ನಾಡದ್ರೋಹಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತಮಿಳುನಾಡಿಗೆ ಮತ್ತೆ ಕಾವೇರಿ ಕರುಣೆ: ಅಶೋಕ್‌ ಕಿಡಿ

3 Min Read

– ಕನ್ನಡಿಗರ ಕತ್ತು ಹಿಸುಕುತ್ತಿರುವ ಡಿ.ಕೆ.ಶಿವಕುಮಾರ್ ಸರ್ಕಾರ – ವಿಪಕ್ಷ ನಾಯಕ ವಾಗ್ದಾಳಿ

ಬೆಂಗಳೂರು: ತಮಿಳುನಾಡಿಗೆ ಮತ್ತೆ ಕಾವೇರಿ ನೀರು (Cauvery Water) ಬಿಡಲು ಆದೇಶದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಕಿಡಿಕಾರಿದ್ದಾರೆ.

‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡ ಅಶೋಕ್‌, ನಾಡದ್ರೋಹಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತಮಿಳುನಾಡಿಗೆ ಮತ್ತೆ ಕಾವೇರಿ ಕರುಣೆಯಾಗಿದೆ. ಡಿ.ಕೆ.ಶಿವಕುಮಾರ್ ಸರ್ಕಾರ ಕನ್ನಡಿಗರ ಕತ್ತು ಹಿಸುಕುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಕ್ಸ್‌ ಪೋಸ್ಟ್‌ನಲ್ಲೇನಿದೆ?
ಕನ್ನಡಿಗರಿಗೆ ಕುಡಿಯಲು ನೀರಿಲ್ಲ, ರೈತರ ಜಮೀನುಗಳಿಗೆ ನೀರಿಲ್ಲ. ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಆದರೂ, ನಾಡಿನ ರೈತರ ಮತ್ತು ಜನರ ಹಿತ ಬಲಿ ಕೊಟ್ಟು, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ತನ್ನ ಪರಮ ಪಾತಕಿ ಬುದ್ಧಿಯನ್ನು ಮತ್ತೊಮ್ಮೆ ತೋರಿಸಿದೆ.

ಮುಂದುವರಿದ ಕಾವೇರಿ ದ್ರೋಹ: ಕಾವೇರಿ ನೀರು ನಿಯಂತ್ರಣ ಮಂಡಳಿ ಹಾಗೂ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕದ ಪರವಾಗಿ ಗಟ್ಟಿಯಾದ ವಾದ ಮಂಡಿಸಿ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡುವಲ್ಲಿ ಸಂಪೂರ್ಣ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ, ತೀವ್ರ ಬರದ ನಡುವೆಯೂ ಈಗ ಮುಂದಿನ 15 ದಿನಗಳ ಕಾಲ ದಿನನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸಬೇಕಾದ ಪರಿಸ್ಥಿತಿ ತಂದಿಟ್ಟಿದೆ.

ಇಚ್ಛಾಶಕ್ತಿ ಇಲ್ಲದ ದುರ್ಬಲ ಸರ್ಕಾರ. ಅಧಿಕಾರಕ್ಕಾಗಿ ಹೈಕಮಾಂಡ್ ಗುಲಾಮರಾಗಿರಿ ಹಾಗೂ ತಮಿಳುನಾಡಿನ ಮೈತ್ರಿ ರಾಜಕಾರಕ್ಕೆ ಸಂಪೂರ್ಣ ಶರಣಾಗಿರುವ ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಕನ್ನಡಿಗರ ಹಿತ ರಕ್ಷಿಸುವ ಕಿಂಚಿತ್ ಕಾಳಜಿಯೂ ಇಲ್ಲ. ನಮ್ಮ ರಾಜ್ಯದ ಆಕ್ಷೇಪಣೆಗಳನ್ನು ಕಸದ ಬುಟ್ಟಿಗೆ ಎಸೆದರೂ, ಮೌನವಾಗಿ ಒಪ್ಪಿಕೊಳ್ಳುತ್ತಿರುವ ಈ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಪಾಲಿಗೆ ದೊಡ್ಡ ಶಾಪವಾಗಿದೆ.

ಜಲದ್ರೋಹಿಗಳಿಗೆ ತಕ್ಕ ಪಾಠ. ಕಾವೇರಿ ಕೊಳ್ಳದ ರೈತರ ಬದುಕು ಬೀದಿಪಾಲಾಗುತ್ತಿದ್ದರೆ, ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಇವರ ಮಂತ್ರಿಮಂಡಲ ಕುರ್ಚಿ ಉಳಿಸಿಕೊಳ್ಳುವ ಆಟದಲ್ಲಿ ಮಗ್ನವಾಗಿದೆ.

ರಾಜಕೀಯ ಮುಲಾಜಿಗಾಗಿ ನಾಡಿನ ಹಿತಾಸಕ್ತಿ ಬಗ್ಗೆ ರಾಜಿ ಮಾಡಿಕೊಂಡು ಕನ್ನಡಿಗರ ಜೀವನಾಡಿ ಕಾವೇರಿಯನ್ನು ಪರಾರಾಜ್ಯಕ್ಕೆ ಧಾರೆ ಎರೆಯುತ್ತಿರುವ ಈ ನಾಡದ್ರೋಹಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯದ ಜನತೆ ಸಿಡಿದೆಳುವ ದಿನ ಬಹಳ ದೂರವಿಲ್ಲ ಎಂದು ಅಶೋಕ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Share This Article
Exit mobile version