ನಾಳೆ ಮತ್ತೆ ಮಂಡ್ಯಕ್ಕೆ ಮೋದಿ ಭೇಟಿ – ಪ್ರಧಾನಿಗಳ ಸ್ವಾಗತಕ್ಕೆ ಮೈಸೂರು ಪೇಟ; ಏನಿದರ ವಿಶೇಷ?

2 Min Read

– ಮೂರನೇ ಬಾರಿ ಸಕ್ಕರೆ ನಾಡಿಗೆ ಪ್ರಧಾನಿಗಳ ಭೇಟಿ

ಮೈಸೂರು/ಮಂಡ್ಯ: ಸಕ್ಕರೆ ನಾಡು ಮಂಡ್ಯಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ. ಮಂಡ್ಯದಲ್ಲಿ ಮೂರು ವರ್ಷಗಳ ಹಿಂದೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಉದ್ಘಾಟಿಸಿದ್ದ ಪ್ರಧಾನಿ ಮೋದಿ ಅವರು, ಇದೀಗ ಧಾರ್ಮಿಕ ಕಾರ‍್ಯಕ್ರಮಕ್ಕಾಗಿ ಏ.15 ರಂದು ಆದಿಚುಂಚನಗಿರಿ ಶ್ರೀ ಮಠಕ್ಕೆ ಬರುತ್ತಿದ್ದಾರೆ.

ನಾಗಮಂಗಲ ತಾಲೂಕಿನ 1,800 ವರ್ಷಗಳ ಇತಿಹಾಸವೊಂದಿರುವ ಆದಿಚುಂಚನಗಿರಿ ಮಠಕ್ಕೆ ಏ.15 ರಂದು (ನಾಳೆ) ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ. ಇಲ್ಲಿ ನಿರ್ಮಾಣವಾಗಿರುವ 80 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಭೈರವೈಕ್ಯ ಮಂದಿರನ್ನು ಅವರು ಉದ್ಘಾಟನೆ ಮಾಡಲಿದ್ದಾರೆ.

ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶ್ರೀ ಕ್ಷೇತ್ರದಲ್ಲಿ ಏ.10 ರಿಂದ 12ರ ವರೆಗೆ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೂಲ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ‍್ಯಕ್ರಮ ಆಯೋಜಿಸಿದೆ. ಇದರ ಅಂಗವಾಗಿ ಭೈರವೈಕ್ಯ ಮಂದಿರದ ಕುಂಭಾಭಿಷೇಕ ಮಹೋತ್ಸವವೂ ನಡೆಯಲಿದೆ. ಇದರ ಭಾಗವಾಗಿ ಏ.15 ರಂದು ಭೈರವೈಕ್ಯ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

ಈ ನಿಟ್ಟಿನಲ್ಲಿ ಶ್ರೀ ಮಠ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕಳೆದ 8 ವರ್ಷಗಳಿಂದ ನಿರ್ಮಾಣದ ಹಂತದಲ್ಲಿದ್ದ ಮಂದಿರ ಇದೀಗ ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಇನ್ನೂ ಸಕ್ಕರೆ ನಾಡು ಮಂಡ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿಗಳಿಗೆ ವಿಶೇಷ ಉಡುಗೊರೆಯೊಂದು ಸಿದ್ಧವಾಗಿದೆ.

ನಾಲ್ವಡಿ ಒಡೆಯರ್‌ ಮಾದರಿಯ ಪೇಟ ಗಿಫ್ಟ್‌
ಪ್ರಧಾನಿ ನರೇಂದ್ರ ಮೋದಿ ಅವರು ಆದಿಚುಂಚನಗಿರಿ ಶ್ರೀ ಮಠಕ್ಕೆ ಭೇಟಿ ನೀಡುವ ವೇಳೆ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಮಾದರಿಯ ಪೇಟವನ್ನ ಉಡುಗೊರೆಯಾಗಿ ನೀಡಲು ಸಿದ್ಧತೆ ನಡೆದಿದೆ. ಬನಾರಸ್ ಸೀರೆ, ಮೋಲ್ಡ್ ಬಳಸಿ ಪೇಟ ತಯಾರಿಸಲಾಗಿದೆ.

ಕಲಾವಿದ ನಂದನ್‌ ಸಿಂಗ್‌ ಅವರು ಈ ಪೇಟವನ್ನು ಸಿದ್ಧಗೊಳಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಧರಿಸುತ್ತಿದ್ದ ಮಾದರಿಯ ಪೇಟ ಇದಾಗಿದ್ದು, ಕೆಂಪು ವರ್ಣದ ಮೈಸೂರು ರೇಷ್ಮೆ, ಬನಾರಸ್‌ ಸಾಫ್ಟ್‌ ಸಿಲ್ಕ್‌ ಅನ್ನು ಬಳಸಲಾಗಿದೆ. ಮಧ್ಯದಲ್ಲಿ ಮೈಸೂರಿನ ರಾಜ ಲಾಂಛನ ಗಂಡುಬೇರುಂಡವನ್ನು ಸೇರಿಸಲಾಗಿದೆ. ಎರಡೂಕಡೆ ಸಣ್ಣ ಸಣ್ಣ ಮುತ್ತುಗಳನ್ನು ಪೋಣಿಸಲಾಗಿದೆ. ಇದಕ್ಕಾಗಿ ಕಲಾವಿದ ನಂದನ್‌ ಸಿಂಗ್‌ 5 ದಿನಗಳ ಕಾಲ ಶ್ರಮಿಸಿದ್ದಾರೆ.

3ನೇ ಬಾರಿ ಮಂಡ್ಯಕ್ಕೆ ಮೋದಿ
ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದ ಅವರು, 2ನೇ ಭೇಟಿಯು ಅಭಿವೃದ್ಧಿ ಯೋಜನೆಯ ಉದ್ಘಾಟನೆಯಾಗಿತ್ತು. ಈಗ 3ನೇಯದ್ದು ಧಾರ್ಮಿಕ ಭೇಟಿಯಾಗಿದೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ಸಂಪೂರ್ಣ ಜಾಗೃತಗೊಂಡಿದ್ದು, ಆದಿಚುಂಚನಗಿರಿ ಶ್ರೀ ಕ್ಷೇತ್ರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಹಾಕಲಾಗಿದೆ.

2004ರ ವಿಧಾನಸಭೆ ಚುನಾವಣೆ ವೇಳೆ ಪ್ರಚಾರಕ್ಕಾಗಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ಬಂದಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಮಹೇಶ್‌ಚಂದ್‌ ಪರವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದರು. 2023ರ ಮಾ. 12 ರಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಉದ್ಘಾಟಿಸಿದ್ದರು. ಅಂದು ಮಂಡ್ಯದಲ್ಲಿ ರೋಡ್‌ ಶೋ ನಡೆಸಿದ್ದ ಪ್ರಧಾನಿ ಅವರು, ಮಂಡ್ಯ ತಾಲೂಕು ಹನಕೆರೆಯ ಸೇತುವೆ ಆರಂಭದ ಸ್ಥಳದಲ್ಲಿ ರಿಬ್ಬನ್‌ ಕತ್ತರಿಸುವ ಮೂಲಕ ಬೆಂಗಳೂರು-ಮೈಸೂರು ರಾಷ್ಟ್ರೀಯ ಎಕ್ಸ್‌ಪ್ರೆಸ್‌ ಹೈವೇಯನ್ನು ಲೋಕಾರ್ಪಣೆ ಮಾಡಿದ್ದರು. ನಂತರ ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೊನಿ ಬಳಿ ನಡೆದ ವೇದಿಕೆ ಕಾರ‍್ಯಕ್ರಮ ಉದ್ಘಾಟಿಸಿದ್ದರು.

Share This Article