ಮಂಜೇಗೌಡರ ಜೊತೆ ನಾನೇ ಮಾತನಾಡಿದ್ದು ಏನಿವಾಗ? ಹೆಚ್‍ಡಿಕೆ ಏನ್ ನನಗೆ ಮುತ್ತು ಕೊಟ್ಟಿದ್ರಾ – ಸಿಎಂ

Public TV
3 Min Read

ಮೈಸೂರು: ದೇವೇಗೌಡರ ಮಕ್ಕಳನ್ನು ಗೆಲ್ಲಿಸಿದ್ದು ಸಾಕು, ಈ ಬಾರಿ ನಮ್ಮವರನ್ನು ಗೆಲ್ಲಿಸಿ ಅಂತಾ ಮಂಜೇಗೌಡರ ಜೊತೆ ಮಾತಾಡಿದ್ದು ನಾನೇ. ಅದಕ್ಕೆ ಏನಿವಾಗ? ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರಶ್ನಿಸಿದ್ದಾರೆ.

ತಮ್ಮ ಹಾಗೂ ಹಾಸನದ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ ಮಂಜೇಗೌಡ ಜೊತೆ ನಡೆದ ಸಂಭಾಷಣೆ ವೈರಲ್ ಆಗಿರುವ ಕುರಿತ ಪ್ರಶ್ನೆಗೆ ಸಿಎಂ ಹೀಗೆ ಪ್ರತಿಕ್ರಿಯಿಸಿದರು. ಮಂಜೇಗೌಡರ ಜೊತೆ ನಾನೇ ಮಾತನಾಡಿದ್ದು, ಏನಿವಾಗ? ಬಹಿರಂಗವಾಗಿಯೇ ನನ್ನ ಫೋನ್ ರೆರ್ಕಾಡ್ ಆಗಿರಬಹುದು ಏನು ಮಾಡುವುದಕ್ಕೆ ಆಗುತ್ತೆ? ಕುಮಾರಸ್ವಾಮಿ ಏನು ಚಾಮುಂಡೇಶ್ವರಿ ಉಪ ಚುನಾವಣೆ ಸಂದರ್ಭದಲ್ಲಿ ಮೈಸೂರಿಗೆ ಬಂದು ನನಗೆ ಮುತ್ತಿಟ್ಟು ಹೋಗಿದ್ರಾ? ಎಂದು ಸಿಎಂ ಗರಂ ಆಗಿ ಪ್ರಶ್ನಿಸಿದರು.

ನಾನೊಬ್ಬ ಕಾಂಗ್ರೆಸ್ ಮುಖಂಡ, ನನ್ನ ಪಕ್ಷವನ್ನು ಗೆಲ್ಲಿಸಿ ಅಂತ ತಾನೇ ಹೇಳಬೇಕು. ಅದನ್ನು ಬಿಟ್ಟು ಜೆಡಿಎಸ್ ಗೆಲ್ಲಿಸಿ ಅನ್ನೋಕಾಗುತ್ತಾ? ನಾನು ಜೆಡಿಎಸ್ ಪಕ್ಷವನ್ನ ಸೋಲಿಸಿ ಎಂದದ್ದು ನಿಜ. ನನ್ನ ಯಾವುದೇ ಮಾತುಗಳು ಕದ್ದು ಮುಚ್ಚಿ ಇರುವುದಿಲ್ಲ. ನನ್ನದು ಎಲ್ಲವು ಬಹಿರಂಗ ಹೇಳಿಕೆಗಳು. ನನ್ನ ಫೋನ್ ಕದ್ದಾಲಿಕೆ ಆಗಿಲ್ಲ. ಯಾರು ಬೇಕಾದ್ರು ನನ್ನ ಫೋನ್ ಕದ್ದಾಲಿಕೆ ಮಾಡಲಿ. ನಾನು ಎಲ್ಲರ ಜೊತೆಯಲ್ಲೂ ಬಹಿರಂಗವಾಗಿಯೇ ಮಾತನಾಡುತ್ತೇನೆ. ಬೇಕಿದ್ರೆ ನೀವು ನನ್ನ ಫೋನ್ ಕದ್ದಾಲಿಕೆ ಮಾಡಿಕೊಳ್ಳಿ ಎಂದು ಮಾಧ್ಯಮದವರಿಗೂ ಬಹಿರಂಗವಾಗಿಯೇ ಕದ್ದಾಲಿಸಿಕೊಳ್ಳಿ ಎಂದರು.

ರಾಹುಲ್ ಗಾಂಧಿ ರಾಜ್ಯ ಪ್ರವಾಸದ ಬಗ್ಗೆ ಮಾತನಾಡಿದ ಸಿಎಂ, ನಾವು ಉಡುಪಿಗೆ ಹೋಗಿಲ್ಲ. ಅದರಲ್ಲಿ ಕೃಷ್ಣ ಮಠಕ್ಕೆ ಹೋಗುವ ಪ್ರಶ್ನೆ ಎಲ್ಲಿಂದ ಬಂತು? ಇದೆಲ್ಲ ಸಾರ್ವಜನಿಕವಾಗಿ ಚರ್ಚೆಯಾಗುವ ವಿಚಾರವೇ? ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿ ಅವರು ಎಲ್ಲಿಗೆ ಹೋಗಬೇಕು, ಏನು ಮಾಡಬೇಕೆಂಬುದನ್ನು ಅವರೇ ನಿರ್ಧರಿಸುತ್ತಾರೆ. ನಮ್ಮನ್ನು ಕೇಳಿ ಪ್ರವಾಸ ಪಟ್ಟಿ ಸಿದ್ಧಪಡಿಸಲ್ಲ. ರಾಹುಲ್ ಗಾಂಧಿ ಅವರು ಒಮ್ಮೆಯೂ ಶೃಂಗೇರಿ ಮಠಕ್ಕೆ ಹೋಗಿರಲಿಲ್ಲ. ಅಜ್ಜಿ, ತಂದೆ, ತಾಯಿ ಎಲ್ಲರೂ ಮಠಕ್ಕೆ ಹೋಗಿದ್ದರು. ಹೀಗಾಗಿ ನಿನ್ನೆ ಮಠಕ್ಕೆ ಹೋಗಿದ್ದೆವು. ಇದರಲ್ಲಿ ಚರ್ಚೆ ಮಾಡುವ ವಿಷಯ ಏನಿದೆ. ರಾಹುಲ್ ಗಾಂಧಿ ಮೈಸೂರಿಗೆ ಬಂದಾಗ ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ. ಅದನ್ನು ಬಿಟ್ಟು ಇನ್ನುಳಿದ ವಿಚಾರ ನನಗೆ ಗೊತ್ತಿಲ್ಲ ಎಂದರು.

ಸಚಿವ ಮಹದೇವಪ್ಪ ಕ್ಷೇತ್ರ ಬದಲಾವಣೆ ವಿಚಾರದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಮಹದೇವಪ್ಪ ಹಿರಿಯ ರಾಜಕಾರಣಿ. ಅವರಿಗೆ ಏನು ಮಾಡಬೇಕು, ಏನು ಮಾಡಬಾರದು ಅಂತ ಗೊತ್ತಿದೆ. ಅವರು ಎಲ್ಲಿ ಸ್ಪರ್ಧೆ ಮಾಡಬೇಕು ಅಂತ ಹೈಕಮಾಂಡ್ ತಿರ್ಮಾನ ಮಾಡುತ್ತದೆ. ನಾನು ಅವರಿಗಿಂತ ಎರಡು ವರ್ಷ ಸಿನಿಯರ್ ಅಷ್ಟೇ. ನನಗೆ ಎಲ್ಲರು ಆಪ್ತರೇ. ಸ್ಪರ್ಧೆ ವಿಚಾರದಲ್ಲಿ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದರು.

ಹೆಚ್‍ಡಿಕೆ ಎಷ್ಟು ಕಡೆ ಬೇಕಾದ್ರೂ ಸ್ಪರ್ಧಿಸಲಿ: ಎಚ್.ಡಿ ಕುಮಾರಸ್ವಾಮಿ ಎರಡು ಕಡೆ ಸ್ಪರ್ಧೆ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಸಿಎಂ, ಕುಮಾರಸ್ವಾಮಿ ಎಷ್ಟು ಕಡೆ ಬೇಕಾದರೂ ನಿಲ್ಲಲಿ. ಅದು ಕುಮಾರಸ್ವಾಮಿಗೆ ಬಿಟ್ಟ ವಿಚಾರ. ಆದ್ರೆ ನಾವಂತು ಜೆಡಿಎಸ್, ಬಿಜೆಪಿಯನ್ನು ಸೋಲಿಸಿ ಮತ್ತೆ ಜನರ ಆರ್ಶಿವಾದ ಪಡೆಯಬೇಕಿದೆ. ಕರ್ನಾಟಕದ ಜನರು ಅತ್ಯಂತ ತಿಳುವಳಿಕೆ ಇರುವವರು. ಹೀಗಾಗಿ ಕಾಂಗ್ರೆಸ್ ಗೆ ಮತ್ತೆ ಆರ್ಶಿವಾದ ಮಾಡ್ತಾರೆ ಅಂತ ವಿಶ್ವಾಸ ಇದೆ ಎಂದು ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಹಿನ್ನೆಲೆಯಲ್ಲಿ ಧರ್ಮಗಳ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಹಕ್ಕು ಸರ್ಕಾರಕ್ಕಿಲ್ಲ ಎಂಬ ಸಂತೋಷ್ ಹೆಗ್ಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಅಲ್ಪಸಂಖ್ಯಾತ ಕಾಯ್ದೆಯಲ್ಲಿ ಧರ್ಮಗಳ ರಚನೆ ಸಂಬಂಧ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಇದರ ಅಡಿ ನಾವು ಕೆಲಸ ಮಾಡಿದ್ದೇವೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಎಜಿ ಅವರಿಂದ ಸಲಹೆ ಪಡೆದುಕೊಂಡಿದ್ದೇವೆ. ಅವುಗಳ ಆಧಾರದ ಮೇಲೆಯೇ ನಾವು ಶಿಫಾರಸ್ಸು ಮಾಡಿದ್ದೇವೆ. ಸಂವಿಧಾನದಲ್ಲೇ ಅದಕ್ಕೆ ಅಧಿಕಾರ ಇದೆ ಎಂದರು.

ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರ ಪುಸ್ತಕ ವಿಚಾರದ ಬಗ್ಗೆ ಮಾತನಾಡಿ, ಸೋತ ಮೇಲೆ ಏನು ಬೇಕಾದರೂ ಹೇಳಬಹುದು. ನಾವು ಅಕ್ರಮ ಮಾಡಿದ್ದ ದಾಖಲೆ ಅವರ ಬಳಿ ಇದ್ದರೆ ಕೋರ್ಟ್ ಗೆ ಹೋಗಲಿ. ಪುಸ್ತಕ ಬರೆದು ಸಾರ್ವಜನಿಕರಿಗೆ ಸುಳ್ಳು ಹೇಳುವುದರಿಂದ ಯಾವುದೇ ಪ್ರಯೋಜನ ಇಲ್ಲ. ಉಪಚುನಾವಣೆ ಸಂದರ್ಭದಲ್ಲೇ ನಮ್ಮ ವಿರುದ್ಧ ದಿನವೂ ಕೇಸ್ ಕೊಡುತ್ತಿದ್ದರು. ಜನ ಓಟು ಹಾಕಿದ್ದೂ ಆಯ್ತು. ನಾವು ಗೆದ್ದಿದ್ದೂ ಆಯ್ತು. ಅವರು ಏನು ಬೇಕಾದರೂ ಬರೆದುಕೊಳ್ಳಲಿ. ಈಗ ನಾನು ಏನೂ ಮಾತನಾಡುವುದಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *