ಮೇ 4ರವರೆಗೆ ಪೊಲೀಸ್‌, ಎಲ್ಲಆಡಳಿತ ಅಧಿಕಾರಿಗಳ ರಜೆ ರದ್ದು- ಯೋಗಿ ಆದಿತ್ಯನಾಥ್‌

Public TV
2 Min Read

– ರಜೆಯಲ್ಲಿರುವವರು 24 ಗಂಟೆಯ ಒಳಗಡೆ ಹಾಜರಾಗಬೇಕು

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಮೇ 4 ರವರೆಗೆ ರಾಜ್ಯದ ಎಲ್ಲಾ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಿದೆ. ಅಷ್ಟೇ ಅಲ್ಲದೇ ರಜೆಯಲ್ಲಿರುವ ಎಲ್ಲರೂ 24 ಗಂಟೆಯ ಒಳಗಡೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದೆ.

ಮುಂಬರುವ ಹಬ್ಬಗಳಲ್ಲಿ ಶಾಂತಿ ಕಾಪಾಡಲು ಧಾರ್ಮಿಕ ಮುಖಂಡರು ಮತ್ತು ಸಮಾಜದ ಗಣ್ಯರ ಜೊತೆ ಸಂವಾದ ನಡೆಸುವಂತೆ ಪೊಲೀಸ್ ಠಾಣೆಯಿಂದ ಆರಂಭವಾಗಿ ಎಡಿಜಿ ಹಂತದ ಅಧಿಕಾರಿಗಳಿಗೆ ಯೋಗಿ ಆದಿತ್ಯನಾಥ್‌ ಸೂಚಿಸಿದ್ದಾರೆ. ಧಾರ್ಮಿಕ ಸ್ಥಳಗಳಲ್ಲಿ ಮೈಕ್‌ಗಳನ್ನು ಬಳಸಬಹುದು. ಆದರೆ ಹೊಸದಾಗಿ ಅಳವಡಿಕೆಗೆ ಅನುಮತಿ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂದೂಗಳು 4 ಮಕ್ಕಳನ್ನು ಹೊಂದಿರಬೇಕು, ಇಬ್ಬರನ್ನು RSSಗೆ ಕೊಡಬೇಕು: ಋತಂಭರಾ

ramzan

ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಯೋಗಿ, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಬೇಕು ಮತ್ತು ಪರಿಸ್ಥಿತಿಯ ಮೇಲೆ ನಿಗಾ ಇಡಲು ಡ್ರೋನ್‌ಗಳನ್ನು ಬಳಸಬೇಕು. ಪ್ರತಿದಿನ ಸಂಜೆ, ಪೊಲೀಸ್ ಪಡೆಗಳು ಫುಟ್ ಪ್ಯಾಟ್ರೋಲಿಂಗ್‌ ಮಾಡಬೇಕು ಮತ್ತು ಪೊಲೀಸ್ ಪ್ರತಿಕ್ರಿಯೆ ವಾಹನಗಳು (ಪಿಆರ್‌ವಿಗಳು) ಸಕ್ರಿಯವಾಗಿರಬೇಕು ಎಂದು ಆದೇಶಿಸಿದ್ದಾರೆ.

ಮುಂದಿನ ದಿನಗಳಲ್ಲಿ ಹಲವು ಪ್ರಮುಖ ಧಾರ್ಮಿಕ ಹಬ್ಬಗಳು ನಡೆಯಲಿವೆ. ರಂಜಾನ್ ಮಾಸ ನಡೆಯುತ್ತಿದೆ. ಈದ್ ಹಬ್ಬ ಮತ್ತು ಅಕ್ಷಯ ತೃತೀಯ ಒಂದೇ ದಿನ ನಡೆಯುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಗಲಾಟೆ ನಡೆಯದೇ ಇರಲು ಪೊಲೀಸರು ಸೂಕ್ಷ್ಮವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಯೋಗಿ ಹೇಳಿದ್ದಾರೆ.

ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ ಸಿದ್ಧಾಂತದ ಪ್ರಕಾರ ಅವರವರ ಪೂಜಾ ವಿಧಾನವನ್ನು ಅನುಸರಿಸುವ ಸ್ವಾತಂತ್ರ್ಯವಿದೆ. ಮೈಕ್ ಬಳಸಬಹುದಾದರೂ ಆವರಣದಿಂದ ಶಬ್ದ ಬರದಂತೆ ನೋಡಿಕೊಳ್ಳಬೇಕು. ಇತರರಿಗೆ ಇದರಿಂದ ಯಾವುದೇ ತೊಂದರೆಯಾಗಬಾರದು ಎಂದಿದ್ದಾರೆ. ಇದನ್ನೂ ಓದಿ: ಮಸೀದಿಯಿರುವ 100 ಮೀ. ಒಳಗೆ ಹನುಮಾನ್ ಚಾಲೀಸಾ ಪಠಿಸುವಂತಿಲ್ಲ: ಮಹಾರಾಷ್ಟ್ರ ಸರ್ಕಾರ

ಅನುಮತಿ ಇಲ್ಲದೆ ಯಾವುದೇ ಧಾರ್ಮಿಕ ಮೆರವಣಿಗೆ ನಡೆಸಬಾರದು. ಅನುಮತಿ ನೀಡುವ ಮುನ್ನ ಆಯೋಜಕರಿಂದ ಶಾಂತಿ ಸೌಹಾರ್ದತೆ ಕಾಪಾಡುವ ಬಗ್ಗೆ ಅಫಿಡವಿಟ್ ತೆಗೆದುಕೊಳ್ಳಬೇಕು. ಸಾಂಪ್ರದಾಯಿಕ ಧಾರ್ಮಿಕ ಮೆರವಣಿಗೆಗಳಿಗೆ ಮಾತ್ರ ಅನುಮತಿ ನೀಡಬೇಕು. ಹೊಸ ಕಾರ್ಯಕ್ರಮಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಸೂಚಿಸಿದ್ದಾರೆ.

ಕಿಡಿಗೇಡಿತನದ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಾತಾವರಣ ಹಾಳು ಮಾಡಲು ಯತ್ನಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಸುಸಂಸ್ಕೃತ ಸಮಾಜದಲ್ಲಿ ಅಂತಹವರಿಗೆ ಜಾಗ ಇರಬಾರದು ಎಂದಿದ್ದಾರೆ.

ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪೂಜೆಗಳು ನಿಗದಿತ ಸ್ಥಳದಲ್ಲಿ ಮಾತ್ರ ನಡೆಯಬೇಕು. ಈ ಕಾರ್ಯಕ್ರಮಗಳಿಂದ ಸಂಚಾರಕ್ಕೆ ಅಡ್ಡಿ ಆಗದಂತೆ ನೋಡಿಕೊಳ್ಳಬೇಕು ಎಂದು ಎಂದು ಯೋಗಿ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *