ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ಖಚಿತ: ಬಿ.ವೈ.ವಿಜಯೇಂದ್ರ

Public TV
1 Min Read

ಬೆಂಗಳೂರು: ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳೂ ಇಂದು ನಾಮಪತ್ರ ಸಲ್ಲಿಸಿದ್ದಾರೆ. ನಮ್ಮೆಲ್ಲ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸದಿಂದ ನುಡಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯಾಗಿ ವೈ.ಎ.ನಾರಾಯಣಸ್ವಾಮಿ, ಬೆಂಗಳೂರು ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿ ಅ.ದೇವೇಗೌಡ ಅವರು ಇಂದು ನಾಮಪತ್ರ ಸಲ್ಲಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷದ ಎಲ್ಲಾ ಹಿರಿಯ ಮುಖಂಡರು, ಜೆಡಿಎಸ್ ಪಕ್ಷದ ಸಮ್ಮುಖದಲ್ಲಿ ನಮ್ಮ ಇಬ್ಬರು ಅಭ್ಯರ್ಥಿಗಳು ಶುಭಗಳಿಗೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ವಿಧಾನಪರಿಷತ್‍ನಲ್ಲಿ ಅಪಾರ ಅನುಭವ ಇರುವ ನಮ್ಮ ಇಬ್ಬರು ಅಭ್ಯರ್ಥಿಗಳು ಮತ್ತೊಮ್ಮೆ ದೊಡ್ಡ ಅಂತರದಲ್ಲಿ ವಿಜಯಶಾಲಿಯಾಗಿ ಬರಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದೆವು. ಈ ಚುನಾವಣೆಯನ್ನೂ ಒಗ್ಗಟ್ಟಾಗಿ ಎದುರಿಸಿ ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

ಕಾಂಗ್ರೆಸ್ಸಿಗೆ ಉಳಿಗಾಲ ಇಲ್ಲ- ಅಶೋಕ್
ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಸಿದ್ದರಾಮಯ್ಯ ಸೇರಿ ಯಾರೇ ಪ್ರಚಾರ ಮಾಡಿದರೂ ಕಾಂಗ್ರೆಸ್ಸಿಗೆ ಇಲ್ಲಿ ಉಳಿಗಾಲ ಇಲ್ಲ ಎಂದು ಅಭಿಪ್ರಾಯಪಟ್ಟರು. ಎ.ನಾರಾಯಣಸ್ವಾಮಿ ಮತ್ತು ಎ.ದೇವೇಗೌಡರ ಗೆಲುವು ನಿಶ್ಚಿತ. ವೈ.ಎ.ನಾರಾಯಣಸ್ವಾಮಿ ಅವರು ಮಾಡಿರುವ ಕೆಲಸ, ಅವರ ಸಂಪರ್ಕ, ನಿರಂತರ ಸೇವೆ ಗಮನಿಸಿ ಅವರ ಆಶೀರ್ವಾದ ಖಚಿತ. ಬೆಂಗಳೂರಿನಲ್ಲಿ ಎ.ದೇವೇಗೌಡರು ಮತದಾರರ ಉತ್ತಮ ಒಲವನ್ನು ಹೊಂದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಸುಪ್ರೀಂನಿಂದಲೂ ರಿಲೀಫ್ – ಸಿಎಂ ಸ್ಥಾನದಿಂದ ಕೇಜ್ರಿವಾಲ್ ಪದಚ್ಯುತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ನಾಮಪತ್ರ ಸಲ್ಲಿಕೆ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಸಂಸದ ಪಿ.ಸಿ.ಮೋಹನ್, ಶಾಸಕ ಸುರೇಶ್ ಗೌಡ, ಮುಖಂಡ ಲಕ್ಷ್ಮೀನಾರಾಯಣ್, ಮಾಜಿ ಶಾಸಕ ಎಂ.ಕೃಷ್ಣರೆಡ್ಡಿ ಮತ್ತಿತರ ಮುಖಂಡರು ಹಾಜರಿದ್ದರು.

Share This Article