ಬೆಂಗಳೂರು: ಚುನಾವಣಾ ಸಮಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವೇಶವನ್ನು ನಿಷೇಧ ಮಾಡಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದ್ಯಾ ಎನ್ನುವ ಪ್ರಶ್ನೆಯೊಂದು ಈಗ ಎದ್ದಿದೆ.
ಹೌದು, ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾಗೆ ಹೇಗೆ ಈ ಹಿಂದೆ ಮಂಗಳೂರು ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತೋ ಅದೇ ರೀತಿಯಾಗಿ ಅಮಿತ್ ಶಾ ಅವರ ಕರ್ನಾಟಕ ಪ್ರವೇಶವನ್ನು ನಿಷೇಧಿಸಲು ಸರ್ಕಾರ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ಯಾ ಎನ್ನುವ ಅನುಮಾನ ಮೂಡಿದೆ.
ಪರಿಷತ್ ಸದಸ್ಯ ಉಗ್ರಪ್ಪನವರು ಮಂಗಳವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಿಂದಾಗಿ ಈ ಅನುಮಾನದ ಪ್ರಶ್ನೆ ಎದ್ದಿದೆ. ಉಗ್ರಪ್ಪನವರು ನೇರವಾಗಿ ಈ ವಿಚಾರವನ್ನು ತಿಳಿಸದೇ ಇದ್ದರೂ ಮೈಸೂರು ಪ್ರತಾಪ್ ಸಿಂಹ ಪ್ರಕರಣ, ಗುಜರಾತಿನ ಕೋಮು ಗಲಾಟೆಯ ವಿಚಾರವನ್ನು ಪ್ರಸ್ತಾಪ ಮತ್ತು ತೊಗಾಡಿಯ ಪ್ರಕರಣವನ್ನು ಉಲ್ಲೇಖಿಸಿ ಇದೇ ಅರ್ಥ ಬರುವಂತೆ ಉತ್ತರಿಸಿದ್ದರಿಂದ ಈ ಪ್ರಶ್ನೆ ಎದ್ದಿದೆ.
ಮೈಸೂರಿನಲ್ಲಿ ನಡೆದ ಘಟನೆಗೆ ಅಮಿತ್ ಶಾ ನೇರ ಕಾರಣವಾಗಿದ್ದಾರೆ. ಗುಜರಾತ್ ನಲ್ಲಿ ಬೆಂಕಿ ದೊಂಬಿ, ನಕಲಿ ಎನ್‍ಕೌಂಟರ್ ಕೋಮುಗಲಾಟೆ ನಡೆಸಲು ಕಾರಣರಾದ ಅಮಿತ್ ಶಾ ಈಗ ಅದೇ ಗುಜರಾತ್ ಮಾದರಿಯನ್ನು ಕರ್ನಾಟಕದಲ್ಲಿ ಪ್ರಯೋಗಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಮತ್ತೊಮ್ಮೆ ಅಧಿಕಾರ ಬರುವುದನ್ನು ತಪ್ಪಿಸಲು ಬಿಜೆಪಿಯ ಅಧ್ಯಕ್ಷರು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಾರ್ಯತಂತ್ರ ರೂಪಿಸಿದ್ದಾರೆ. ಪ್ರತಾಪ್ ಸಿಂಹ ಅವರೇ ಅಮಿತ್ ಶಾ ಅವರು ಟಿಯರ್ ಗ್ಯಾಸ್ ಬಗ್ಗೆ ಹೇಳಿರುವುದನ್ನು ವಿಡಿಯೋದಲ್ಲಿ ತಿಳಿಸಿದ್ದಾರೆ. ಚುನಾವಣೆ ಸಮಯದಲ್ಲಿ ಶಾಂತಿ ಕದಡಲು ಅಮಿತ್ ಶಾ ರಾಜ್ಯ ನಾಯಕರಿಗೆ ಪ್ರೇರಣೆ ನೀಡುತ್ತಿದ್ದಾರೆ. ಹೀಗಾಗಿ ಮೈಸೂರಿನಲ್ಲಿ ನಡೆದಿರುವ ಪ್ರತಿಭಟನೆಗೆ ಅಮಿತ್ ಶಾ ಕುಮ್ಮಕ್ಕು ಕಾರಣವಾಗಿದ್ದು, ಅವರ ಮೇಲೂ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ವೇಳೆ ಅಮಿತ್ ಶಾ ಪ್ರವೇಶಕ್ಕೆ ನೀವು ನಿರ್ಬಂಧ ಹೇರುತ್ತಿರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ತೊಗಾಡಿಯಾ ಪ್ರಕರಣದಲ್ಲಿ ಕೋಮು ಸೌಹಾರ್ದ ಕದಡುವ ವ್ಯಕ್ತಿಗಳಿಗೆ ಪ್ರವೇಶ ನೀಡುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಆಯಾ ಜಿಲ್ಲಾಡಳಿತ ಕೈಗೊಳ್ಳಬಹುದು ಎಂದು ಸ್ಪಷ್ಟವಾಗಿ ಸೂಚಿಸಿದೆ. ನಾವು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಜಿಲ್ಲಾಡಳಿತದ ಆ ನಿರ್ಧಾರವನ್ನು ಸರ್ಕಾರ ಮತ್ತು ಕೋರ್ಟ್ ಮಧ್ಯೆ ಪ್ರವೇಶಿಸಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.
ಉಗ್ರಪ್ಪ ನೀಡಿದ ಉತ್ತರಕ್ಕೆ ತೊಗಾಡಿಯಾಗೆ ಈ ಹಿಂದೆ ಮಂಗಳೂರು ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು, ಅದೇ ರೀತಿಯಾಗಿ ಅಮಿತ್ ಶಾಗೆ ನಿಷೇಧ ಹೇರುತ್ತಿರಾ ಎನ್ನುವ ಮರು ಪ್ರಶ್ನೆಗೆ, ಕೋಮುಗಲಾಟೆ ಸೃಷ್ಟಿಸುವ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸುವ ಅಧಿಕಾರ ಇರುವುದು ಜಿಲ್ಲಾಡಳಿತಕ್ಕೆ. ಈ ಕಾರಣಕ್ಕೆ ನಾನು ತೊಗಾಡಿಯಾ ಪ್ರಕರಣವನ್ನು ಉಲ್ಲೇಖಿಸಿದ್ದು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜ್ಯ ಬಿಜೆಪಿ ನಾಯಕರ ಮೇಲೆ ಅಮಿತ್ ಶಾ ಗರಂ!
https://youtu.be/Ul8qOT7O1BM