– 423 ಎಕರೆ ಅರಣ್ಯ ಬಳಕೆಗೆ ಅನುಮೋದನೆ ಕೇಳಿದ್ದ ರಾಜ್ಯ
ನವದೆಹಲಿ: ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ 23 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ (Yettinahole Integrated Drinking Water Supply Project) ಹೆಚ್ಚುವರಿಯಾಗಿ 423 ಎಕ್ರೆ ಅರಣ್ಯ (Forest) ಬಳಕೆಗೆ ಅನುಮೋದನೆ ನೀಡಬೇಕೆಂಬ ಕರ್ನಾಟಕ ಸರ್ಕಾರದ (Karnataka Government) ಪ್ರಸ್ತಾವಕ್ಕೆ ಕೇಂದ್ರ ಅರಣ್ಯ, ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಅನುಮತಿ ನೀಡಲು ನಿರಾಕರಿಸಿದೆ.
ಗುರುತ್ವಾಕರ್ಷಣೆ ಕಾಲುವೆ ನಿರ್ಮಾಣಕ್ಕೆ ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ 432 ಎಕ್ರೆ ಅರಣ್ಯ ಬಳಕೆಗೆ ಒಪ್ಪಿಗೆ ನೀಡುವಂತೆ ಕೋರಿ ರಾಜ್ಯ ಸರ್ಕಾರವು ಪರಿಸರ ಸಚಿವಾಲಯಕ್ಕೆ ಮಾರ್ಚ್‌ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಸಚಿವಾಲಯದ ಡಿಐಜಿಎಫ್ ಪ್ರಣಿತಾ ಪೌಲ್ ನೇತೃತ್ವದ ಅಧಿಕಾರಿಗಳ ತಂಡವು ಯೋಜನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು. ರಾಜ್ಯ ಸರ್ಕಾರವು ಲೋಪಗಳನ್ನು ಸರಿಪಡಿಸಿ ಸೂಕ್ತ ಸಮಜಾಯಿಷಿ ನೀಡಿದ ಬಳಿಕವೇ ಹೆಚ್ಚುವರಿ ಅರಣ್ಯ ಬಳಕೆಗೆ ಅನುಮೋದನೆ ನೀಡಬಹುದು ಎಂದು ಸಮಿತಿ ಶಿಫಾರಸು ಮಾಡಿತ್ತು. ಇದನ್ನೂ ಓದಿ: ನಾನು ಸಚಿವನಾದ್ರೆ ಪುರುಷರಿಗೂ ಬಸ್ ಪ್ರಯಾಣ ಫ್ರೀ: ಬಸವರಾಜ ರಾಯರೆಡ್ಡಿ
ನವದೆಹಲಿಯಲ್ಲಿ ಜೂನ್ 26ರಂದು ನಡೆದ ಸಲಹಾ ಸಮಿತಿಯ ಸಭೆಯಲ್ಲಿ ಈ ಯೋಜನೆಗೆ ಹೆಚ್ಚುವರಿ ಅರಣ್ಯ ಭೂಮಿ ನೀಡುವ ಬಗ್ಗೆ ಚರ್ಚೆ ನಡೆಯಿತು. ‘ಕೇಂದ್ರದಿಂದ ಅನುಮೋದನೆ ಪಡೆಯುವ ಮುನ್ನವೇ ಈ ಯೋಜನೆಗಾಗಿ ಅರಣ್ಯ ಭೂಮಿಯನ್ನು ಬಳಕೆ ಮಾಡಲಾಗಿದೆ ಎಂಬುದನ್ನು ಅಧಿಕಾರಿಗಳ ತಂಡವು ಬೊಟ್ಟು ಮಾಡಿ ತೋರಿಸಿದೆ. ನಿಯಮ ಉಲ್ಲಂಘಿಸಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ದಂಡ ವಿಧಿಸಬೇಕು’ ಎಂದು ಸಲಹಾ ಸಮಿತಿ ನಿರ್ದೇಶನ ನೀಡಿತು. ಬಳಿಕ ಪ್ರಸ್ತಾವವನ್ನು ಮುಂದಿನ ಸಭೆಗೆ ಮುಂದೂಡಿತು. ಇದನ್ನೂ ಓದಿ: ಅನಿವಾಸಿ ಭಾರತೀಯರಿಗೆ ಗುಡ್ ನ್ಯೂಸ್ – 23 ಲಕ್ಷಕ್ಕೆ ಜೀವಿತಾವಧಿ ‘ಗೋಲ್ಡನ್ ವೀಸಾ’ ಪರಿಚಯಿಸಿದ ಯುಎಇ
ಪಶ್ಚಿಮ ಘಟ್ಟದ ಎತ್ತಿನಹೊಳೆಯಿಂದ 24 ಟಿಎಂಸಿ ನೀರು ಹರಿಸುವ ಈ ಯೋಜನೆಗೆ ಈ ಹಿಂದೆ 13.93 ಹೆಕ್ಟೇರ್ ಅರಣ್ಯ ಬಳಕೆಗೆ 2016ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. 33 ಷರತ್ತುಗಳನ್ನು ವಿಧಿಸಿ 2016ರಲ್ಲಿ ಅನುಮೋದನೆ ಕೊಡಲಾಗಿತ್ತು. ಆದರೆ ಬಹುತೇಕ ಷರತ್ತುಗಳನ್ನು ಪಾಲನೆ ಮಾಡಿಲ್ಲ. ಕಾಮಗಾರಿ ಸಂದರ್ಭದಲ್ಲಿ ಭೂಕುಸಿತ ಹಾಗೂ ಮಣ್ಣಿನ ಕೊರೆತ ಉಂಟಾಗಿದೆ ಎಂದು ಎನ್‌ಜಿಟಿಯ ಮೇಲ್ವಿಚಾರಣಾ ತಂಡವು 2019ರಲ್ಲಿ ವರದಿ ಸಲ್ಲಿಸಿತ್ತು. ಭೂಕುಸಿತ ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಜತೆಗೆ ಅನುಮೋದನೆಗಿಂತ ಹೆಚ್ಚುವರಿ ಅರಣ್ಯ ಬಳಸಲಾಗಿದೆ. ಕಾಮಗಾರಿಯಿಂದಾಗಿ ಅನೇಕ ಮನೆಗಳಿಗೆ ಹಾನಿಯಾಗಿದೆ. ಆದರೆ, ಸಂತ್ರಸ್ತರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ತಜ್ಞರ ತಂಡವು ಆಕ್ಷೇಪ ವ್ಯಕ್ತಪಡಿಸಿತ್ತು.