಯಾಯಾಂಗ ನಿಂದನೆಯಡಿ ಜೈಲಿಗೆ ಕಳುಹಿಸಬಾರದೇಕೆ ಅಂತಾ ಪ್ರಶ್ನಿಸಿದ್ರು. ಜಡ್ಜ್ ಮಾತಿಗೆ ದಂಗಾದ ಅಧಿಕಾರಿಗಳು ಕ್ಷಮೆಯಾಚಿಸಿದ್ರು.

ನಿನ್ನೆಯಷ್ಟೇ ಖಾಸಗಿ ಮಾಧ್ಯಮದಲ್ಲಿ ಬೆಳಂದೂರು ಕೆರೆಯ ಪರಿಸ್ಥಿತಿ ನೋಡಿದ್ದೇವೆ. 3 ಸಾವಿರಕ್ಕೂ ಅಧಿಕ ಕೆರೆಗಳಿಂದ ತಂಪಾಗಿದ್ದ ಬೆಂಗಳೂರು ನಗರ ಈಗ ನಿಮ್ಮಂತವರ ಬೇಜವಾಬ್ದಾರಿಯಿಂದ ಏರ್ ಕಂಡಿಷನರ್ ಬಳಸುವಂತಾಗಿದೆ ಅಂತ ಕಳವಳ ವ್ಯಕ್ತಪಡಿಸಿದ್ರು.

ಕೆರೆ ಅಭಿವೃದ್ಧಿ ಸಮಿತಿ ರಚನೆ ಮಾಡಿ ಒಂದು ತಿಂಗಳ ಒಳಗೆ ಸ್ವಚ್ಛ ಮಾಡಬೇಕು ಅಂತಾ ಎಚ್ಚರಿಕೆ ನೀಡಿ ಮೇ 18ಕ್ಕೆ ವಿಚಾರಣೆ ಮುಂದೂಡಿದ್ರು.

ಎನ್‍ಜಿಟಿ ಮಧ್ಯಂತರ ಆದೇಶದಲ್ಲೇನಿದೆ..?
* ಬಿಬಿಎಂಪಿ, ಬಿಡಿಎ, ಬಿಡಬ್ಲ್ಯುಎಸ್‍ಎಸ್‍ಬಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ನಗರಾಭಿವೃದ್ಧಿ ಪ್ರಾಧಿಕಾರ ಕೆರೆ ಸ್ವಚ್ಚತಾ ಹೊಣೆ ಹೊರಬೇಕು
* ಈ ಎಲ್ಲಾ ಇಲಾಖೆಯ ಒಬ್ಬೂಬ್ಬ ಹೆಚ್ಚುವರಿ ಕಾರ್ಯದರ್ಶಿಗಳಿರುವ ಸಮಿತಿ ರಚಿಸಬೇಕು (ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸಮಿತಿ ಅಧ್ಯಕ್ಷ)
* ಈ ಸಮಿತಿ ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ಪ್ರದೇಶದ ಪರಿಶೀಲನೆ ನಡೆಸಬೇಕು
* ಇಂದಿನಿಂದ ಒಂದು ತಿಂಗಳ ಸಮಯದಲ್ಲಿ ಮಾಲಿನ್ಯ ತಡೆಗಟ್ಟಿ ಕೆರೆ ಸ್ವಚ್ಛ ಮಾಡಬೇಕು
* ಆರು ತಿಂಗಳ ಅವಧಿಯಲ್ಲಿ ಸಂಪೂರ್ಣ ಕೆರೆ ಅಭಿವೃದ್ಧಿಯಾಗಬೇಕು

* ಯಾವುದೇ ಟೆಂಡರ್ ನೀಡದೆ ಖುದ್ದು ಅಧಿಕಾರಿಗಳ ನೇತೃತ್ವದಲ್ಲಿ ಕೆಲಸ ನಡೆಯಬೇಕು (ಕೊಳಚೆ ನೀರನ್ನ ಬೇರ್ಪಡಿಸಿ ಶುದ್ಧನೀರನ್ನ ವಿವಿಧ ಕೆಲಸಗಳಿಗೆ ಬಳಕೆ ಮಾಡಬಹುದು)
* ಅರ್ಪಾಟ್‍ಮೆಂಟ್, ಕಾರ್ಖಾನೆ ತಾಜ್ಯ, ನೀರು ರಾಜಕಾಲುವೆ ಮೂಲಕ ಹರಿಯದಂತೆ ಕ್ರಮ ವಹಿಸಬೇಕು
* ಹೆಚ್ಚು ಮಾಲಿನ್ಯಕಾರಕ ಕಾರ್ಖಾನೆಗಳಿದ್ರೆ ಬೀಗ ಹಾಕಿ, ಅಪಾರ್ಟ್‍ಮೆಂಟ್ ನೀರಿನ ಮಾರ್ಗ ಬದಲಿಸಲು ಎಚ್ಚರಿಸಿ
* ನಿಯಮ ಪಾಲಿಸದಿದ್ದರೆ 5 ಲಕ್ಷ ರೂ. ದಂಡ ಹಾಕಿ
* ಮೇ 18ರ ವಿಚಾರಣೆಗೆ ಬರುವಾಗ ಅದುವರೆಗೂ ತೆಗೆದುಕೊಂಡ ಕ್ರಮದ ಸಂಪೂರ್ಣ ವರದಿ ಸಲ್ಲಿಸಬೇಕು.

You might also like More from author

Leave A Reply

Your email address will not be published.

badge