Tuesday, 23rd January 2018

Recent News

ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಅಣ್ಣನಿಂದಲೇ ತಮ್ಮನ ಕಗ್ಗೊಲೆ!

ಮುಂಬೈ: ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ತಮ್ಮನನ್ನು ಕೊಲೆ ಮಾಡಿದ ಆರೋಪದ ಮೇಲೆ 35 ವರ್ಷದ ಅಣ್ಣನನ್ನು ಪೊಲೀಸರು ಬಂಧಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

ಆರೋಪಿ ಅಜಯ್ ಮುಕ್ವಾನಾ ತನ್ನ ತಮ್ಮ ಮುಕೇಶ್ ಮುಕ್ವಾನನ್ನು ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಅಜಯ್ ನ್ನು ಪೊಲಿಸರು ಬಂಧಿಸಿದ್ದು, ನ್ಯಾಯಾಂಗಬಂಧನಕ್ಕೆ ಒಪ್ಪಿಸಿದ್ದಾರೆ.

ಏನಿದು ಪ್ರಕರಣ?: ಆರೋಪಿ ಅಜಯ್ ಮಕ್ವಾನಾ ಮತ್ತು ತಮ್ಮ ಮುಖೇಶ್ ಮಕ್ವಾನಾ ಮಧ್ಯೆ ಮನೆಯಲ್ಲಿ ವಾಗ್ದಾನ ನಡೆದಿದ್ದೇ ಮುಖೇಶ್ ಕೊಲೆಗೆ ಕಾರಣ ಅಂತ ಭೋವಾಡಾ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.

ಅಜಯ್ ಮದ್ಯವ್ಯಸನಿಯಾಗಿದ್ದು, ಕೆಇಎಂ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ. ಮುಕೇಶ್ ಅನಕ್ಷರಸ್ಥನಾಗಿದ್ದನು. ಹೀಗಾಗಿ ಆತ ಮನೆಯಲ್ಲೇ ಇದ್ದು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು. ಇದರಿಂದ ತಾಯಿಗೂ ಮುಕೇಶ್ ಮೇಲೆ ಜಾಸ್ತಿ ಪ್ರೀತಿ ಇತ್ತು. ಈ ಹಿನ್ನೆಲೆಯಲ್ಲಿ ಮೊದಲೇ ಮದ್ಯ ವ್ಯಸನಿಯಾಗಿದ್ದ ಅಜಯ್ ಕುಡಿದು ಬಂದು ತನ್ನ 75 ವರ್ಷದ ತಾಯಿಯ ಜೊತೆ ಪ್ರತೀದಿನ ಜಗಳವಾಡುತ್ತಿದ್ದನು. ಇದೇ ಕಾರಣಕ್ಕೆ ಅಣ್ಣ- ತಮ್ಮನ ಜೊತೆ ಕೂಡ ಜಗಳವಾಗಿದ್ದು, ಈ ವೇಳೆ ತಾಯಿ ಮುಕೇಶ್ ಜೊತೆ ಸೇರಿ ಅಣ್ಣ ಅಜಯ್‍ಗೆ ಬೈದಿದ್ದಾರೆ.

ಇದ್ರಿಂದ ಕೋಪೋದ್ರಿಕ್ತನಾದ ಅಣ್ಣ ಅಜಯ್ ಅಲ್ಲೇ ಇದ್ದ ಕ್ರಿಕೆಟ್ ಬ್ಯಾಟಿನಿಂದ ತಮ್ಮ ಮುಕೇಶ್ ತಲೆಗೆ ಹೊಡೆದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಮುಕೇಶ್ ಅಲ್ಲೇ ಕುಸಿದುಬಿದ್ದಿದ್ದಾನೆ. ಇದರಿಂದ ಭಯಗೊಂಡ ಆರೋಪಿ ಅಜಯ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಗಂಭೀರ ಗಾಯಗೊಂಡ ಮುಕೇಶ್‍ನನ್ನು ಕೂಡಲೇ ಕೆಇಎಂ ಆಸ್ಪತ್ರೆಗೆ ದಾಖಲಿಸಿದ್ದರೂ, ಅದಾಗಲೇ ಆತ ಮೃತಪಟ್ಟಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದಾಗಿ ಅಜಯ್ ವಿರುದ್ಧ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಜಯ್ ನನ್ನು ಭಾನುವಾರ ಪೊಲೀಸರು ಬಂಧಿಸಿದ್ದು, ಜುಲೈ 7 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *