ಪಾತ್ರೆ ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಮಕ್ಕಳಿಬ್ಬರು ಸಾವು!

Public TV
1 Min Read

ಆನೇಕಲ್: ಪಾತ್ರೆ ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಟಿ.ಅಗ್ರಹಾರ ಗ್ರಾಮದಲ್ಲಿ ನಡೆದಿದೆ.

ಶ್ರಾವಣಿ (12), ಅರ್ಚನಾ (9) ಮೃತ ಮಕ್ಕಳು.

ಇಬ್ಬರು ಹೆಣ್ಣುಮಕ್ಕಳ ಪೋಷಕರು ಬಡ ಕುಟುಂಬದವರಾಗಿದ್ದು, ಗ್ರಾಮದ ಹೊರಭಾಗದಲ್ಲಿ ಮನೆ ಕಟ್ಟಿಕೊಂಡು ಕೃಷಿಯ ಜತೆಗೆ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಮಂಗಳವಾರ ಮಕ್ಕಳನ್ನು ಮನೆಯಲ್ಲೇ ಬಿಟ್ಟು ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದರು. ಮನೆಗೆ ಹೊಂದಿಕೊಂಡಿರುವ ಕೃಷಿ ಹೊಂಡದ ಬಳಿ ಪಾತ್ರೆಗಳನ್ನು ತೊಳೆಯಲೆಂದು ಹೋಗಿದ್ದಾಗ ಅರ್ಚನಾ ಹೊಂಡದಲ್ಲಿ ಬಿದ್ದಿದ್ದಾಳೆ. ಈಕೆಯನ್ನು ರಕ್ಷಣೆ ಮಾಡಲು ಹೋಗಿ ಅಕ್ಕ ಶ್ರಾವಣಿ ಕೂಡ ಹೊಂಡದಲ್ಲಿ ಬಿದ್ದು ಇಬ್ಬರೂ ಮೃತಪಟ್ಟಿದ್ದಾರೆ. ಇದನ್ನೂ ಓದಿ: ನಿಮ್ಮ ಪಾದಕ್ಕೆ ನಮಸ್ಕಾರ ಮಾಡ್ತೀನಿ, ಪುನೀತ್‍ಗೆ ಕೆಟ್ಟ ಹೆಸ್ರು ತರಬೇಡಿ: ರಾಘವೇಂದ್ರ ರಾಜ್ ಕುಮಾರ್

ಈ ಮಕ್ಕಳ ಚಿಕ್ಕಮ್ಮ ಹೊಲದಲ್ಲಿ ಮೇವಿಗಾಗಿ ಬಂದು ಮನೆಯಲ್ಲಿ ನೋಡಿದಾಗ ಮಕ್ಕಳು ಕಾಣದ ಬಗ್ಗೆ ಗಾಬರಿಗೊಂಡು ಹುಡುಕಾಟ ನಡೆಸಿದ್ದಾರೆ. ಕೂಲಿಗೆ ಹೋಗಿದ್ದ ತಾಯಿಗೆ ಕರೆ ಮಾಡಿ ಮಕ್ಕಳು ಮನೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಶಾಲೆಗೆ ಹೋಗದೆ ಮನೆಯಲ್ಲಿದ್ದ ಮಕ್ಕಳಿಗಾಗಿ ಹುಡುಕಾಟ ನಡೆಸಿದಾಗ ಕೊನೆಗೆ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರು ವಿವಿಯಲ್ಲಿ ಹೊಸ 30 ಕೋರ್ಸ್ ಆರಂಭ

ಕೃಷಿ ಹೊಂಡಗಳನ್ನು ನಿರ್ಮಿಸುವಾಗ ಹೊಂಡದ ಸುತ್ತ ರಕ್ಷಣೆ ಬೇಲಿಯನ್ನು ನಿರ್ಮಿಸಬೇಕು ಎಂಬ ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದಾರೆ. ಕೃಷಿ ಹೊಂಡವನ್ನು ತುಂಬಾ ಆಳಕ್ಕೆ ತೊಡುವ ಕಾರಣ ಚಿಕ್ಕ ವಯಸ್ಸಿನ ಮಕ್ಕಳು ಬಿದ್ದರೆ ಮೇಲೆ ಬರುವುದು ಕಷ್ಟ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ದುರಂತ ಸಂಭವಿಸಿದೆ. ಕೂಡಲೇ ಹೊಂಡದ ಒಂದು ಬದಿಯಲ್ಲಿ ರಕ್ಷಣೆಗಾಗಿ ಒಂದು ಹಗ್ಗ ಅಥವಾ ಗಾಳಿ ತುಂಬಿದ ರಬ್ಬರ ಟ್ಯೂಬ್ ವ್ಯವಸ್ಥೆ ಕಲ್ಪಿಸಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *