Ram Mandir: ಅಯೋಧ್ಯೆ ತಲುಪಿದ 1,265 ಕೆಜಿ ತೂಕದ ಪ್ರಸಾದದ ಲಡ್ಡು

Public TV
Public TV - Digital Head
2 Min Read

ಅಯೋಧ್ಯೆ (ರಾಮಮಂದಿರ): ರಾಮಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠೆಗಾಗಿ ಅಯೋಧ್ಯೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ದೇಶ-ವಿದೇಶಗಳಿಂದ ಅಯೋಧ್ಯೆಗೆ ಉಡುಗೊರೆ, ಪ್ರಸಾದದ ಮಹಾಪೂರವೇ ಹರಿದುಬರುತ್ತಿದೆ. ಭಕ್ತರೊಬ್ಬರು ತಯಾರಿಸಿದ್ದ 1265 ಕೆಜಿ ತೂಕದ ಪ್ರಸಾದದ ಲಡ್ಡು (Laddoo Prasad) ಕೂಡ ಅಯೋಧ್ಯೆ (Ayodhya) ತಲುಪಿದೆ.

ಈ ಬೃಹತ್‌ ಪ್ರಮಾಣದ ಲಡ್ಡನ್ನು ಹೊತ್ತು ಹೈದರಾಬಾದ್‌ನಿಂದ ಹೊರಟಿದ್ದ ವಾಹನವು ಅಯೋಧ್ಯೆಯ ಕರಸೇವಕಪುರ ತಲುಪಿದೆ. ಈ ಲಡ್ಡನ್ನು ತಯಾರಿಸಿದ್ದು ಶ್ರೀರಾಮ ಕ್ಯಾಟರಿಂಗ್ ಸರ್ವಿಸಸ್‌. ಇದನ್ನೂ ಓದಿ: ತಲೆಗೂದಲಿಗೆ ಹಗ್ಗ ಕಟ್ಟಿಕೊಂಡೇ ರಾಮರಥ ಎಳೆದ ಸ್ವಾಮೀಜಿ; ಅಯೋಧ್ಯೆ ಕಡೆಗೆ 566 ಕಿಮೀ ಯಾತ್ರೆ

ಶ್ರೀರಾಮ ಕ್ಯಾಟರಿಂಗ್ ಸರ್ವಿಸಸ್‌ ಮಾಲೀಕ ಎನ್.ನಾಗಭೂಷಣ ರೆಡ್ಡಿ ಮಾತನಾಡಿ, ದೇವರು ನನ್ನ ವ್ಯಾಪಾರ ಮತ್ತು ನನ್ನ ಕುಟುಂಬವನ್ನು ಆಶೀರ್ವದಿಸಿದ್ದಾನೆ. ನಾನು ಬದುಕಿರುವವರೆಗೆ ಪ್ರತಿದಿನ ರಾಮಮಂದಿರಕ್ಕಾಗಿ 1 ಕೆಜಿ ಲಡ್ಡು ತಯಾರಿಸುತ್ತೇನೆ ಎಂದು ವಾಗ್ದಾನ ಮಾಡಿದ್ದೇನೆ. ಅಯೋಧ್ಯೆಗೆ ಆಹಾರ ಪ್ರಮಾಣ ಪತ್ರವನ್ನೂ ತಂದಿದ್ದೇನೆ. ಈ ಲಡ್ಡುಗಳು ಒಂದು ತಿಂಗಳು ಬಾಳಿಕೆ ಬರುತ್ತವೆ. 25 ಮಂದಿ 3 ದಿನಗಳವರೆಗೆ ಲಡ್ಡುಗಳನ್ನು ತಯಾರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಅಯೋಧ್ಯೆ ರಾಮಮಂದಿರದ ಪ್ರತಿಷ್ಠಾಪನೆಯ ದಿನಾಂಕವು ಹತ್ತಿರವಾಗುತ್ತಿದ್ದಂತೆ, ಧಾರ್ಮಿಕ ಉತ್ಸಾಹವು ಭಾರತದಾದ್ಯಂತ ಭಕ್ತರನ್ನು ಆವರಿಸಿದೆ. ಜನರು ಭಗವಾನ್ ರಾಮನಿಗೆ ವಿವಿಧ ವಸ್ತುಗಳನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ. ಹೈದರಾಬಾದ್‌ನ ನಾಗಭೂಷಣ ರೆಡ್ಡಿ ಎಂಬವರು 1,265 ಕೆಜಿ ತೂಕದ ಲಡ್ಡು ತಯಾರಿಸಿ ಅಯೋಧ್ಯೆಗೆ ನೀಡಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ ‘ದಿವ್ಯ ದರ್ಶನ’; ವಿಗ್ರಹದ ಫೋಟೋಗಳು ವೈರಲ್‌ – ಜೈ ಶ್ರೀರಾಮ್‌ ಘೋಷಣೆ

ಲಡ್ಡು ಪ್ರಸಾದವನ್ನು ಹೈದರಾಬಾದ್‌ನಿಂದ ರಸ್ತೆ ಮೂಲಕ ಭವ್ಯ ಮೆರವಣಿಗೆಯೊಂದಿಗೆ ಅಯೋಧ್ಯೆಗೆ ಕೊಂಡೊಯ್ಯಲಾಯಿತು. ಪ್ರಸಾದವನ್ನು ರೆಫ್ರಿಜರೇಟೆಡ್ ಬಾಕ್ಸ್‌ನಲ್ಲಿ ತೆಗೆದುಕೊಂಡು ಹೋಗಲಾಗಿತ್ತು. ಐದು ವಾಹನಗಳಲ್ಲಿ 18 ಮಂದಿ ಮೆರವಣಿಗೆಯೊಂದಿಗೆ ಸಾಗಿದ್ದರು. ಉದ್ಘಾಟನೆಯ ದಿನವಾದ ಜನವರಿ 22 ರಂದು ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಗುವುದು.

Share This Article