ಉಡುಪಿ: ಉತ್ತರ ಕನ್ನಡ ಜಿಲ್ಲೆಯ ಕೊರೊನಾ ಸೋಂಕಿತ ಗರ್ಭಿಣಿಗೆ ಉಡುಪಿಯಲ್ಲಿ ಚಿಕಿತ್ಸೆ ಶುರು ಮಾಡಲಾಗಿದೆ. ಈ ಮೂಲಕ ಉಡುಪಿ ಜಿಲ್ಲಾಡಳಿತ ಮಾನವೀಯತೆ ಮೆರೆದಿದೆ.
ಭಟ್ಕಳ ಮೂಲದ 26 ವರ್ಷದ ಗರ್ಭಿಣಿಯನ್ನು ಉಡುಪಿ ಜಿಲ್ಲೆಗೆ ಶಿಫ್ಟ್ ಮಾಡಲಾಗಿದೆ. ಉಡುಪಿ ನಗರದಲ್ಲಿರುವ ಟಿಎಂಎಪೈ ಆಸ್ಪತ್ರೆಯಲ್ಲಿ ವಿಶೇಷ ನಿಗಾದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯನ್ನು ಉಡುಪಿಗೆ ಶಿಫ್ಟ್ ಮಾಡುತ್ತೇವೆ ಎಂದು ಉಡುಪಿ ಜಿಲ್ಲಾಡಳಿತವನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿ ಮನವಿ ಮಾಡಿಕೊಂಡಿದ್ದರು.
ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾನವೀಯತೆ ಮೆರೆದಿದ್ದು, ಉಡುಪಿಯಲ್ಲಿ ಚಿಕಿತ್ಸೆ ಕೊಡುವುದಾಗಿ ಸಮ್ಮತಿ ನೀಡಿದ್ದಾರೆ. ಭಟ್ಕಳದಿಂದ ಕೊರೊನಾ ಸೋಂಕಿತ ಗರ್ಭಿಣಿಯನ್ನು ಉಡುಪಿಗೆ ಶಿಫ್ಟ್ ಮಾಡಿ ಚಿಕಿತ್ಸೆ ಶುರು ಮಾಡಲಾಗಿದೆ. ಉಡುಪಿಯ ಟಿಎಂಎಪೈ ಆಸ್ಪತ್ರೆಯನ್ನು ಕೊರೊನಾ ರೋಗಿಗಳಿಗಾಗಿ ಸಂಪೂರ್ಣವಾಗಿ ಮೀಸಲಿಡಲಾಗಿದೆ. ಇಲ್ಲಿ ವೆಂಟಿಲೇಷನ್ ಮತ್ತು ಐಸಿಯು ವಿಭಾಗದಲ್ಲಿ ಕೆಎಂಸಿ ಮಣಿಪಾಲದ ನುರಿತ ತಜ್ಞ ವೈದ್ಯರನ್ನು ನೇಮಕ ಮಾಡಲಾಗಿದೆ. ಅವರಿಂದಲೇ ಸದ್ಯ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಎಚ್ಒ ಡಾ.ಸುಧೀರ್ ಚಂದ್ರ ಸೂಡಾ, ಮಾನವೀಯತೆಯ ನೆಲೆಯಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ನಮ್ಮ ಜಿಲ್ಲೆಯ ಕೊರೊನಾ ರೋಗಿಗಳಿಗಾಗಿಯೇ ಈ ಆಸ್ಪತ್ರೆಯನ್ನು ಈವರೆಗೆ ಮೀಸಲಿಟ್ಟಿದ್ದೆವು. ವಿಶೇಷ ಪ್ರಕರಣ ಆಗಿರುವುದರಿಂದ ಮಹಿಳೆಗೆ ಇಲ್ಲಿ ಚಿಕಿತ್ಸೆ ಕೊಡುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ ಎಲ್ಲ ವಿಷಯದಲ್ಲಿ ಇದನ್ನು ಮುಂದುವರಿಸಲ್ಲ ಎಂದು ಸ್ಪಷ್ಟವಾಗಿ ಹೇಳಿದರು.