Tag: ಷಣ್ಮುಗ ಸುಬ್ರಹ್ಮಣ್ಯಂ

  • ಭಾರತದ ಮೆಕ್ಯಾನಿಕಲ್ ಎಂಜಿನಿಯರ್ ನೆರವಿನಿಂದ ವಿಕ್ರಮ್ ಲ್ಯಾಂಡರ್ ತ್ಯಾಜ್ಯ ಪತ್ತೆ ಹಚ್ಚಿದ ನಾಸಾ

    ಭಾರತದ ಮೆಕ್ಯಾನಿಕಲ್ ಎಂಜಿನಿಯರ್ ನೆರವಿನಿಂದ ವಿಕ್ರಮ್ ಲ್ಯಾಂಡರ್ ತ್ಯಾಜ್ಯ ಪತ್ತೆ ಹಚ್ಚಿದ ನಾಸಾ

    ಚೆನ್ನೈ: ಬಹು ನಿರೀಕ್ಷಿತ ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಪತನಗೊಂಡ ನಂತರ ಹೇಗಾಯಿತು, ಏನಾಯಿತು ಎಂಬುದರ ಕುರಿತು ಇಸ್ರೋ, ನಾಸಾ ವಿಜ್ಞಾನಿಗಳು ಸಂಶೋಧನೆ ಕೈಗೊಂಡಿದ್ದರು. ಆದರೆ ಕಂಡು ಹಿಡಿಯುವುದು ಕಷ್ಟದ ಕೆಲಸವಾಗಿತ್ತು. ಇದೀಗ ನಾಸಾ ವಿಕ್ರಮ್ ಲ್ಯಾಂಡರ್ ನ ತ್ಯಾಜ್ಯ ಪತ್ತೆ ಹಚ್ಚಿದ್ದು, ವಿಶೇಷವೆಂದರೆ ನಾಸಾಗೆ ತಮಿಳುನಾಡಿನ ಎಂಜಿನಿಯರ್ ಸಹಾಯ ಮಾಡಿದ್ದಾರೆ.

    ಈ ಕುರಿತು ಸ್ವತಃ ನಾಸಾ ಸ್ಪಷ್ಟಪಡಿಸಿದ್ದು, ತಮಿಳುನಾಡಿನ 33 ವರ್ಷದ ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಷಣ್ಮುಗ ಸುಬ್ರಹ್ಮಣಿಯನ್ ಅವರ ಸಹಾಯದಿಂದ ನಾವು ವಿಕ್ರಮ್ ಲ್ಯಾಂಡರ್ ಪತನವಾಗಿರುವುದನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ಹೇಳಿದೆ. ಪತ್ತೆ ಹಚ್ಚಲು ಸಹಕರಿಸಿದ್ದಕ್ಕೆ ಷಣ್ಮುಗ ಅವರಿಗೆ ಇ-ಮೇಲ್ ಮೂಲಕ ನಾಸಾ ಧನ್ಯವಾದ ತಿಳಿಸಿದೆ.

    ಪ್ರತಿಷ್ಠಿತ ನಾಸಾ ಸಂಸ್ಥೆಯೇ ವಿಕ್ರಮ್ ಲ್ಯಾಂಡ್‍ನ ಸುಳಿವು ಕಂಡುಹಿಡಿಯಲು ವಿಫಲವಾಯಿತಲ್ಲ ಎಂಬ ವಿಷಯ ಷಣ್ಮುಗ ಅವರಲ್ಲಿ ಕುತೂಹಲ ಕೆರಳಿಸಿತು. ಹೀಗಾಗಿ ಈ ಕುರಿತು ಸಂಶೋಧನೆ ನಡೆಸಲು ಪ್ರಾರಂಭಿಸಿದರು. ಸಿಕ್ಕ ಮಾಹಿತಿಯನ್ನು ಇ-ಮೇಲ್ ಹಾಗೂ ಟ್ವಿಟ್ಟರ್ ಮೂಲಕ ನಾಸಾದೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದರು. ಇದು ನಾಸಾ ವಿಕ್ರಮ್ ಲ್ಯಾಂಡರ್ ಪತನವನ್ನು ಪತ್ತೆಹಚ್ಚಲು ಸಹಕಾರಿಯಾಯಿತು. ವಿಕ್ರಮ್ ಲ್ಯಾಂಡರ್ ಪತನದ ಕುರಿತು ಮೊದಲ ಬಾರಿಗೆ ಸಕಾರಾತ್ಮಕ ಗುರುತನ್ನು ಷಣ್ಮುಗ ಪತ್ತೆ ಹಚ್ಚಿ ನಾಸಾಗೆ ತಿಳಿಸಿದ್ದರು.

    ನಾನು ಪದೇ ಪದೆ ವಿಕ್ರಮ್ ಲ್ಯಾಂಡರ್ ಪತನವಾಗಿದ್ದ ಸ್ಥಳದ ಹಳೆಯ ಚಿತ್ರಗಳು ಹಾಗೂ ನಾಸಾ ಹೊಸತಾಗಿ ಬಿಡುಗಡೆ ಮಾಡಿದ ಚಿತ್ರಗಳನ್ನು ಹೋಲಿಕೆ ಮಾಡಿ ನೋಡುತ್ತಿದ್ದೆ. ಇದನ್ನು ನಾನು ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಹಾಗೂ ರೆಡ್ಡಿಟ್ ಮೂಲಕ ಹಂಚಿಕೊಳ್ಳುತ್ತಿದ್ದೆ ಎಂದು ಷಣ್ಮುಗ ಮಾಹಿತಿ ನೀಡಿದ್ದಾರೆ.

    ವಿಕ್ರಮ್ ಲ್ಯಾಂಡರ್ ಕುರಿತ ಸುಳಿವನ್ನು ಕಂಡುಹಿಡಿಯುವುದು ತುಂಬಾ ಕಷ್ಟದ ಕೆಲಸವಾಗಿತ್ತು. ಆದರೂ ನಾನು ಪ್ರಯತ್ನವನ್ನು ಬಿಡಲಿಲ್ಲ. ಅಂತಿಮವಾಗಿ ನಾನು ಸಂಶೋಧಿಸಿದ ಚಿತ್ರಗಳನ್ನು ಅಕ್ಟೋಬರ್ 3ರಂದು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡೆ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ನಾನು ನೀಡಿದ ಸುಳಿವಿನ ಆಧಾರದ ಮೇಲೆ ಅದೇ ಸ್ಥಳದಲ್ಲಿ ನಾಸಾ ಹೆಚ್ಚು ಹುಡುಕಾಟವನ್ನು ನಡೆಸಿತು. ಕಂಡುಹಿಡಿದ ಎರಡು ತಿಂಗಳ ನಂತರ ಅಧಿಕೃತವಾಗಿ ನಾಸಾ ಘೋಷಣೆ ಮಾಡಿತು. ಸಾರ್ವಜನಿಕರ ಮುಂದೆ ಮಾಹಿತಿ ಹಂಚಿಕೊಳ್ಳುವುದಕ್ಕೂ ಮುನ್ನ ಅವರು ಸಂಪೂರ್ಣವಾಗಿ ಖಚಿತಪಡಿಸಿಕೊಳ್ಳುತ್ತಾರೆ. ಹೀಗಾಗಿ ತಡವಾಗಿ ಘೋಷಣೆ ಮಾಡಿದೆ. ಹೀಗಾಗಿ ನಾನೂ ಅದೇ ರೀತಿ ಮಾಡಿದೆ ಎಂದು ಷಣ್ಮುಗ ತಿಳಿಸಿದರು.

    ಚಂದ್ರಯಾನ-2 ಮಿಷನ್ ಯಶಸ್ವಿಯಾಗಿದೆ ಎಂದು ನಾನು ಭಾವಿಸುತ್ತೇನೆ. ವಿಕ್ರಮ್ ಲ್ಯಾಂಡರ್ ಕ್ರ್ಯಾಶ್ ಆಗಿದ್ದು ದುರಂತ. ಆದರೆ ಜನ ಇಸ್ರೋ ಹಾಗೂ ವಿಕ್ರಮ್ ಲ್ಯಾಂಡರ್ ಬಗ್ಗೆ ಹೆಚ್ಚು ಚರ್ಚೆ ಮಾಡುವಂತಾಯಿತು, ಸಂಶೋಧನೆಗೆ ತೊಡಗುವಂತೆ ಮಾಡಿತು. ಅದೇ ಇದರ ಸಕಾರಾತ್ಮಕತೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ನಾಸಾ ನನ್ನ ಕೊಡುಗೆಯನ್ನು ಸ್ವೀಕರಿಸಿದ್ದಕ್ಕೆ ಸಂತೋಷವಾಗಿದೆ. ನನ್ನ ಸಂಶೋಧನೆಗಾಗಿ ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್(ಎಲ್‍ಆರ್‍ಒ) ಚಿತ್ರಗಳನ್ನು ಬಳಸಿದ್ದೆ. ನಂತರ ಎಲ್‍ಆರ್‍ಒ ಯೋಜನೆಯನ್ನು ಶಿಲಾಖಂಡಗಳ ಸಕಾರಾತ್ಮಕ ಗುರುತುಗಳೊಂದಿಗೆ ಸಂಪರ್ಕಿಸಿದ್ದೆ. ಚಂದ್ರನಲ್ಲಿ ಈ ತ್ಯಾಜ್ಯವನ್ನು ಹುಡುಕುವುದು ತುಂಬಾ ಕಷ್ಟದ ಕೆಲಸ, ನಾನು ಕೇವಲ ಒಂದು ತುಂಡು ತ್ಯಾಜ್ಯವನ್ನು ಮಾತ್ರ ಪತ್ತೆಹಚ್ಚಿದ್ದೆ ಎಂದು ವಿವರಿಸಿದ್ದಾರೆ.

    ನಾಸಾದಿಂದ ಚಿತ್ರ ಬಿಡುಗಡೆ
    ಇಸ್ರೋ ಕನಸಿನ ಕೂಸಾಗಿದ್ದ ಚಂದ್ರಯಾನ 2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾದ ಪತ್ತೆ ಹಚ್ಚಿದ್ದು, ಪತನವಾದ ಸ್ಥಳದ ಫೋಟೋವನ್ನು ನಾಸಾ ಹಂಚಿಕೊಂಡಿದೆ.

    ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್(ಎಲ್‍ಆರ್‍ಒ) ಮೂಲಕ ತೆಗೆದ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದು, ಅದು ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳವನ್ನು ಮತ್ತು ಅದಕ್ಕೆ ಸಂಬಂಧಿತ ಶಿಲಾಖಂಡರಾಶಿಗಳ ಕ್ಷೇತ್ರವನ್ನು ಪತ್ತೆಮಾಡಿದೆ. ಅಲ್ಲದೆ ವಿಕ್ರಮ್ ಲ್ಯಾಂಡರ್ ನ ಭಾಗಗಳು ಹಲವಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು ಎರಡು ಡಜನ್ ಸ್ಥಳಗಳಲ್ಲಿ ಹರಡಿಕೊಂಡಿವೆ ಎಂದು ತಿಳಿಸಿದೆ.

    ಸೆ. 26ರಂದು ನಾಸಾ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಮೊಸಾಕ್ ಚಿತ್ರವನ್ನು ಬಿಡುಗಡೆ ಮಾಡಿತ್ತು. ಷಣ್ಮುಗ ಸುಬ್ರಹ್ಮಣ್ಯಂ ಅವರು ಎಲ್‍ಆರ್‍ಒ ಯೋಜನೆಯನ್ನು ಶಿಲಾಖಂಡಗಳ ಸಕಾರಾತ್ಮಕ ಗುರುತುಗಳೊಂದಿಗೆ ಸಂಪರ್ಕಿಸಿದರು. ಆಗ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದಿಂದ ವಾಯುವ್ಯ ದಿಕ್ಕಿನಲ್ಲಿ ಸುಮಾರು 750 ಮೀ. ದೂರದಲ್ಲಿ ಅದರ ಕೆಲ ಭಾಗಗಳು ಪತ್ತೆಯಾಗಿತ್ತು ಎಂದು ನಾಸಾ ಹೇಳಿದೆ.

    3.84 ಲಕ್ಷ ಕಿ.ಮೀ ಕ್ರಮಿಸಿ ಚಂದ್ರನ ಅಂಗಳ ತಲುಪಬೇಕಿದ್ದ ಲ್ಯಾಂಡರ್ ನಿಗದಿತ ಪಥದಲ್ಲೇ ಸಾಗುತಿತ್ತು. ಕೌಂಟ್ ಡೌನ್ ಆರಂಭಗೊಂಡ ಬಳಿಕ ಲ್ಯಾಂಡರ್ ನಿಗದಿತ ಪಥದಲ್ಲಿ ಹೋಗುವುದನ್ನು ಗಮನಿಸಿದ ವಿಜ್ಞಾನಿಗಳು ಸಂತೋಷದಲ್ಲಿದ್ದರು. ಸೆಪ್ಟೆಂಬರ್ 7ರ ನಸುಕಿನ ಜಾವ 1.50ರ ವೇಳಗೆ ಚಂದ್ರನ ದಕ್ಷಿಣ ಧ್ರುವದಿಂದ 2.1 ಕಿ.ಮೀ ಎತ್ತರದಲ್ಲಿದ್ದಾಗ ಸಂಪರ್ಕ ಕಳೆದುಕೊಂಡಿತ್ತು.