ವಾಷಿಂಗ್ಟನ್: ಅಮೆರಿಕದ (America) ಮಿಲಿಟರಿ ವಿಮಾನಗಳಿಗೆ ಇಂಧನ ಪೂರೈಸಲು ನಿಯೋಜನೆಗೊಂಡಿದ್ದ ಬೋಯಿಂಗ್ KC-135 ಸ್ಟ್ರಾಟೋಟ್ಯಾಂಕರ್ (Boeing KC-135 Stratotanker) ವಿಮಾನ ಇರಾನ್‌ನ ಪರ್ಷಿಯನ್ ಕೊಲ್ಲಿಯ ಮೇಲೆ ಹಾರುವಾಗ ಎಮರ್ಜೆನ್ಸಿ (7700) ಸಂಕೇತ ರವಾನಿಸಿ ನಾಪತ್ತೆಯಾಗಿದೆ. ವಿಮಾನದೊಳಗೆ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಫ್ಲೈಟ್‌ರಾಡಾರ್ ದತ್ತಾಂಶದಲ್ಲಿ ದಾಖಲಾಗಿದೆ.
ವಿಮಾನವು ಕತಾರ್ (Qatar) ಮೇಲೆ ಹಾರುವಾಗ ಸಂಪರ್ಕ ಕಳೆದುಕೊಂಡಿದೆ. ಸಂಪರ್ಕ ಕಳೆದುಕೊಳ್ಳುವ ಮುನ್ನ ಯುಎಇನಲ್ಲಿರುವ ಅಲ್ ಧಫ್ರಾ ವಾಯುನೆಲೆಯಿಂದ ಅದು ಹಾರಾಟ ನಡೆಸಿತ್ತು. ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಸೇನೆಗೆ ಬೆಂಬಲವಾಗಿ ವಿಮಾನವು ಮಧ್ಯಪ್ರಾಚ್ಯದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ವಿಮಾನ ನಾಪತ್ತೆಯಲ್ಲಿ ಇರಾನ್ ಕೈವಾಡ ಇದೆಯೇ ಎಂಬ ಬಗ್ಗೆ ಅಮೆರಿಕದ ಕಡೆಯಿಂದ ಯಾವ ಹೇಳಿಕೆಗಳು ಬಂದಿಲ್ಲ. ಇದನ್ನೂ ಓದಿ: OPEC ನಿಂದ ಯುಎಇ ಹೊರಕ್ಕೆ; ಜಾಗತಿಕ ತೈಲ ಮಾರುಕಟ್ಟೆ ಮೇಲೆ ಎಫೆಕ್ಟ್ ಏನು? ಭಾರತಕ್ಕೆ ಲಾಭ?
ವಿಮಾನ ಕೆಳಗೆ ಇಳಿಯಲು ಪ್ರಾರಂಭಿಸುವ ಮೊದಲು, ಸ್ವಲ್ಪ ಸಮಯದವರೆಗೆ ಗಾಳಿಯಲ್ಲಿ ವೃತ್ತಾಕಾರದ ಮಾದರಿಯಲ್ಲಿ ಹಾರಾಡಿದೆ ಎಂದು ಟ್ರ್ಯಾಕಿಂಗ್ ದತ್ತಾಂಶ ತೋರಿಸಿದೆ. ತುರ್ತು ಪರಿಸ್ಥಿತಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
KC-135 ಸ್ಟ್ರಾಟೋಟ್ಯಾಂಕರ್ ಎಂದರೇನು?
KC-135 ಸ್ಟ್ರಾಟೋಟ್ಯಾಂಕರ್ ನಾಲ್ಕು ಟರ್ಬೊಫ್ಯಾನ್ ಎಂಜಿನ್ ಹೊಂದಿರುವ ಮಿಲಿಟರಿ ವಿಮಾನವಾಗಿದೆ. ಇದನ್ನು ಕಾರ್ಯಾಚರಣೆಯಲ್ಲಿರುವ ಯುದ್ಧ ವಿಮಾನಗಳಿಗೆ ಇಂಧನ ತುಂಬಲು ಬಳಸಲಾಗುತ್ತದೆ. ಇಂಧನ ತುಂಬುವ ವ್ಯವಸ್ಥೆಯ ಮೇಲೆ ಸರಕು ಸಾಗಾಣಿಕೆಗೆ ಅನುಕೂಲವಾಗುವ ರೀತಿಯಲ್ಲಿ ಈ ವಿಮಾನ ವಿನ್ಯಾಸಗೊಳಿಸಲಾಗಿದೆ. 60 ವರ್ಷಗಳಿಗೂ ಹೆಚ್ಚು ಕಾಲ ಅಮೆರಿಕ ವಾಯುಪಡೆಯ ಕಾರ್ಯಾಚರಣೆಗಳಲ್ಲಿ KC-135 ಸ್ಟ್ರಾಟೋಟ್ಯಾಂಕರ್ ಬಳಕೆಯಾಗಿದೆ. ಇದು ಸುಮಾರು 37,600 ಕೆಜಿ ಸರಕು, ಹಲವಾರು ಜನ ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಮಾರ್ಚ್‌ನಲ್ಲಿ ಪಶ್ಚಿಮ ಇರಾಕ್‌ನಲ್ಲಿ ಇರಾನ್ ದಾಳಿಗೆ ಯುಎಸ್ ಮಿಲಿಟರಿ KC -135 ವಿಮಾನ ಪತನಗೊಂಡಿತ್ತು. ಇರಾನ್ ಬೆಂಬಲಿತ ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಇದನ್ನೂ ಓದಿ: 24 ಗಂಟೆಯಲ್ಲಿ ಇಸ್ರೇಲಿಗೆ ಅಮೆರಿಕದಿಂದ ಬಂತು 6,500 ಟನ್ ಯುದ್ಧಸಾಮಗ್ರಿ – ಮತ್ತೆ ಯುದ್ಧ ಆರಂಭ?

