ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಲೋಕಾರ್ಪಣೆ ಮಾಡಿದ ಸಿಎಂ

Public TV
2 Min Read

ತುಮಕೂರು: ವಿಶ್ವದಲ್ಲೇ ಅತಿದೊಡ್ಡ ಸೋಲಾರ್ ಪಾರ್ಕ್ ಎಂಬ ಹೆಮ್ಮೆಗೆ ಪಾತ್ರವಾದ ತುಮಕೂರು ಜಿಲ್ಲೆ ಪಾವಗಡದಲ್ಲಿರುವ ಸೋಲಾರ್ ಪಾರ್ಕ್ ಅನ್ನು ಇಂದು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು.

2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಸೋಲಾರ್ ಪಾರ್ಕ್‍ನಲ್ಲಿ ಮೊದಲ ಹಂತದಲ್ಲಿ 600 ಮೆ,ವ್ಯಾ ವಿದ್ಯುತ್ ಉತ್ಪಾದನೆ ನಡೆಸುವ ಘಟಕ್ಕೆ ಚಾಲನೆ ನೀಡಲಾಯಿತು. ಸೋಲಾರ್ ಪಾರ್ಕ್ ಸುಮಾರು 13 ಸಾವಿರ ಎಕರೆ ವಿಸ್ತೀರ್ಣ ಹೊಂದಿದ್ದು, 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಸೌರ ಘಟಕವನ್ನು ಉದ್ಘಾಟನೆ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಎಂದಿನಂತೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಹಾಸ್ಯದ ದಾಟಿಯಲ್ಲಿ ವಾಗ್ದಾಳಿ ನಡೆಸಿದರು.

ಲೆಕ್ಕ ಕೊಡಿ: ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿ ಕೇಂದ್ರದಿಂದ ಬಂದ ಹಣ ಲೆಕ್ಕ ಕೇಳುತ್ತಾರೆ. ನಮಗೆ ಲೆಕ್ಕ ಕೇಳಲು ಇವರು ಯಾರು ಎಂದು ಪ್ರಶ್ನಿಸಿದರು. ಅಮಿತ್ ಶಾ ಅವರಗೆ ಸಂವಿಧಾನದ ಅರಿವೇ ಇಲ್ಲ. ಆದರೆ ಪ್ರಧಾನಿಗಳು ಕೂಡಾ ಅಮಿತ್ ಶಾ ರಂತೆ ನಡೆದುಕೊಳ್ಳುತ್ತಾರೆ. ರಾಜ್ಯಕ್ಕೆ ಮೂರು ಬಾರಿ ಬಂದರೂ ರೈತರ ಸಾಲ ಮನ್ನಾ, ಮಹಾದಾಯಿ ವಿವಾದ ಕುರಿತು ಪ್ರಸ್ತಾಪ ಮಾಡಿಲ್ಲ. ಇದರ ಜೊತೆಗೆ ಯಡಿಯೂರಪ್ಪ ಅವರಿಗೆ `ರೈತ ಬಂಧು’ ಎಂಬ ಬಿರುದು ನೀಡಲಾಗಿದೆ. ಆದರೆ ರೈತರ ಮೇಲೆ ಗೋಲಿಬಾರ್ ನಡೆಸಿದ್ದಾರೆ. ರೈತರ ಸಾಲ ಮನ್ನಾ ಮಾಡಲು ಕೇಳಿದರೆ ಹಣ ಪ್ರಿಂಟ್ ಮಾಡುತ್ತೇನಾ ಎಂದು ಕೇಳುತ್ತಾರೆ. ಮತ್ತೊಬ್ಬರು ಮಣ್ಣಿನ ಮಗ, ರೈತ ನಾಯಕರಂತೆ ಎಂದು ದೇವೇಗೌಡರು ಹಾಗೂ ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸದೇ ವ್ಯಂಗ್ಯವಾಡಿದರು.

ಕಾರ್ಯಕ್ರಮದ ಬಳಿಕ ಬಿಜೆಪಿ ಬಿಡುಗಡೆ ಮಾಡಿದ ಚಾರ್ಜ್ ಶೀಟ್ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಮಾಡಿದ ಅನಾಹುತಗಳಿಗೆ ಅವರು ಮೊದಲು ಪಶ್ಚಾತ್ತಾಪ ಪಡಬೇಕು. ಅವರ ಕಾಲದಲ್ಲೇ ಫೈಲ್ ಗಳಿಗೆ ಬೆಂಕಿ ಹಾಕಿದ್ದು. ರಾತ್ರಿ ಹೊತ್ತು ಟೆಂಡರ್ ಕರೆದಿದ್ದು. ಕಾರ್ಪೊರೇಷನ್ ಆಸ್ತಿಗಳನ್ನು ಅಡಮಾನ ಮಾಡಿದ್ದು. ಅದನ್ನೆಲ್ಲಾ ಬಿಟ್ಟು ನಮ್ಮ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ಮಾಡಲು ಅವರಿಗೆ ನೈತಿಕತೆ ಇಲ್ಲ. ರಾಜ್ಯದ ಬೊಕ್ಕಸ ಕೊಳ್ಳೆ ಹೊಡೆದು ಸಾಲ ಮಾಡಿಟ್ಟು ಹೋಗಿದ್ದಾರೆ. ಅವರ ಸಾಲವನ್ನು ನಾವು ತೀರಿಸಿದ್ದೇವೆ. ಅವರು ಮಾಡಿದ ಪಾಪಕ್ಕೆ ಅವರೇ ಪ್ರಾಯಶ್ಚಿತ ಪಡಲಿ ಎಂದು ವಾಗ್ದಾಳಿ ನಡೆಸಿದರು.

ಸೋಲಾರ್ ಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮದ ವೇಳೆ ಇಂಧನ ಸಚಿವ ಡಿಕೆ ಶಿವಕುಮಾರ್, ಸಚಿವ ಜಯಚಂದ್ರ ಸೇರಿದಂತೆ ಹಲವು ಸಚಿವರು ಭಾಗವಹಿಸಿದ್ದರು. ಇದನ್ನೂ ಓದಿ: ಮೋದಿಯಂತೆ ಮಿಮಿಕ್ರಿ ಮಾಡಿದ ಸಚಿವ ಸಂತೋಷ್ ಲಾಡ್- ವೇದಿಕೆಯಲ್ಲೇ ತಿರುಗೇಟು ನೀಡಿದ ಬಿಜೆಪಿ ಜಿಪಂ ಸದಸ್ಯ!

https://www.youtube.com/watch?v=kCE9VhsSuiA

Share This Article
Leave a Comment

Leave a Reply

Your email address will not be published. Required fields are marked *