ಜರ್ಮನಿಯಲ್ಲಿ ಉಡುಪಿ ಎಂಜಿನಿಯರ್ ಹತ್ಯೆ – ಕುಂದಾಪುರದಲ್ಲೇ ಅಂತ್ಯ ಸಂಸ್ಕಾರಕ್ಕೆ ಆಗ್ರಹ

By
2 Min Read

ಉಡುಪಿ: ಜರ್ಮನಿಯಲ್ಲಿ ನಡೆದ ಪ್ರಶಾಂತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ತನಿಖೆಯಾಗಬೇಕು ಹಾಗೆಯೇ ಪ್ರಶಾಂತ್ ಮೃತದೇಹದ ಅಂತ್ಯ ಸಂಸ್ಕಾರ ಕುಂದಾಪುರದಲ್ಲೇ ನಡೆಯಬೇಕು, ಇದಕ್ಕೆ ಸಹಕರಿಸಿ ಎಂದು ಮೃತರ ಕುಟುಂಬಸ್ಥರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಜರ್ಮನಿಯಲ್ಲಿ ಪ್ರಶಾಂತ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ಜರ್ಮನಿಯ ಮ್ಯೂನಿಚ್‍ನಲ್ಲಿ ಶುಕ್ರವಾರ ಸಂಜೆ ಪ್ರಶಾಂತ್ ದಂಪತಿ ಅಪಾರ್ಟ್ ಮೆಂಟ್‍ಗೆ ಬರುವ ಸಂದರ್ಭದಲ್ಲಿ ಘಾನಾ ದೇಶದ ಪ್ರಜೆ ಏಕಾಏಕಿ ಚೂರಿಯಿಂದ ಇರಿದಿದ್ದು, ಪ್ರಶಾಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಸಹೋದರಿ ಸಾಧನಾ ಮಾಧ್ಯಮಗಳ ಮುಂದೆ ಬಂದು, ಮೃತದೇಹವನ್ನು ತವರಿಗೆ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ:ಜರ್ಮನಿಯಲ್ಲಿ ಚಾಕು ಇರಿತಕ್ಕೊಳಗಾದ ಉಡುಪಿ ಮೂಲದ ದಂಪತಿ, ಪತಿ ಸಾವು

ಸದ್ಯ ಪತ್ನಿ ಸ್ಮಿತಾ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು ಜರ್ಮನಿಯಲ್ಲೇ ನೆಲೆಸಿದ್ದಾರೆ. ಮೃತ ಪ್ರಶಾಂತ್ ತಾಯಿಗೆ ಶವ ನೋಡಲು ಅವಕಾಶ ಕೊಡಬೇಕು. ಮೃತದೇಹವನ್ನು ತವರಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಉಡುಪಿಯಲ್ಲಿರುವ ಕುಟುಂಬ ಒತ್ತಾಯಿಸಿದೆ. ತಾಯಿ ವಿನಯಾ ಪಾಸ್‍ಪೋರ್ಟ್ ರಿನೀವಲ್ ಗೆ ಬೆಂಗಳೂರಿಗೆ ತೆರಳಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸಹಕರಿಸಬೇಕು ಎಂದು ನಿವೇದಿಸಿದ್ದಾರೆ.

ಸಹೋದರನ ಕೊಲೆಗೆ ಕಾರಣವೇನು ತಿಳಿಯಬೇಕು. ಪ್ರಶಾಂತ್ ಬಹಳ ಸೌಮ್ಯ ಸ್ವಭಾವದ ವ್ಯಕ್ತಿ. ಯಾರೊಂದಿಗೂ ಜಗಳ ಮಾಡುವ ವ್ಯಕ್ತಿತ್ವ ಅವನದಲ್ಲ. ಪ್ರಕರಣ ಕುರಿತು ಸರಿಯಾದ ರೀತಿಯಲ್ಲಿ ತನಿಖೆ ನಡೆಯಬೇಕು ಎಂದಿದ್ದಾರೆ.

ಪ್ರಶಾಂತ್ ಸಹೋದರಿ ಸಾಧನಾ ಮಾತನಾಡಿ, ಅಪಘಾತವಾಗಿದೆ ಅಂತ ಮೊದಲು ಸಂದೇಶ ಬಂತು. ನಿನ್ನೆ ಸಾಯಂಕಾಲ ಘಟನೆ ಬಗ್ಗೆ ಮಾಹಿತಿ ಸಿಕ್ಕಿದೆ. ಕೊಲೆಯಾಗಿದ್ದಾನೆ ಅಂದಾಗ ಶಾಕ್ ಆಯ್ತು. ಜರ್ಮನಿಯಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ.

ಬಳಿಕ ಪ್ರಶಾಂತ್ ಬಾವ ಶ್ರೀನಿವಾಸ್ ಮಾತನಾಡಿ, ಸಣ್ಣ ಪುಟ್ಟ ಗಲಾಟೆಗೂ ಹೋಗದ ಅವರು ಕೊಲೆಯಾಗಲು ಕಾರಣವೇನು ಅಂತ ಗೊತ್ತಾಗುತ್ತಿಲ್ಲ. ನಮಗೆ ಕೇಂದ್ರ ಸರ್ಕಾರ ಬೆಂಬಲ ಕೊಟ್ಟಿದೆ. ಆದ್ರೆ ಘಟನೆ ನಡೆಯಲು ಕಾರಣವೇನು ಎಂಬ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅಮ್ಮನ ಪಾಸ್ ಪೋರ್ಟ್ ರಿನಿವಲ್ ಮಾಡಿಸಿಲ್ಲ. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸಹಾಯ ಮಾಡುತ್ತಿದ್ದಾರೆ. ಮಾಧ್ಯಮಗಳ ಸಹಾಯ ಇದ್ದರೆ ಮೃತದೇಹ ಊರಿಗೆ ತೆಗೆದುಕೊಂಡು ಬರಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *