ಟಿಬಿ ಡ್ಯಾಂ ಮುಂದಿನ 50 ವರ್ಷ ಸುಭದ್ರ, ಕ್ರಸ್ಟ್ ಗೇಟ್‌ಗಳ ಅಳವಡಿಕೆ ಪೂರ್ಣ- ಮೇ 15ಕ್ಕೆ ಲೋಕಾರ್ಪಣೆ: ಡಿಕೆಶಿ

2 Min Read

ವಿಜಯನಗರ: ತುಂಗಭದ್ರಾ ಜಲಾಶಯದ(Tungabhadra Dam) ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, 73 ವರ್ಷಗಳ ಹಳೆಯ ಕ್ರಸ್ಟ್ ಗೇಟ್‌ಗಳ(Crest Gate) ಜಾಗದಲ್ಲಿ ಹೊಸ ಗೇಟ್‌ಗಳನ್ನು ಅಳವಡಿಸುವ ಸಾಹಸಮಯ ಕಾರ್ಯ ಯಶಸ್ವಿಯಾಗಿ ಮುಕ್ತಾಯದ ಹಂತಕ್ಕೆ ತಲುಪಿದೆ.

ಇಂದು ಜಲಾಶಯಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ (DK Shivakumar) ಅವರು ಹೊಸ ಗೇಟ್‌ಗಳ ಅಳವಡಿಕೆ ಕಾರ್ಯವನ್ನು ವೀಕ್ಷಿಸಿ, ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

2024ರ ಆಗಸ್ಟ್ 10 ರಂದು ಜಲಾಶಯದ 19ನೇ ಕ್ರಸ್ಟ್ ಗೇಟ್‌ನ ಚೈನ್ ಲಿಂಕ್ ಕಟ್ ಆಗಿ ಕೊಚ್ಚಿ ಹೋಗಿತ್ತು. ಈ ತುರ್ತು ಪರಿಸ್ಥಿತಿಯನ್ನು ಜಲಾಶಯದ ತಜ್ಞ ಕನ್ಹಯ್ಯ ನಾಯ್ಡು ಅವರ ನೇತೃತ್ವದಲ್ಲಿ ಹರಿಯುವ ನೀರಿನಲ್ಲೇ ಸ್ಟಾಪ್ ಲಾಗ್ ಗೇಟ್ (Stop Log Gate) ಅಳವಡಿಸುವ ಮೂಲಕ ಯಶಸ್ವಿಯಾಗಿ ನಿಭಾಯಿಸಲಾಗಿತ್ತು. ಬಳಿಕ ತಜ್ಞರ ಸಮಿತಿಯ ಸೂಚನೆಯಂತೆ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ 33 ಹಳೆಯ ಗೇಟ್‌ಗಳನ್ನು ತೆಗೆದು ಹೊಸ ಗೇಟ್ ಅಳವಡಿಸಲು ನಿರ್ಧರಿಸಲಾಗಿತ್ತು. ಇದನ್ನೂ ಓದಿ: ಜೀವರಾಜ್‌ ಜೊತೆ ಕೆಲಸ ಮಾಡ್ತಿದ್ದ ಅಧಿಕಾರಿಗಳನ್ನ ಬಳಸಿಕೊಂಡು ಅಕ್ರಮ: ಡಿಕೆಶಿ ಕೆಂಡಾಮಂಡಲ

ಇಂದು ಬೆಳಗ್ಗೆ 9:30ಕ್ಕೆ ಜಲಾಶಯಕ್ಕೆ ಆಗಮಿಸಿದ ಡಿಸಿಎಂ ಅವರಿಗೆ ಸಚಿವರಾದ ಬೋಸರಾಜು, ಶಿವರಾಜ್ ತಂಗಡಗಿ ಹಾಗೂ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸಾಥ್ ನೀಡಿದರು. ಟಿಬಿ ಡ್ಯಾಂ ಮಂಡಳಿ ಅಧಿಕಾರಿಗಳು ಹೊಸ ಕ್ರಸ್ಟ್ ಗೇಟ್‌ಗಳನ್ನು ಏರಿಸುವ ಮೂಲಕ ಪ್ರಾಯೋಗಿಕ ಪರೀಕ್ಷೆ (Trial) ನಡೆಸಿದರು.

ಕ್ರಸ್ಟ್ ಗೇಟ್ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಒಟ್ಟು 54 ಕೋಟಿ ರೂಪಾಯಿ ವೆಚ್ಚದಲ್ಲಿ 33 ಹೊಸ ಗೇಟ್‌ಗಳನ್ನು ಅಳವಡಿಸಲಾಗಿದೆ. ಇದು ಅತ್ಯಂತ ಸವಾಲಿನ ಮತ್ತು ಮಾದರಿ ಕೆಲಸವಾಗಿದೆ.ಹೊಸ ಗೇಟ್ ಅಳವಡಿಕೆ ಕಾಮಗಾರಿ ಮೇ 7ಕ್ಕೆ ಸಂಪೂರ್ಣಗೊಳ್ಳಲಿದ್ದು, ಮೇ 15ರಂದು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಗೇಟ್ ಅಳವಡಿಕೆ ಮುಗಿದಿದ್ದು, ಹೊಸ ಚೈನ್ ಅಳವಡಿಕೆ ಕಾರ್ಯ ಬಾಕಿ ಇದೆ. ತಮಿಳುನಾಡಿನ ಸಂಸ್ಥೆಗೆ ಇದರ ಜವಾಬ್ದಾರಿ ನೀಡಲಾಗಿದ್ದು, ಮೇ ಅಂತ್ಯಕ್ಕೆ ಚೈನ್ ಅಳವಡಿಕೆ ಕೂಡ ಪೂರ್ಣಗೊಳ್ಳಲಿದೆ. ಜಲಾಶಯದ ಕಾಲುವೆಗಳ ದುಸ್ತಿಗೆ 315 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

 

ಈ ಹೊಸ ಗೇಟ್‌ಗಳ ಅಳವಡಿಕೆಯಿಂದ ಮುಂದಿನ 50 ವರ್ಷಗಳ ಕಾಲ ಜಲಾಶಯಕ್ಕೆ ಯಾವುದೇ ಅಪಾಯ ಇರುವುದಿಲ್ಲ ಎಂದು ಅವರು ಭರವಸೆ ನೀಡಿದರು.

ಕೊಪ್ಪಳದ ನವಲಿ ಸಮನಾಂತರ ಜಲಾಶಯಕ್ಕೆ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳು ಇನ್ನೂ ಒಪ್ಪಿಗೆ ನೀಡಿಲ್ಲ. ಪರ್ಯಾಯವಾಗಿ ಪಂಪ್ ಮೂಲಕ ನೀರು ಬಳಸುವ ಬಗ್ಗೆಯೂ ಚಿಂತನೆ ಇದೆ. ಇನ್ನು ಜಲಾಶಯದ ಹೂಳು ತೆಗೆಯಲು ಗ್ಲೋಬಲ್ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಟೀಕೆಗಳು ನಮ್ಮನ್ನು ಹೆಚ್ಚು ಜಾಗೃತವಾಗಿರಿಸುತ್ತವೆ. ಆದರೆ ನಾವು ಜನರ ಹಿತದೃಷ್ಟಿಯಿಂದ ಕೆಲಸ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು.

Share This Article