Connect with us

Districts

ಜರ್ಮನಿಯಲ್ಲಿ ಚಾಕು ಇರಿತಕ್ಕೊಳಗಾದ ಉಡುಪಿ ಮೂಲದ ದಂಪತಿ, ಪತಿ ಸಾವು

Published

on

ಉಡುಪಿ: ಜರ್ಮನಿಯ ಮ್ಯೂನಿಚ್ ನಲ್ಲಿ ದುಷ್ಕರ್ಮಿಯೋರ್ವ ಕರ್ನಾಟಕ ಮೂಲದ ದಂಪತಿಗೆ ಚೂರಿ ಇರಿದಿದ್ದಾನೆ. ಘಟನೆಯಲ್ಲಿ ಪತಿ ಪ್ರಶಾಂತ್ ಮೃತಪಟ್ಟಿದ್ದು, ಪತ್ನಿ ಸ್ಮಿತಾ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜರ್ಮನಿಯ ಖಾಸಗಿ ಆಸ್ಪತ್ರೆಯಲ್ಲಿ ಇರಿತಕ್ಕೊಳಗಾದ ಸ್ಮಿತಾ ಚೇತರಿಸಿಕೊಳ್ಳುತ್ತಿದ್ದಾರೆ.

ಸ್ಮಿತಾ ಮೂಲತಃ ಉಡುಪಿ ಜಿಲ್ಲೆಯ ಸಿದ್ಧಾಪುರದವರು. ಸ್ಮಿತಾ ತಂದೆ ಚಂದ್ರಮೌಳಿ ಸಿದ್ದಾಪುರದಲ್ಲೇ ಆಯುರ್ವೇದಿಕ್ ಕ್ಲಿನಿಕ್ ಹೊಂದಿದ್ದಾರೆ. ಘಟನೆ ಬಗ್ಗೆ ಮಾಹಿತಿ ಸಿಕ್ಕಕೂಡಲೇ ಸ್ಮಿತಾ ಕುಟುಂಬ ಆಘಾತಕ್ಕೊಳಗಾಗಿದ್ದು, ಕುಟುಂಬಸ್ಥರು ಜರ್ಮನಿಗೆ ತೆರಳುವ ಸಿದ್ಧತೆ ಮಾಡಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಾರತೀಯ ದಂಪತಿ ಪ್ರಶಾಂತ್ ಮತ್ತು ಸ್ಮಿತಾ ಬಸ್ರೂರು ಎಂಬವರಿಗೆ ಅಪರಿಚಿತ ವಲಸಿಗನೊಬ್ಬ ಚೂರಿಯಿಂದ ಇರಿದಿದ್ದಾನೆ. ಪ್ರಶಾಂತ್ ಮೃತಪಟ್ಟಿದ್ದು, ಸ್ಮಿತಾ ಬಸ್ರೂರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಶಾಂತ್ ಅವರ ಸಹೋದರನನ್ನು ಮ್ಯೂನಿಚ್ ಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಶಾಂತ್ ಮತ್ತು ಸ್ಮಿತಾ ದಂಪತಿ 15 ವರ್ಷಗಳಿಂದ ಮ್ಯೂನಿಚ್ ನಲ್ಲಿ ನೆಲೆಸಿದ್ದರು. ಇವರಿಗೆ ಒಬ್ಬ ಪುತ್ರಿ ಮತ್ತು ಒಬ್ಬ ಪುತ್ರನಿದ್ದಾನೆ. ಸ್ಮಿತಾ ಸಿದ್ದಾಪುರ ಮೂಲದವರಾದರೆ, ಪ್ರಶಾಂತ್ ಶಿವಮೊಗ್ಗದ ಹೊಸನಗರದವರು. ಕುಂದಾಪುರದಲ್ಲಿ ಮನೆ ಕಟ್ಟಿದ್ದಾರೆ. ಕೆಲಕಾಲ ಬೆಂಗಳೂರಿನಲ್ಲಿದ್ದು, ಈಗ ಜರ್ಮನಿಯಲ್ಲಿದ್ದಾರೆ.

ಸ್ಮಿತಾ ಸಹೋದರ ಸುಜಯ್ ಮತ್ತು ಆಪ್ತರು ಜರ್ಮನಿ ತೆರಳಲಿದ್ದಾರೆ. ಜರ್ಮನಿಯಲ್ಲಿ ನಡೆದ ಘಟನೆ ಬಗ್ಗೆ ಸ್ಥಳೀಯರು, ಡಾ. ಚಂದ್ರಮೌಳಿಯವರ ಆಪ್ತರು ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.