ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ ವಜಾ ಖಂಡಿಸಿ ಬೆಂಬಲಿಗರ ಆಕ್ರೋಶ – ಮಧುಗಿರಿ ಬಂದ್

By
1 Min Read

ತುಮಕೂರು: ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ ಅವರನ್ನು ವಜಾ ಮಾಡಿರುವುದಕ್ಕೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧುಗಿರಿ ಪಟ್ಟಣ ಬಂದ್ ಮಾಡಿ ಮಂಗಳವಾರ ಪ್ರತಿಭಟನೆ ನಡೆಸಿದರು.

- Advertisement -

ರಾಜಣ್ಣ ಬೆಂಬಲಿಗರು ಮತ್ತು ಅಭಿಮಾನಿಗಳು ಮಧುಗಿರಿ ಪಟ್ಟಣದಲ್ಲಿ ಜಮಾವಣೆಗೊಂಡರು. ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಟೈರ್‌ಗೆ ಬೆಂಕಿ ಹಚ್ಚಲು ಮುಂದಾದರು. ಈ ವೇಳೆ ಅವರನ್ನು ಪೊಲೀಸರು ತಡೆದರು. ರಾಜಣ್ಣರ ರಾಜೀನಾಮೆ ವಾಪಸ್ ಪಡೆಯುವಂತೆ ಬೆಂಬಲಿಗರು ಒತ್ತಾಯಿಸಿದರು. ಬಳಿಕ ಪಾದಯಾತ್ರೆ ಮೂಲಕ ಎಸಿ ಕಚೇರಿ ವರೆಗೆ ಅಭಿಮಾನಿಗಳು ಸಾಗಿದರು.

- Advertisement -

ಬೇಕೆ ಬೇಕು ನ್ಯಾಯ ಬೇಕು ಎಂದು ಎಸಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಅವರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಎಸಿ ಕಚೇರಿಯಿಂದ ತುಮಕೂರು ಗೇಟ್ ವರೆಗೂ ರಾಜಣ್ಣ ಬೆಂಬಲಿಗರ ಪಾದಯಾತ್ರೆ ನಡೆಯಿತು.

- Advertisement -

ತುಮಕೂರು ಗೇಟ್‌ನ ರಸ್ತೆಯಲ್ಲಿ ಪ್ರತಿಭಟನಾಕಾರರು ಧರಣಿ ಕುಳಿತರು. ಇದೇ ವೇಳೆ, ಬೇಕರಿಯೊಂದಕ್ಕೆ ನುಗ್ಗಲು ಪ್ರಯತ್ನಿಸಿದರು. ಎಂಜಿ ಕ್ರೀಡಾಂಗಣದ ಬಳಿ ಬೆಂಬಲಿಗರು ಹೈಡ್ರಾಮಾ ನಡೆಸಿದರು. ಅಭಿಮಾನಿಯೊಬ್ಬ ವಿಷ ಕುಡಿಯಲು ಪ್ರಯತ್ನಿಸಿದ ಪ್ರಸಂಗವೂ ನಡೆಯಿತು. ಆತನನ್ನು ತಕ್ಷಣವೇ ಅಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು.

- Advertisement -

ತಮ್ಮ ಸಡಿಲ ಹೇಳಿಕೆಗಳ ಮೂಲಕವೇ ಪಕ್ಷದೊಳಗಡೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಕೆ.ಎನ್.ರಾಜಣ್ಣ ಅವರನ್ನು ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ಸೋವಾರ ಸಂಪುಟದಿಂದ ವಜಾಗೊಳಿಸಿದರು. ಈ ಸಂಬಂಧ ರಾಜಣ್ಣ ಬೇಸರಗೊಂಡಿದ್ದಾರೆ. ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.

Share This Article