ಯಾವುದೇ ರಾಜ್ಯಕ್ಕೆ ಹೋದರೂ ಒಂದೇ ವಾಹನ ನಂಬರ್ – ಈಗಿನ ವ್ಯವಸ್ಥೆ ಹೇಗಿದೆ? ಯಾರಿಗೆ ಸಿಗಲಿದೆ?

Public TV
2 Min Read

ನವದೆಹಲಿ: ಖಾಸಗಿ ವಾಹನ ಹೊಂದಿರುವ ವ್ಯಕ್ತಿಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಸ್ತವ್ಯ ಬದಲಿಸಿದರೆ ವಾಹನದ ಮರು ನೋಂದಣಿ ಮಾಡುವುದು ದೊಡ್ಡ ಸಮಸ್ಯೆ. ಆದರೆ ಇನ್ನು ಮುಂದೆ ಈ ಸಮಸ್ಯೆ ಬರುವುದಿಲ್ಲ. ಈ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ‘ಬಿಎಚ್’ ಅಂದರೆ ಭಾರತ್ ಸೀರಿಸ್ ನಂಬರ್ ನೀಡಲು ಮುಂದಾಗಿದೆ.

ಈ ಸಂಖ್ಯೆ ಹೇಗಿರಲಿದೆ?
ಬಿಎಚ್ ಸೀರಿಸ್‍ನಡಿ ವಾಹನದ ಸಂಖ್ಯೆ YY BH #### XX  ಮಾದರಿಯಲ್ಲಿ ಇರಲಿದೆ. YY ಅಂದರೆ ವಾಹನ ನೋಂದಣಿಯಾದ ವರ್ಷದ ಎರಡು ಸಂಖ್ಯೆಗಳು, ಬಿಎಚ್ ಅಂದರೆ ಭಾರತ್ ಸೀರಿಸ್ ಕೋಡ್‍ನ ಎರಡು ಸಂಖ್ಯೆಗಳು,  #### ಅಂದರೆ ವಾಹನಕ್ಕೆ ನೀಡುವ ನಾಲ್ಕು ಅಂಕಿಗಳ ನೋಂದಣಿ ಸಂಖ್ಯೆ. XX  ಜಾಗದಲ್ಲಿ  ಎರಡು ಇಂಗ್ಲಿಷ್ ಅಕ್ಷರಗಳು ಇರಲಿವೆ.

ಈಗಿನ ವ್ಯವಸ್ಥೆ ಹೇಗಿದೆ?
ಬೇರೆ ರಾಜ್ಯದಲ್ಲಿ ಹೊಸ ನೋಂದಣಿ ಮಾಡಬೇಕಾದರೆ ಮೊದಲು ವಾಹನ ಮಾಲೀಕರು ನೋ ಆಬ್ಜೆಕ್ಷನ್ ಸರ್ಟಿಫಿಕೇಟ್(ಎನ್‍ಒಸಿ) ಮಾಡಬೇಕಾಗುತ್ತದೆ. ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 47ರ ಪ್ರಕಾರ ಒಂದು ರಾಜ್ಯದಲ್ಲಿ ನೋಂದಣಿಯಾದ ವಾಹನ ಮತ್ತೊಂದು ರಾಜ್ಯದಲ್ಲಿ ಬಳಸುವುದಿದ್ದರೆ ಅದಕ್ಕೆ ಆ ರಾಜ್ಯದಲ್ಲಿ ತೆರಿಗೆ ಪಾವತಿಸಬೇಕು. ಆ ರಾಜ್ಯದ ತೆರಿಗೆ ಪಾವತಿಸಲು 12 ತಿಂಗಳ ಗಡುವು ನೀಡಲಾಗುತ್ತಿದೆ. ಇಷ್ಟೇ ಅಲ್ಲದೇ ಇನ್ನೊಂದು ರಾಜ್ಯಕ್ಕೆ ಸ್ಥಳಾಂತರವಾದರೆ ಮತ್ತೆ ಹೊಸದಾಗಿ ರಸ್ತೆ ತೆರಿಗೆ ಕಟ್ಟಬೇಕು. ಇದರ ಜೊತೆ ಹಿಂದೆ ಇದ್ದ ರಾಜ್ಯದಲ್ಲಿ ಕಟ್ಟಲಾಗಿದ್ದ ತೆರಿಗೆಯನ್ನು ವಾಪಸ್ ಪಡೆಯಬೇಕಾದರೆ ಅರ್ಜಿ ಸಲ್ಲಿಸಬೇಕು. ಇದೊಂದು ದೀರ್ಘ ಪ್ರಕ್ರಿಯೆ ಆಗಿತ್ತು.

ತೆರಿಗೆ ಪಾವತಿ ಹೇಗೆ?
ಸರ್ಕಾರದ ಅಧಿಸೂಚನೆಯ ಪ್ರಕಾರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಎಚ್ ಸರಣಿಯ ವಾಹನಗಳಿಗೆ ಮಾತ್ರ ಈ ತೆರಿಗೆ ಅನ್ವಯವಾಗುತ್ತದೆ. 10 ಲಕ್ಷ ರೂ.ವರೆಗಿನ ವಾಹನಕ್ಕೆ ಶೇ.8 ರಷ್ಟು ತೆರಿಗೆ, 10 ರಿಂದ 20 ಲಕ್ಷ ರೂ. ಬೆಲೆ ಇರುವ ವಾಹನಕ್ಕೆ ಶೇ. 10, 20 ಲಕ್ಷಕ್ಕಿಂತ ಮೇಲ್ಪಟ್ಟ ವಾಹನಕ್ಕೆ ಶೇ.12 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದರಲ್ಲೂ ಎಲೆಕ್ಟ್ರಿಕ್ ವಾಹನಕ್ಕೆ ಶೇ.2 ರಷ್ಟು ಕಡಿಮೆ, ಡೀಸೆಲ್ ವಾಹನಕ್ಕೆ ಶೇ.2ರಷ್ಟು ಹೆಚ್ಚು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.  ಇದನ್ನೂ ಓದಿ: ರೋಹಿತ್ ಶರ್ಮಾ ಔಟ್ ಆಗ್ತಿದ್ದಂತೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ‘ಜಾರ್ವೋ’!

 

ಅವಧಿ ಹೇಗೆ?
ಬಿಎಚ್ ಸರಣಿಯಲ್ಲಿ 2 ವರ್ಷ ಅವಧಿ ಅಥವಾ 4/6/8 ವರ್ಷ ಹೀಗೆ ಮಲ್ಟಿಪಲ್ ಮಾದರಿಯಲ್ಲಿ ರಸ್ತೆ ತೆರಿಗೆ ಪಾವತಿಸಬಹುದು. 14ನೇ ವರ್ಷದ ನಂತರ ವಾರ್ಷಿಕವಾಗಿ ವಿಧಿಸಲಾಗುತ್ತದೆ. ಈ ವೇಳೆ ಆ ವಾಹನಕ್ಕೆ ಈ ಹಿಂದೆ ಸಂಗ್ರಹಿಸಿದ ಮೊತ್ತದ ಅರ್ಧದಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಆನ್‍ಲೈನ್ ಮೂಲಕವೇ ನಡೆಯಲಿದೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕ – ಇತಿಹಾಸ ನಿರ್ಮಿಸಿದ ಭವಿನಾಬೆನ್ ಪಟೇಲ್

ಜಾರಿ ಯಾವಾಗ?
ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ತನ್ನ ಆದೇಶದಲ್ಲಿ 2021ರ ಸೆ.15ರ ನಂತರ ಭಾರತ್ ಸೀರಿಸ್ ಅಡಿ ವಾಹನ ನೋಂದಣಿ ಮಾಡಲಾಗುವುದು ಎಂದು ಹೇಳಿದೆ.

ಈ ನಂಬರ್ ಯಾರಿಗೆ ಸಿಗಲಿದೆ?
ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ತಮ್ಮ ಕಚೇರಿಗಳನ್ನು ಹೊಂದಿರುವ ಖಾಸಗಿ ಕಂಪನಿಗಳ ನೌಕಕರರಿಗೆ, ರಕ್ಷಣಾ ಪಡೆಗಳ ಸಿಬ್ಬಂದಿ, ಕೇಂದ್ರ/ರಾಜ್ಯ ಸರ್ಕಾರದ ನೌಕರರಿಗೆ, ಸರ್ಕಾರಿ ಸ್ವಾಮ್ಯದ ಉದ್ಯಮಗಳ ನೌಕರರ ಖಾಸಗಿ ವಾಹನಗಳಿಗೆ ಹೊಸ ಸರಣಿಯಲ್ಲಿ ನಂಬರ್ ನೀಡಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *