Friday, 22nd June 2018

Recent News

ಕರ್ನಾಟಕದ 2 ಸಾವಿರ ಕೋಟಿ ರೂ. ಹಗರಣಕ್ಕೆ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಬಲಿ?

ಲಕ್ನೋ: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿಗೆ ಸ್ಫೋಟಕ ತಿರುವು ಸಿಕ್ಕಿದ್ದು, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾವಿರಾರು ಕೋಟಿ ರೂ. ಹಗರಣವನ್ನು ಬಹಿರಂಗಪಡಿಸುವ ಉದ್ದೇಶ ಹೊಂದಿದ್ದರು ಎಂದು ಉತ್ತರ ಪ್ರದೇಶದ ಸಚಿವ ಸುರೇಶ್ ಖನ್ನಾ ಹೇಳಿದ್ದಾರೆ.

ಗುರುವಾರ ಉತ್ತರಪ್ರದೇಶದ ವಿಧಾನಸಭೆ ಕಲಾಪದಲ್ಲಿ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಕುರಿತಂತೆ ಚರ್ಚೆ ನಡೆದಿದ್ದು, ಈ ವೇಳೆ ಸಚಿವರು ಹಗರಣವನ್ನು ಬಯಲಿಗೆಳೆಯುತ್ತಾರೆ ಎಂಬ ನಿಟ್ಟಿನಲ್ಲಿ ಅವರನ್ನು ಕೊಲೆ ಮಾಡಲಾಗಿದೆ ಅನ್ನೋ ಬಾಂಬ್ ಸಿಡಿಸಿದ್ದಾರೆ.

ಸಮಾಜವಾದಿ ಪಕ್ಷದ ನಿತಿನ್ ಅಗರ್‍ವಾಲ್ ಎಂಬವರು ಪ್ರಶ್ನೆಯ ವೇಳೆ ಹೆಚ್ಚಿನ ಭದ್ರೆತೆ ಇರೋ ಪ್ರದೇಶದಲ್ಲಿಯೇ ತಿವಾರಿ ಹತ್ಯೆಯಾಗಿರುವುದರಿಂದ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಎಲ್ಲಿಗೆ ತಲುಪಿದೆ ಅಂತಾ ಕೇಳಿದ್ದಾರೆ. ಇದಕ್ಕೆ ದನಿಗೂಡಿಸಿದ ಸಮಾಜವಾದಿ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ತಿವಾರಿ ಸಾವಿನ ಬಗ್ಗೆ ಧ್ವನಿಯೆತ್ತಿದ್ದಾರೆ.

ಈ ವೇಳೆ ಸ್ಪೀಕರ್, ಈ ಬಗ್ಗೆ ಚರ್ಚಿಸಲು ಇದು ಸಮಯವಲ್ಲ. ದಯವಿಟ್ಟು ಗಲಾಟೆ ಮಾಡದೆ ನಿಮ್ಮ ನಿಮ್ಮ ಸೀಟಿನಲ್ಲಿ ಆಸೀನರಾಗಿ ಅಂತಾ ಹೇಳಿದ್ರು. ಇದ್ರಿಂದ ಕೋಪೋದ್ರಿಕ್ತರಾದ ವಿಪಕ್ಷ ನಾಯಕ ರಾಮ್ ಗೋವಿಂದ್ ಚೌಧರಿ, ಒಬ್ಬ ಐಎಎಸ್ ಅಧಿಕಾರಿಯ ಹತ್ಯೆಯಾಗಿದೆ ಅಂದ್ರೆ ಅದು ಗಂಭೀರ ವಿಷಯವಾಗಿದೆ ಅಂದ್ರು.

ಪ್ರತಿಪಕ್ಷಗಳ ಆರೋಪಕ್ಕೆ ಸಂಸದೀಯ ಸಚಿವ ಸುರೇಶ್ ಕುಮಾರ್ ಖನ್ನಾ ಅವರು, ಅನುರಾಗ್ ತಿವಾರಿ ಅವರ ಮೃತದೇಹದ ಮಣೋತ್ತರ ಪರೀಕ್ಷೆ ನಡೆಸಲಾಗಿದೆ. ಆದರೆ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೃತ ಐಎಎಸ್ ಅಧಿಕಾರಿ ಕರ್ನಾಟಕದಲ್ಲಿ ಒಂದು ದೊಡ್ಡ ಹಗರಣ ಬಯಲಿಗೆಳೆಯಲಿದ್ದರು ಎಂದು ಹೇಳಿದ್ದು ಈಗ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ(36) ಅವರ ಶವ ಉತ್ತರಪ್ರದೇಶದ ಹಜರತ್‍ಗಂಜ್‍ನಲ್ಲಿ ಮೇ 17ರಂದು ಪತ್ತೆಯಾಗಿತ್ತು. ಅನುರಾಗ್ ತಿವಾರಿ ಅವರ ಜನ್ಮದಿನದಂದೇ ಇಲ್ಲಿನ ಮೀರಾ ಬಾಯಿ ಗೆಸ್ಟ್‍ಹೌಸ್ ಬಳಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. 2007ನೇ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ಇವರು ಸದ್ಯ ಆಹಾರ ಸರಬರಾಜು ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ರು. ಉತ್ತರಪ್ರದೇಶದ ಬಾಹ್ರಿಯಾಚ್‍ನಲ್ಲಿ ನೆಲೆಸಿದ್ದು, ಸಾವಿಗೂ ಎರಡು ದಿನಗಳಿಂದ ಮೀರಾಬಾಯಿ ಗೆಸ್ಟ್ ಹೌಸ್‍ನಲ್ಲಿ ತಂಗಿದ್ರು ಎಂದು ವರದಿಯಾಗಿತ್ತು.

Leave a Reply

Your email address will not be published. Required fields are marked *