ದೇವೇಗೌಡರ ಒತ್ತಡಕ್ಕೆ ಮಣಿದು ಯಾದಗಿರಿ ಎಸ್‌ಐ ಎತ್ತಂಗಡಿ

Public TV
2 Min Read

ಯಾದಗಿರಿ: ರಾಜಕೀಯ ವಿಚಾರವಾಗಿ ನಮ್ಮದು ದೋಸ್ತಿ ಇಲ್ಲ ಅನ್ನೋ ಯಡಿಯೂರಪ್ಪ ಅವರು ಆಡಳಿತಾತ್ಮಕ ವಿಷಯದಲ್ಲಿ ದೇವೇಗೌಡರ ಒತ್ತಡಕ್ಕೆ ಮಣಿದಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಯಾದಗಿರಿ ಸಿಟಿ ಸ್ಟೇಷನ್ ಪಿಎಸ್‌ಐ ಬಾಪುಗೌಡ ಪಾಟೀಲ್‌ರನ್ನ ಕಲಬುರಗಿಯ ಐಜಿ ಕಚೇರಿಗೆ ಸರ್ಕಾರ ಎತ್ತಂಗಡಿ ಮಾಡಿದೆ. ದೇವೇಗೌಡರು ಹೇಳಿದ್ದರಿಂದಾಗಿ ನಾನು ಕ್ರಮ ತೆಗೆದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಸಿಎಂ ಅವರ ಈ ಕ್ರಮವನ್ನು ದೇವೇಗೌಡರು ಸ್ವಾಗತಿಸಿದ್ದಾರೆ.

ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಯಡಿಯೂರಪ್ಪಗೆ ನಾನು ಪತ್ರ ಬರೆದಿದ್ದೆ. ಇದನ್ನೇ ಏನೋ ಸಾಧನೆ ಎಂದು ನಮ್ಮ ಕಾರ್ಯಕರ್ತರು ಹಿಗ್ಗೋದು ಬೇಡ. ದ್ವೇಷ ಸಾಧಿಸೋದೂ ಬೇಡ. ಶಾಂತವಾಗಿರಿ ಅಂತ ಸಲಹೆ ನೀಡಿದ್ದಾರೆ. ಆದರೆ ರಾಜಕೀಯ ಒತ್ತಡಕ್ಕೆ ಎಸ್‌ಐ ವರ್ಗಾವಣೆ ಮಾಡಿರೋದು ಈಗ ವ್ಯಾಪಕ ಚರ್ಚೆಗೀಡಾಗಿದೆ. ಇದನ್ನು ಓದಿ: ಯಾದಗಿರಿ ನಗರದಲ್ಲಿ ಸೆಕ್ಷನ್ 144 ಜಾರಿ- ಪ್ರತಿಭಟನೆಗೆ ಕೈಜೋಡಿಸಲಿರುವ ಮಾಜಿ ಪ್ರಧಾನಿ ಎಚ್‍ಡಿಡಿ

ಪಿಎಸ್‌ಐ ಅಮಾನತಿಗಾಗಿ ದೇವೇಗೌಡ ಹೋರಾಟವನ್ನು ಸಚಿವ ಸಿ.ಟಿ ರವಿ ಅಣಕಿಸಿದ್ದಾರೆ. ದೊಡ್ಡವರು ದೊಡ್ಡವರ ರೀತಿ ನಡೆದುಕೊಳ್ಳಬೇಕು. ದೊಡ್ಡವರು ಸಣ್ಣವರ ರೀತಿಯಲ್ಲಿ ನಡೆದುಕೊಳ್ಳಬಾರದು ಅಂದಿದ್ದಾರೆ. ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಪ್ರಶ್ನಿಸಿ ಯಾದಗಿರಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಶರಣಗೌಡ ಕಂದಕೂರು ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರನ್ನು ಎಸ್‌ಐ ಬಂಧಿಸಿದ್ದರು. ಬೇಲ್ ಮೇಲೆ ಹೊರ ಬಂದಿದ್ದ ಕಾರ್ಯಕರ್ತರು, ಎಸ್‌ಐ ವರ್ಗಾವಣೆಗೆ ದೇವೇಗೌಡರ ನೇತೃತ್ವದಲ್ಲಿ ಧರಣಿ ಮಾಡಿದ್ದರು. ಇದನ್ನು ಓದಿ: ಪಿಎಸ್‍ಐ ಅಮಾನತಿಗೆ ಜೆಡಿಎಸ್ ಪಟ್ಟು – ಅಮಾನತುಗೊಳಿಸಿದ್ರೆ ನಮ್ಮನ್ನೂ ಸಸ್ಪೆಂಡ್ ಮಾಡುವಂತೆ ಸಿಬ್ಬಂದಿ ಒತ್ತಡ

ಅಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಹೆಚ್‌ಡಿಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದ್ದರು. ಯಾದಗಿರಿ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ದೇವದುರ್ಗ ಆಡಿಯೋ ಪ್ರಕರಣದ ಹಿನ್ನೆಲೆ ನಮ್ಮ ಪಕ್ಷದ ಯುವ ಮುಖಂಡ ಶರಣಗೌಡ ಕಂದಕೂರ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ. ನಮ್ಮ ಹೋರಾಟ ಇಷ್ಟಕ್ಕೆ ಕೊನೆಯಾಗದು. ನಮ್ಮ ಪಕ್ಷದ ಯಾವುದೇ ಕಾರ್ಯಕರ್ತರ ವಿರುದ್ಧ ಈ ರೀತಿ ಹಗೆತನ ನಡೆದರೆ ನಾನು ಸಹಿಸಲಾರೆ. ನಮ್ಮ ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *