Sunday, 24th June 2018

ಜೇವರ್ಗಿ ತಹಶೀಲ್ದಾರ್ ಗೆ ಕೈ ನಾಯಕನ ಅವಾಜ್- ದೂರು ದಾಖಲು

ಕಲಬುರಗಿ: ಇತ್ತೀಚೆಗೆ ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ಕಾಂಗ್ರೆಸ್ ಮುಖಂಡರ ಗುಂಡಾ ವರ್ತನೆ ಮಿತಿ ಮೀರಿದ್ದು, ಇದೀಗ ಕಲಬುರಗಿಯ ಜೇವರ್ಗಿ ತಹಶೀಲ್ದಾರ್ ಗೆ ಕೈ ನಾಯಕರೊಬ್ಬರು ಅವಾಜ್ ಹಾಕಿರೋ ಆರೋಪ ಕೇಳಿಬಂದಿದೆ.

ಜಿಲ್ಲೆಯ ಜೇವರ್ಗಿ ತಾಲೂಕಿನ ಕಾಂಗ್ರೆಸ್ ಮುಖಂಡರಾಗಿರೋ ಶಾಂತಪ್ಪ ಕೂಡ್ಲಗಿ ಹಾಲಿ ಇಜೇರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾರೆ. ಇವರು ಫೆಬ್ರವರಿ 28ರಂದು ಕೊಳಕುರ ಗ್ರಾಮದ ರೈತರೊಬ್ಬರ ಭೂಮಿ ವಿವಾದ ಕುರಿತು ಮಾತನಾಡಲು ಜೇವರ್ಗಿ ತಹಶೀಲ್ದಾರ್ ಬಸವಲಿಂಗಪ್ಪ ನಾಯ್ಕೋಡಿ ಬಳಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ನಾಯ್ಕೋಡಿ ಹಾಗು ಶಾಂತಪ್ಪ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ನಾನು ಹೇಳಿದಂತೆ ರೈತನಿಗೆ ಭೂಮಿ ಮಂಜೂರು ಮಾಡಬೇಕು. ಇಲ್ಲ ಅಂದ್ರೆ ಕುರ್ಚಿ ಖಾಲಿ ಮಾಡಬೇಕು ಅಂತಾ ಕಾಂಗ್ರೆಸ್ ಮುಖಂಡ ತಹಶೀಲ್ದಾರ್ ಗೆ ಅವಾಜ್ ಹಾಕಿದ್ದಾರೆ.

ಇಜೇರಿ ಜಿಲ್ಲಾ ಪಂಚಾಯತ್ ಸದಸ್ಯ ಶಾಂತಪ್ಪ ಅವರು, ನಮ್ಮ ಕಚೇರಿಗೆ ಬಂದು ಕೊಳಕುರ ಗ್ರಾಮದ ಸರ್ವೇ ನಂಬರ್ 417 ಸರ್ಕಾರಿ ಜಮೀನಿನಲ್ಲಿ ಮೊರಾರ್ಜಿ ದೇಸಾಯಿ ಶಾಲೆಗೆ ಮಂಜೂರಾದ ಸ್ಥಳದಲ್ಲಿ, ಆ ಜಾಗ ಬೇರೆ ರೈತರ ಹೆಸರಿಗೆ ಮಂಜೂರಾಗಿದೆ ಅಂತಾ ತಕರಾರು ತೆಗೆದು, ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ನಾನು ಹೇಳಿದ ಹಾಗೆ ಜಮೀನು ರೈತನಿಗೆ ನೀಡಬೇಕು ಅಂತಾ ಅವಾಜ್ ಹಾಕಿದ್ದು, ಈ ಸಂದರ್ಭದಲ್ಲಿ ಕಚೇರಿಯಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಿಸಿದ್ದಾರೆ. ಈ ಮೂಲಕ ಸರ್ಕಾರಿ ಕೆಲಸಕ್ಕೆ ಅಡೆತಡೆ ಮಾಡಿದ್ದಾರೆ. ಈ ಸಂಧರ್ಭದಲ್ಲಿ ಬುದ್ಧಿ ಹೇಳಲು ಬಂದ ಪ್ರೊಬೆಷನರಿ ತಹಶೀಲ್ದಾರ್ ನಾಗಮ್ಮ ಅವರೊಂದಿಗೂ ಕೂಡ ಇವರು ಸರಿಯಾಗಿ ಮಾತನಾಡಿಲ್ಲ. ಹೀಗಾಗಿ ಇವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ ಅಂತ ತಹಶೀಲ್ದಾರ್ ಬಸವಲಿಂಗಪ್ಪ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಡಾ. ಅಜಯ್ ಸಿಂಗ್ ಸ್ಥಳಕ್ಕೆ ಆಗಮಿಸಿ ಇಬ್ಬರ ಜಗಳ ಬಿಡಿಸಿದ್ದಾರೆ. ಇದಾದ ಬಳಿಕ ಕೈ ಮುಖಂಡನ ಗುಂಡಾಗಿರಿ ಕುರಿತು ತಹಶೀಲ್ದಾರ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಮುಖಂಡ ಶಾಂತಪ್ಪ ಕೂಡ್ಲಗಿಯವರನ್ನು ಕೇಳಿದ್ರೆ, ನಾನು ಅವಾಜ್ ಹಾಕಿಲ್ಲ. ನೊಂದ ರೈತನ ಪರ ಧ್ವನಿ ಎತ್ತಿದ್ರೆ ತಹಶೀಲ್ದಾರ್ ಸುಳ್ಳು ದೂರು ನೀಡಿದ್ದಾರೆ ಅಂತಾ ಹೇಳುತ್ತಿದ್ದಾರೆ.

 ಕೊಳಕುರ ಸರ್ವೆ ನಂಬರ್ 417 ಈ ಭೂಮಿ ಸರ್ಕಾರಿ ಭೂಮಿಯಾಗಿದ್ದು, 15 ವರ್ಷಗಳ ಹಿಂದೆ ಸರ್ಕಾರ ಅವನಿಗೆ ಆ ಭೂಮಿ ಮಂಜೂರಾತಿ ಮಾಡಿದೆ. ಇದರ ಎಲ್ಲಾ ದಾಖಲಾತಿಗಳು ಅವನ ಹೆಸರಿನಲ್ಲಿವೆ. ಆದ್ರು ಇವನ ಜಮೀನಿನಲ್ಲಿಯೇ ಮೊರಾರ್ಜಿ ಶಾಲೆ ಕಟ್ಟಲು ತಹಶೀಲ್ದಾರ್ ಅನುಮತಿ ಕೊಟ್ಟಿದ್ದಾರೆ. ಅದಕ್ಕಾಗಿ ಕೇಳಲು ನಾವು ಹೋದಾಗ ತಹಶೀಲ್ದಾರ್ ನನ್ನ ಕೈಯಲ್ಲಿಲ್ಲ ಅಂತಾ ಹೇಳಿದ್ದಾರೆ. ಈ ಕುರಿತು ರೈಟಿಂಗ್ ನಲ್ಲಿ ಕೊಡಿ ನ್ಯಾಯ ಕೇಳಲು ಕೋರ್ಟ್ ಗೆ ಹೋಗುತ್ತೇವೆ ಅಂತಾ ಹೇಳಿದ್ದೇವೆ. ಈ ಸಂದರ್ಭದಲ್ಲಿ ಶಾಸಕ ಅಜಯ್ ಸಿಂಗ್ ಅವರನ್ನು ಸಹ ಕರೆಸಿದಾಗ ಅಲ್ಲಿಗೆ ಬಂದಿದ್ದಾರೆ. ಅವರ ಮಾತು ಕೇಳದಿದ್ದಾಗ ಇಲ್ಲಿಂದ ಜಾಗ ಖಾಲಿ ಮಾಡು ಅಂತಾ ಹೇಳಿದ್ದೇವೆ. ಆದರೆ ಏಕವಚನದಲ್ಲಿ ಮಾತನಾಡಿಲ್ಲ, ಆದ್ರೆ ತಹಶೀಲ್ದಾರ ಅವರು ವಿನಾಕಾರಣ ಠಾಣೆಗೆ ದೂರು ನೀಡಿದ್ದಾರೆ ಅಂತ ಶಾಂತಪ್ಪ ಹೇಳಿದ್ದಾರೆ.

ಕೈ ಮುಖಂಡನ ಅವಾಜ್ ಪ್ರಕರಣ ಇದೀಗ ಜೇವರ್ಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

Leave a Reply

Your email address will not be published. Required fields are marked *