ಬೆಂಗಳೂರು: ಟ್ವಿಟ್ಟರ್‍ನಲ್ಲಿ ನನ್ನ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇವತ್ತು ನಾನು ಈ ಪ್ರತಿಭಟನೆಯ ಅಂಗವಾಗಿ ಒಬ್ಬ ಪ್ರಜೆಯಾಗಿ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರಿಗೆ ನಾನು ಒಂದು ಕಾನೂನಿನ ನೋಟಿಸ್ ಕಳುಹಿಸಿದ್ದೇನೆ. ಅವರಿಗೆ ನೀಡಿರುವ ನಿಗದಿತ ಸಮಯದಲ್ಲಿ ಉತ್ತರ ನೀಡದೇ ಇದ್ದರೆ ಅವರ ವಿರುದ್ಧ ಕ್ರಿಮಿನಲ್ ಕ್ರಮವನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಮೋದಿ ಬಿಜೆಪಿ ನಾಯಕ ಅಂತ ಪ್ರಶ್ನೆ ಮಾಡಿಲ್ಲ. ಅವರು ನಮ್ಮ ದೇಶದ ಪ್ರಧಾನಿ ಅಂತ ಪ್ರಶ್ನೆ ಮಾಡಿದ್ದೇನೆ. ನಿಮ್ಮ ಕ್ಷೇತ್ರದ ಜನರಿಗೆ ಪ್ರಶ್ನೆ ಮಾಡಲು ಇಚ್ಚಿಸುತ್ತೇನೆ ನೀವು ಎಂಥ ವ್ಯಕ್ತಿಯನ್ನ ಆಯ್ಕೆ ಮಾಡಿದ್ದೀರಿ. ನಾನು ಕೇವಲ ಹೇಳಿಕೆ ಕೊಡುವುದಿಲ್ಲ. ನಾನು ಹೋರಾಟ ಮಾಡುತ್ತೇನೆ. ನಾನು ಬಿಜೆಪಿ ಪಾರ್ಟಿ ವಿರುದ್ಧ ಹೋರಾಟ ಮಾಡುತ್ತಿಲ್ಲ. ನಾನು ಪ್ರತಾಪ್ ಸಿಂಹ ವಿರುದ್ಧ ಹೋರಾಟ ಮಾಡುತ್ತೇನೆ. ನಿಮ್ಮ ಬಳಿ ಪವರ್ ಇರಬಹುದು ಆದ್ರೆ ಕಾಮನ್ ಮ್ಯಾನ್ ಆದ ನಾನು ಪ್ರಶ್ನೆ ಕೇಳುವ ಹಕ್ಕಿದೆ ಎಂದು ಹೇಳಿದರು.
ಈ ದೇಶದ ಪ್ರಜೆಯಾಗಿ ನಾನು ಒಂದು ಪ್ರಶ್ನೆಯನ್ನು ಕೇಳುತ್ತಿದ್ದೇನೆ. ನಮ್ಮ ದೇಶದಲ್ಲಿ ಟ್ರೋಲ್ ಎನ್ನುವುದು ಗುಂಡಾಗಿರಿಯಾಗಿದೆ. ಇದರಿಂದ ಯಾವ ವ್ಯಕ್ತಿಯು ತನ್ನ ಅಭಿವ್ಯಕ್ತಿ ಸ್ವಾತಂತ್ರದಲ್ಲಿ ಮಾತನಾಡಿದರೂ ಅದಕ್ಕೆ ಹಲವು ಅರ್ಥವನ್ನು ಕೊಡುತ್ತಾ, ಬಿಂಬಿಸುತ್ತಾ ಇಲ್ಲ ಅವರನ್ನೇ ಗುರಿಯಾಗಿಸಿಕೊಂಡು ಇನ್ನೊಮ್ಮೆ ಪ್ರಶ್ನೆಯನ್ನು ಕೇಳದ ರೀತಿಯಲ್ಲಿ ಮಾಡುತ್ತಿದೆ. ಇದು ಎಲ್ಲಾ ಕ್ಷೇತ್ರದಲ್ಲೂ ನಡೆಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿ ಪ್ರತಿಯೊಬ್ಬರು ಅವರ ಆತಂಕ, ಅನಿಸಿಕೆ, ಕೋಪ ಮತ್ತು ನೋವನ್ನು ವ್ಯಕ್ತಪಡಿಸುವ ಹಕ್ಕಿಲ್ಲ. ಇಂದು ರಾಜಕೀಯದಲ್ಲಿ ನೋಡಿದಾಗ ನಾನು ಏನು ಕೇಳಿದರೂ, ನಿಮ್ಮ ತಾಯಿಯ ಮತ ಯಾವುದೂ, ನೀನು ಪಾಕಿಸ್ತಾನಕ್ಕೆ ವಾಪಸ್ ಹೋಗು, ನೀನು ನಿಜ ಜೀವದಲ್ಲೂ ಖಳನಟ ಎಂದು ನನ್ನ ವೈಯಕ್ತಿಕ ಜೀವನದ ಘಟನೆಗಳನ್ನು ತಿರುಚಿ ಟ್ರೋಲ್ ಮಾಡುತ್ತಿದ್ದಾರೆ ಎಂದು ಆಕ್ರೋಶದಿಂದ ಹೇಳಿದರು.
ಇದು ಯಾವುದೇ ಪಕ್ಷ, ಪಂಗಡದ ವಿರುದ್ಧ ಅಲ್ಲ. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಇನ್ನೊಬ್ಬರನ್ನು ಈ ರೀತಿ ಟ್ರೋಲ್ ಮಾಡುವುದು ಸರಿಯಲ್ಲ. ಅದಕ್ಕಾಗಿ ನಾನು ಹೋರಾಡುತ್ತಿದ್ದೇನೆ. ನನ್ನ ಮಗನ ಸಾವಿನ ಸುದ್ದಿಯನ್ನು ನೀವು ಟ್ರೋಲ್ ಮಾಡಿದ್ದೀರಿ ಅದು ನನಗೆ ತುಂಬಾ ಆಘಾತ ಆಗಿದೆ. ಇದರಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನನಗೆ ನಿಮ್ಮನ್ನು ಚುನಾಯಿಸಿದ ಯುವಕರ ಮತ್ತು ನಿಮ್ಮ ಕ್ಷೇತ್ರದ ಹೆಣ್ಣುಮಕ್ಕಳ ಬಗ್ಗೆ ನೋವಾಗುತ್ತಿದೆ. ಅವರಿಗೆಲ್ಲಾ ಉತ್ತರ ಕೊಡಿ ಎಂದು ನೋವಿನಿಂದ ಹೇಳಿದರು.
ಒಂದು ಸಮುದಾಯವಾಗಿ ನಿಮ್ಮ ರಾಜಕೀಯ ಬೇಡ. ಆದರೆ ಆರೋಗ್ಯವಾದ ಸಜ್ಜನವಾದ ವಾತಾವರಣ ಬೇಕಾಗಿದೆ. ನಮ್ಮ ಯುವಕರಿಗೆ, ಪ್ರಜೆಗಳಿಗೆ ಪ್ರಶ್ನೆಕೇಳುವ ಉತ್ತರ ಬಯಸುವ ಹಕ್ಕು ಇದೆ. ಆದರೆ ನೀವು ಉತ್ತರಕೊಡುವ ಜವಬ್ದಾರಿ ಇದೆ ಹೊರತು ಹೀಗೆ ಅಸಯ್ಯ, ಅಸಭ್ಯವಾಗಿ ಮಾತನಾಡುತ್ತಾ ಸಮಾಜದ ಆರೋಗ್ಯವನ್ನು ಹಾಳು ಮಾಡಬೇಡಿ. ನಾನು ಕೇವಲ ಹೇಳಿಕೆ ಕೊಡುವವನು ಮಾತ್ರವಲ್ಲ, ನಾನು ನನ್ನ ಹಕ್ಕುಗಳಿಗೆ ಹೋರಾಡೋನು ಎಂದು ಸ್ಪಷ್ಟವಾಗಿ ಹೇಳಿದರು.
ಪದ್ಮಾವತಿ ಚಿತ್ರದ ವಿವಾದ ವಿಚಾರವನ್ನು ಕೇಳಿದಾಗ ಸುಪ್ರೀಂ ಕೋರ್ಟ್ ಬ್ಯಾನ್ ಮಾಡಲು ಸಾಧ್ಯವಿಲ್ಲ ಅಂತಾ ಹೇಳಿದೆ. ಆದರೂ ಇದಾದ ಮೇಲೂ ಚಿತ್ರವನ್ನು ಬ್ಯಾನ್ ಮಾಡುವುದು ಯಾಕೆ ಬೇಕಿತ್ತು ಎಂದು ಅವರು ಪ್ರಶ್ನಿಸಿದರು.
ನನಗೆ ರಾಜಕೀಯಕ್ಕೆ ಬರುವ ಯಾವುದೇ ಉದ್ದೇಶವಿಲ್ಲ. ಮೋದಿ ವಿರುದ್ಧ ಧ್ವನಿ ಎತ್ತಲು ಭಯ ಪಡುತ್ತಾರೆ. ಯುವ ಜನತೆ ಈ ದೋರಣೆ ವಿರುದ್ಧ ಧ್ವನಿ ಎತ್ತಬೇಕು. ನಾನು ಮಾತಾನಾಡುತ್ತೇನೆ ಮಾತನಾಡುತ್ತಲೇ ಇರುತ್ತೇನೆ ಎಂದು ಹೇಳಿ ತಮ್ಮ ಮಾತನ್ನ ಮುಗಿಸಿದರು.
ಸುದ್ದಿಗೋಷ್ಠಿ ಆರಂಭಿಸುವ ಮುನ್ನ ಮೈಸೂರಿನ ಆಂದೋಲನ ಪತ್ರಿಕೆಯ ಸಂಸ್ಥಾಪಕ ರಾಜಶೇಖರ ಕೋಟಿ ನಿಧಾನಕ್ಕೆ 2 ನಿಮಿಷ ಎದ್ದು ನಿಂತು ಮೌನಾಚಾರಣೆ ಮಾಡಿದ ನಂತರ ಮಾತನಾಡಿದರು.
ಇದನ್ನು ಓದಿ: ನಟ ಪ್ರಕಾಶ್ ರಾಜ್ ವಿರುದ್ಧ ಕೇಸ್ ದಾಖಲು
ಪ್ರತಾಪ್ ಸಿಂಹ ಟ್ವೀಟ್ ಏನಿತ್ತು?
ಅಕ್ಟೋಬರ್ 2 ರಂದು ಪ್ರತಾಪ್ ಸಿಂಹ ವೆಬ್‍ಸೈಟ್ ಒಂದರಲ್ಲಿ ಬಂದಿದ್ದ ಸುದ್ದಿಯನ್ನು ಟ್ವೀಟ್ ಮಾಡಿದ್ದರು. “ಮಗನ ಸಾವಿನ ದು:ಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ರೈಯಂತಹವನು ಮೋದಿ – ಯೋಗಿಗೆ ಹೇಳುವಷ್ಟು ಯೋಗ್ಯತೆಯಿರುವವನಾ?” ಎನ್ನುವ ಹೆಡ್‍ಲೈನ್ ಈ ಸುದ್ದಿಯಲ್ಲಿತ್ತು.
ಇದನ್ನು ಓದಿ: ತಮ್ಮ ದಂಧೆಗಾಗಿ, ಹಣಕ್ಕಾಗಿ ತಮಿಳುನಾಡಿನಲ್ಲಿ ರೈ, ಇಲ್ಲಿ ರಾಜ್: ಪ್ರತಾಪ್ ಸಿಂಹ
ಇದನ್ನು ಓದಿ: ಮೋದಿ, ಪ್ರತಾಪ್ ಸಿಂಹಗೆ ಪರೋಕ್ಷವಾಗಿ ಟಾಂಗ್ ನೀಡಿದ ನಟ ಪ್ರಕಾಶ್ ರೈ
https://www.youtube.com/watch?v=PEcjqcLb2_Y