ಕಿಡ್ನಾಪ್ ಮಾಡ್ತಿದ್ದಾನೆಂದು ಊಬರ್ ಚಾಲಕನಿಗೆ ಗುಂಡಿಕ್ಕಿ ಕೊಂದ ಮಹಿಳೆ

Public TV
1 Min Read

ಆಸ್ಟಿನ್: ತನ್ನನ್ನು ಅಪಹರಿಸಲಾಗುತ್ತಿದೆ ಎಂದು ತಪ್ಪಾಗಿ ತಿಳಿದ ಅಮೆರಿಕದ (America) ಮಹಿಳೆಯೊಬ್ಬರು ಊಬರ್ (Uber) ಚಾಲಕನಿಗೆ ಗುಂಡು ಹಾರಿಸಿ ಹತ್ಯೆಗೈದ ಘಟನೆ ಟೆಕ್ಸಾಸ್‍ನಲ್ಲಿ ನಡೆದಿದೆ.

ಫೋಬೆ ಕೊಪಸ್ (48) ಎಂಬ ಮಹಿಳೆ ಚಾಲಕ ಡೇನಿಯಲ್ ಪೀಡ್ರಾ ಗಾರ್ಸಿಯಾ ಅವರಿಗೆ ಗುಂಡು ಹಾರಿಸಿದ್ದಾಳೆ ಎಂದು ತಿಳಿದುಬಂದಿದೆ. ಆಕೆಯನ್ನು 1.5 ಮಿಲಿಯನ್ ಡಾಲರ್ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಎಲ್ ಪಾಸೊ ಪೊಲೀಸರು ತಿಳಿಸಿದ್ದಾರೆ. ಕೆಂಟುಕಿಯಿಂದ ಬಂದಿದ್ದ ಕೊಪಸ್ ತನ್ನ ಗೆಳೆಯನನ್ನು ಭೇಟಿ ಮಾಡಲು ಟೆಕ್ಸಾಸ್‍ಗೆ ಊಬರ್‌ನಲ್ಲಿ ತೆರಳಲು ನಿರ್ಧರಿಸಿದ್ದಳು. ಹೆದ್ದಾರಿಯಲ್ಲಿ ಮೆಕ್ಸಿಕೋ (Mexico) ಚಿಹ್ನೆಗಳನ್ನು ನೋಡಿ ತನ್ನನ್ನು ಅಪಹರಿಸುತ್ತಿದ್ದಾನೆ ಎಂದು ತಿಳಿದ ಆಕೆ ಈ ಕೃತ್ಯ ಎಸಗಿದ್ದಾಳೆ. ಇದನ್ನೂ ಓದಿ: 1,500 ಮಹಿಳೆಯರಿಂದ ಸೇನಾ ವಾಹನಗಳಿಗೆ ಮುತ್ತಿಗೆ – 12 ದಾಳಿಕೋರರ ಬಿಡುಗಡೆ

ಗುಂಡು ಹಾರಿಸುತ್ತಿದ್ದಂತೆ ಕಾರು ಅಪಘಾತಕ್ಕೀಡಾಗಿದೆ. ಬಳಿಕ ಪೊಲೀಸರಿಗೆ ಕರೆ ಮಾಡುವ ಮೊದಲು, ಮಹಿಳೆ ಘಟನೆಯ ಫೋಟೋ ತೆಗೆದು ಅದನ್ನು ತನ್ನ ಗೆಳೆಯನಿಗೆ ಕಳುಹಿಸಿದ್ದಾಳೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಊಬರ್ ಸಂಸ್ಥೆ ಹಿಂಸಾಚಾರವನ್ನು ನಾವು ಸಹಿಸುವುದಿಲ್ಲ. ಮಹಿಳೆಯನ್ನು ಊಬರ್ ಸೇವೆಯಿಂದ ನಿಷೇಧಿಸಲಾಗಿದೆ ಎಂದು ಹೇಳಿಕೊಂಡಿದೆ. ಅಲ್ಲದೇ ಈ ಬಗ್ಗೆ ಚಾಲಕನ ಕುಟುಂಬಸ್ಥರು ಆರೋಪಿಯ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದಿದ್ದಾರೆ. ಘಟನೆಯ ಬಳಿಕ ಚಾಲಕನ ಕುಟುಂಬದ ಆಧಾರವೇ ಇಲ್ಲದಂತಾಗಿದೆ ಎಂದು ಕುಟುಂಬಸ್ಥರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ದೆಹಲಿ ರೈಲ್ವೇ ನಿಲ್ದಾಣದಲ್ಲಿ ವಿದ್ಯುತ್ ಶಾಕ್‍ನಿಂದ ಮಹಿಳೆ ಸಾವು

Share This Article