– ಬ್ಲಾಕ್ ಮೇಲ್ ಮಾಡುತ್ತಿಲ್ಲ, ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ
– ನಮಗೆ ಬೇರೆ ಪಕ್ಷಗಳ ಆಯ್ಕೆಯೂ ಇದೆ
ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬರಲು ಬೆನ್ನೆಲುಬಾಗಿ ನಿಂತ ಮುಸ್ಲಿಂ (Muslim) ಸಮುದಾಯದವನ್ನು ಈಗ ನಡುನೀರಿನಲ್ಲಿ ಕೈಬಿಡಲಾಗುತ್ತಿದೆ ಎಂದು ಮಂಡ್ಯದ ಮುಸ್ಲಿಂ ಧರ್ಮಗುರುಗಳು ಆಕ್ರೋಶ ಹೊರಹಾಕಿದ್ದಾರೆ.

ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್ ಮತ್ತು ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರ ವಜಾ ನಿರ್ಧಾರದ ವಿರುದ್ಧ ಮಂಡ್ಯದ ಜಾಮಿಯಾ ಮಸೀದಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಧರ್ಮಗುರು ಅಬ್ದುಲ್ ಖದೀರ್, ನಮಗೆ ಬೇರೆ ಆಯ್ಕೆಗಳಿವೆ. ಮುಸ್ಲಿಂ ಸಮುದಾಯ 90% ಮತಗಳನ್ನು ಕಾಂಗ್ರೆಸ್‌ಗೆ ಹಾಕಿದೆ. ನಾವು ಎಲ್ಲೂ ಹೋಗಲ್ಲ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಆದರೆ ನಮಗೆ ಬೇರೆ ಪಕ್ಷಗಳ ಆಯ್ಕೆಯೂ ಇದೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಸಿದರು.

ನಿಮ್ಮನ್ನು ಹಗಲಿರುಳು ಕೆಲಸ ಮಾಡಿ ಅಧಿಕಾರದ ಕುರ್ಚಿಯ ಮೇಲೆ ಕೂರಿಸಿದವರು ನಾವು. ಅದೇ ನಮಗೆ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವುದು ತಿಳಿದಿದೆ. ನಜೀರ್ ಅಹಮ್ಮದ್ ಅವರನ್ನು ವಜಾ ಮಾಡುವ ಮೊದಲು ಕನಿಷ್ಠ ಒಂದು ನೋಟಿಸ್ ಕೂಡ ನೀಡಿಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲದೆ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ದೆಹಲಿ ಅಂಗಳದಲ್ಲಿ ಡಿಕೆ ಬ್ರದರ್ಸ್ ಪವರ್ ಗೇಮ್ – ಹೈಕಮಾಂಡ್ ಮುಂದೆ 2 ದಿನ, 2 ಭೇಟಿ, 2 ಖಡಕ್ ಷರತ್ತು!

ದಾವಣಗೆರೆಯಲ್ಲಿ (Davanagere) ಮುಸ್ಲಿಂ ನಾಯಕರನ್ನು ಟಾರ್ಗೆಟ್ ಮಾಡುತ್ತಿರುವ ವಿಚಾರದ ಬಗ್ಗೆ ಧರ್ಮಗುರುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಶಾಮನೂರು ಶಿವಶಂಕರಪ್ಪ ಅವರು ಬಹಿರಂಗವಾಗಿ ಬಿಜೆಪಿ ಅಭ್ಯರ್ಥಿ ಪರ ಮತ ಕೇಳಿದರೂ ಅವರ ವಿರುದ್ಧ ಕ್ರಮವಿಲ್ಲ. ಆದರೆ ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಒಂದು ಅವಕಾಶ ಕೇಳಿದ್ದೇ ತಪ್ಪಾಯಿತೇ? ಅಲ್ಲಿ ಶಾಮನೂರು ಕುಟುಂಬದವರೇ ಶಾಸಕ, ಸಚಿವ ಮತ್ತು ಸಂಸದರಾಗಿದ್ದಾರೆ. ಸಮರ್ಥ್ ಅವರಿಗೆ ಇನ್ನೂ ವಯಸ್ಸಿತ್ತು, ಮುಂದಿನ ಬಾರಿ ಅವಕಾಶ ನೀಡಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆ ಸಮಯದಲ್ಲಿ ನಮ್ಮನ್ನು ಬೇಕಾದಂತೆ ಬಳಸಿಕೊಳ್ಳುತ್ತೀರಿ. ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸುತ್ತೀರಿ. ಆದರೆ ಅಧಿಕಾರಕ್ಕೆ ಬಂದ ಮೇಲೆ ನಮಗೆ ಒಂದು ಗ್ಲಾಸ್ ನೀರು ಕೊಡಲು ಹಿಂದೆ ಮುಂದೆ ನೋಡುತ್ತೀರಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ನಾವು ಬ್ಲಾಕ್ ಮೇಲ್ ಮಾಡುತ್ತಿಲ್ಲ, ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಬಿಎಸ್ ವೈ ಮತ್ತು ನಿರಾಣಿ ಪರವಾಗಿ ಸ್ವಾಮೀಜಿಗಳು ನಿಂತಂತೆ ನಾವು ಇಷ್ಟು ದಿನ ಮಾಡಿರಲಿಲ್ಲ. ಆದರೆ ಈಗ ನಮ್ಮ ಅಸ್ತಿತ್ವದ ಪ್ರಶ್ನೆ ಬಂದಿದೆ. ನಜೀರ್ ಅಹಮ್ಮದ್ ಮತ್ತು ಅಬ್ದುಲ್ ಜಬ್ಬಾರ್ ಅವರನ್ನು ತಕ್ಷಣ ಪುನರ್ ನೇಮಕ ಮಾಡಬೇಕು. ಇಲ್ಲವಾದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವುದು ಗ್ಯಾರಂಟಿ ಎಂದು ಧರ್ಮಗುರುಗಳು ಸಂಘಟಿತ ಎಚ್ಚರಿಕೆ ನೀಡಿದ್ದಾರೆ.

