ಬಾಗಲಕೋಟೆ: ಮೂವರು ಖತರ್ನಾಕ್ ಕಳ್ಳರನ್ನು ಮುಧೋಳ ಪೊಲೀಸರು ಬಂಧಿಸಿದ್ದು, 30 ಗ್ರಾಂ ಚಿನ್ನ, 67,700 ರೂ. ನಗದು, 12 ಮೊಬೈಲ್ ಹಾಗೂ ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.
ಮುಧೋಳ, ಬೆಳಗಾವಿ ಭಾಗದ ಸುನೀಲ್ ರಜಪೂತ್, ತುಕಾರಾಮ್ ರಜಪೂತ್ ಹಾಗೂ ಮಂಜುನಾಥ್ ಲಮಾಣಿ ಬಂಧಿತ ಆರೋಪಿಗಳು. ಎಸ್‍ಪಿ ಅಭಿನವ್ ಖರೇ ಅವರ ಮಾರ್ಗದರ್ಶ ಹಾಗೂ ಮುಧೋಳ ಸಿಪಿಐ ಕೆ.ಬಿ ಲಿಬನ್ನೆ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡವು ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳು ಬೈಕ್‍ನಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದೇವು. ಆದರೆ ಆರೋಪಿಗಳು ಮೊದಲಿಗೆ ಯಾವುದೇ ಮಾಹಿತಿ ನೀಡಲಿಲ್ಲ. ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾರೆ. ಅವರ ಬಳಿಯಿದ್ದ 30 ಗ್ರಾಂ ಚಿನ್ನ, 67,700 ರೂ. ನಗದು, ಕೃತ್ಯಕ್ಕೆ ಬಳಸುತ್ತಿದ್ದ 12 ಮೊಬೈಲ್ ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಇತ್ತೀಚೆಗೆ ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಬಂಧಿತರ ವಿರುದ್ಧ ಕಳ್ಳತನ ಹಾಗೂ ಸುಲಿಗೆ ಆರೋಪದ ಅಡಿ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.