Thursday, 26th April 2018

Recent News

ಪೋಷಕರು ಬಿಟ್ಟು ಹೋದ ಬುದ್ಧಿಮಾಂದ್ಯ ಮೊಮ್ಮಗನನ್ನು ಕೂಲಿ ಮಾಡಿ ಸಾಕ್ತಿರೋ ಅಜ್ಜಿ- ಚಿಕಿತ್ಸೆಗೆ ಬೇಕಿದೆ ನೆರವು

ವಿಜಯಪುರ: ಹೆತ್ತವರಿಗೆ ಹೆಗ್ಗಣ ಕೂಡ ಮುದ್ದು ಅಂತಾರೆ. ತಂದೆ ತಾಯಿಗೆ ಮಕ್ಕಳು ಹೇಗಿದ್ದರೂ ಅವರೇ ಸರ್ವಸ್ವವಿದ್ದಂತೆ. ಆದ್ರೆ ಮಗಿನಿಗೆ ಫಿಟ್ಸ್ ಇದೆ, ಬುದ್ಧಿಮಾಂದ್ಯನಾಗಿದ್ದಾನೆ ಅಂತಾ ಅಜ್ಜಿ ಹತ್ತಿರ ಮಗನನ್ನು ಬಿಟ್ಟು ತಂದೆ ತಾಯಿ ನಾಪ್ತೆಯಾಗಿದ್ದಾರೆ. ಈಗ ಈ ಬುದ್ಧಿಮಾಂದ್ಯ ಮಗುವಿಗೆ ಅಜ್ಜಿಯೇ ಎಲ್ಲಾ. ಆದ್ರೆ ಆ ಅಜ್ಜಿಯ ಪಾಡು ಮಾತ್ರ ಶೋಚನೀಯ.

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಚಿಮ್ಲಗಿ ಬಿ1 ಪುನರ್ವಸತಿ ಕೇಂದ್ರದಲ್ಲಿರೋ ಬಾಲಕನ ಹೆಸರು ಬಸವರಾಜ. ಇವನು ಹುಟ್ಟಿದ ನಾಲ್ಕು ವರ್ಷಗಳವರೆಗೆ ಎಲ್ಲರಂತೆ ಚೆನ್ನಾಗಿದ್ದ. ಆದ್ರೆ ತದನಂತರ ಇವನಿಗೆ ಫೀಟ್ಸ್ ಬರಲು ಆರಂಭಿಸಿತಂತೆ. ಇದೇ ರೀತಿ ಒಂದು ಬಾರಿ ಫಿಟ್ಸ್ ಬಂದಾಗ ಕೆಳಗೆ ಬಿದ್ದ ನಂತರ ಇವನ ಮೆದುಳಿಗೆ ಪೆಟ್ಟು ಬಿದ್ದಿದ್ದು, ಆಗಿನಿಂದ ಇವನು ಬುದ್ಧಿಮಾಂದ್ಯನಾಗಿದ್ದಾನೆ ಅಂತಾರೆ ಬಸವರಾಜ ಅಜ್ಜಿ ಶಾಂತಾಬಾಯಿ.

ಬಸವರಾಜ ಶಾಂತಾಬಾಯಿಯ ಮಗಳ ಮಗನಾಗಿದ್ದು, ಮಗ ಬುದ್ಧಿಮಾಂದ್ಯನಾದ ನಂತರ ಬಸವರಾಜನ ತಂದೆ ತಾಯಿ ಇಬ್ಬರೂ ಅಜ್ಜಿ ಹತ್ತಿರ ಬಿಟ್ಟು ನಾಪತ್ತೆಯಾಗಿದ್ದಾರೆ. ತಂದೆ ತಾಯಿ ಬಿಟ್ಟು ಹೋದ ಮೇಲೆ ಬಸವರಾಜನನ್ನು ಅಜ್ಜಿ ಶಾಂತಾಬಾಯಿ ಸಾಕಿ ಸಲಹುತ್ತಿದ್ದು, ಬಸವರಾಜನ ದಿನನಿತ್ಯದ ಎಲ್ಲ ಕರ್ಮಾದಿಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಆದ್ರೆ ಶಾಂತಾಬಾಯಿ ಕೂಲಿ ಕಾರ್ಮಿಕರಾಗಿದ್ದು, ಪ್ರತಿನಿತ್ಯ ಕೂಲಿ ಮಾಡಿ ಬಂದರೆ ಇವರ ಜೀವನ ಸಾಗುತ್ತದೆ. ಆದ್ರೆ ಮನೆಯಲ್ಲಿ ಶಾಂತಾಬಾಯಿ ಬಿಟ್ಟರೆ ಬೇರೆ ಯಾರೂ ಇಲ್ಲದ ಕಾರಣ ಕೆಲಸಕ್ಕೆ ಹೋಗುವಾಗ ಮನೆಯ ಹೊರಗಡೆ ಇರುವ ಗಿಡಕ್ಕೆ ಬಸವರಾಜನ ಕಾಲನ್ನ ಸರಪಳಿ ಹಾಕಿ ಕಟ್ಟಿ ಹೋಗುತ್ತಾರೆ. ಕೆಲಸದಿಂದ ಮರಳಿ ಬರುವವರೆಗೂ ಅಕ್ಕಪಕ್ಕದವರಿಗೆ ನೋಡುತ್ತಿರಲು ಹೇಳಿ ಹೋಗುತ್ತಾರೆ. ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಬಸವರಾಜನಿಗೆ ಚಿಕಿತ್ಸೆ ಕೊಡಿಸಲಾಗದೆ ಪರದಾಡುತ್ತಿದ್ದಾರೆ ಅನ್ನೋದು ಸ್ಥಳೀಯರ ಮಾತು.

ಬಸವರಾಜನಿಗೆ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಲ್ಲಿ ಗುಣಮುಖನಾಗಬಹುದೆಂಬುದು ಸ್ಥಳೀಯರ ಅಭಿಪ್ರಾಯ. ಇನ್ನು ಶಾಂತಾಬಾಯಿಗೂ ವಯಸ್ಸಾಗಿದ್ದು, ನಾನು ಇಲ್ಲದೆ ಹೋದರೆ ಬಸವರಾಜನ ಗತಿ ಏನು ಅಂತಾ ಚಿಂತಿಸುತ್ತಿದ್ದಾರೆ. ಬೆಳಕು ಕಾರ್ಯಕ್ರಮದಿಂದಾದರು ಬಸವರಾಜನ ಬಾಳಲ್ಲಿ ಬೆಳಕು ಮರಳಿ ಬರಲಿ ಅನ್ನೋದು ಸ್ಥಳೀಯರ ಆಶಯ.

Leave a Reply

Your email address will not be published. Required fields are marked *