– ಲೆಬನಾನ್ – ಇಸ್ರೇಲ್ ಮಾತುಕತೆಗೆ ಅಮೆರಿಕ ಮಧ್ಯಸ್ಥಿಕೆ
– ಮಾತುಕತೆಗೆ ಮುನ್ನವೇ ಇಸ್ರೇಲ್‌ನಿಂದ ಏರ್‌ಸ್ಟ್ರೈಕ್
ಇಸ್ಲಾಮಾಬಾದ್: ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಇರಾನ್ ಮತ್ತು ಅಮೆರಿಕ (Iran-US) ನಡುವೆ 2ನೇ ಸುತ್ತಿನ ಮಾತುಕತೆಗೆ ಪಾಕ್ ಪ್ರಸ್ತಾಪ ಇಟ್ಟಿದೆ. ಇಸ್ಲಾಮಾಬಾದ್‌ನಲ್ಲೇ 2ನೇ ಹಂತದ ಸಂಧಾನ ಸಭೆ ನಡೆಸಲು ಪಾಕಿಸ್ತಾನ (Pakistan) ಕರೆ ನೀಡಿದೆ ಎಂದು ಪಾಕ್‌ನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಏಪ್ರಿಲ್ 11 ರಿಂದ ಇಸ್ಲಾಮಾಬಾದ್‌ನಲ್ಲಿ (Islamabad) ಅಮೆರಿಕ ಮತ್ತು ಇರಾನ್ ನಿಯೋಗಗಳ ನಡುವೆ ಯುದ್ಧ ಕೊನೆಗೊಳಿಸಲು 21 ಗಂಟೆಗಳ ಮಾತುಕತೆ ನಡೆದಿತ್ತು. ಸಂಸದೀಯ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ನೇತೃತ್ವದ ಇರಾನಿನ ನಿಯೋಗವು, ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಶ್ವೇತಭವನದ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಅಳಿಯ ಜೇರೆಡ್ ಕುಶ್ನರ್ ಸೇರಿದಂತೆ ತಮ್ಮ ಅಮೆರಿಕದ ಸಹವರ್ತಿಗಳೊಂದಿಗೆ ಮಾತುಕತೆ ನಡೆಸಿತ್ತು. ಆದ್ರೆ 21 ಗಂಟೆಗಳ ಮಾತುಕತೆ ವಿಫಲವಾಯಿತು. ಇದರಿಂದ ಮುಖಭಂಗ ಅನುಭವಿಸಿದ ಪಾಕ್ ಮತ್ತೆ ತನ್ನ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಮಾತುಕತೆಗೆ ಆಹ್ವಾನಿಸಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಇರಾನ್ ನಮ್ಮ ಬೇಡಿಕೆಗಳನ್ನು ಸ್ವೀಕರಿಸಲು ಆಸಕ್ತಿ ತೋರಿಸಿದ್ರೆ ಮಾತ್ರ ಮಾತುಕತೆಗೆ ಬರುತ್ತೇವೆ ಎಂದು ಹೇಳಿದ್ದಾರೆ.
ಈಗಾಗಲೇ ಟ್ರಂಪ್ ಘೋಷಿಸಿರುವ ಕದನ ವಿರಾಮ ಸಮಯವು ಏ.21 ಕ್ಕೆ ಮುಕ್ತಾಯಗೊಳ್ಳಲಿದೆ. ಅಷ್ಟರಲ್ಲಿ 2ನೇ ಹಂತದ ಮಾತುಕತೆಗೆ ವೇದಿಕೆ ಕಲ್ಪಿಸಿ ಸಂಧಾನ ನಡೆಸಲು ಪಾಕಿಸ್ತಾನ ಹೆಣಗಾಡುತ್ತಿದೆ.
ಇಸ್ರೇಲ್ – ಲೆಬನಾನ್ ಮಧ್ಯೆ ನೇರಮಾತುಕತೆ
ಈ ಮಧ್ಯೆ ಇಸ್ರೇಲ್ – ಲೆಬನಾನ್ ಜೊತೆಗೆ ನೇರ ಮಾತುಕತೆ ನಡೆಸಲು ಮುಂದಾಗಿದ್ದು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಕೂಡ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮಾತುಕತೆಗೂ ಮುನ್ನವೇ ಬಾಂಬ್ ದಾಳಿ
ಇನ್ನೂ ಅಮೆರಿಕ ಮಧ್ಯಸ್ಥಿತಿಕೆಯಲ್ಲಿ ಲೆಬನಾನ್ ಜೊತೆಗೆ ಮಾತುಕತೆಗೆ ಒಪ್ಪಿರುವ ಇಸ್ರೇಲ್, ಸಂಧಾನ ಆರಂಭಕ್ಕೂ ಮುನ್ನವೇ ಬಾಂಬ್ ದಾಳಿ ನಡೆಸಿದೆ. ಪೂರ್ವ ಲೆಬನಾನ್‌ನ ಮಶ್ಘರಾ ಮತ್ತು ಸಹ್ಮಾರ್ ಪಟ್ಟಣಗಳನ್ನ ಗುರಿಯಾಗಿಸಿಕೊಂಡು ಇಸ್ರೇಲಿ ವೈಮಾನಿಕ ದಾಳಿ ನಡೆಸಿದೆ. ಇದು ಹೆಜ್ಬುಲ್ಲಾ ಬಂಡುಕೋರರನ್ನ ಕೆರಳಿಸಿದ್ದು, ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.



