ಬೆಂಗಳೂರಿನ ಗ್ಯಾಲಕ್ಸ್ ಐ ಅಭಿವೃದ್ಧಿ ಪಡಿಸಿದ ವಿಶ್ವದ ಮೊದಲ OptoSAR ಉಪಗ್ರಹ ಉಡಾವಣೆ ಯಶಸ್ವಿ – ಪಾಕಿಸ್ತಾನ, ಚೀನಾಗೆ ತಲೆನೋವು ಯಾಕೆ?

4 Min Read

ವಾಷಿಂಗ್ಟನ್‌: ಬೆಂಗಳೂರು ಮೂಲದ ಸ್ಪೇಸ್‌ಟೆಕ್ ಸ್ಟಾರ್ಟ್‌ಅಪ್ ಗ್ಯಾಲಕ್ಸ್ ಐ (GalaxEye) ಅಭಿವೃದ್ಧಿಪಡಿಸಿದ ಮಿಷನ್ ದೃಷ್ಟಿ (Mission Drishti) ಉಪಗ್ರಹವನ್ನು ಇಂದು ಯಶಸ್ವಿಯಾಗಿ ಉಡಾವಣೆಯಾಗಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಉಡಾವಣಾ ಕೇಂದ್ರದಿಂದ ಭಾರತೀಯ ಕಾಲಮಾನ ಮಧ್ಯಾಹ್ನ 12:29ಕ್ಕೆ ಎಲೋನ್‌ ಮಸ್ಕ್‌ ಒಡೆತನದ ಸ್ಪೇಸ್‌ಎಕ್ಸ್‌ನ (SpaceX) ಕಂಪನಿಯ ಫಾಲ್ಕನ್ 9 ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.

ಐಐಟಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿಗಳು ಸ್ಥಾಪಿಸಿದ ಗ್ಯಾಲಕ್ಸ್ ಐ ಕಂಪನಿಯು ಸಂಪೂರ್ಣವಾಗಿ ದೇಶಿಯವಾಗಿ ಈ ಉಪಗ್ರಹವನ್ನು ಅಭಿವೃದ್ಧಿಪಡಿಸಿದ್ದು ವಿಶೇಷ. ಉಪಗ್ರಹ ಯಶಸ್ವಿಯಾಗಿ ಕಕ್ಷಗೆ ತಲುಪಿದ ಬೆನ್ನಲ್ಲೇ ಗ್ಯಾಲಕ್ಸ್ ಐ ಸಂಭ್ರಮಿಸಿದೆ. ವಿಶ್ವದ ಮೊದಲ ಆಪ್ಟೋಸಾರ್ ಉಪಗ್ರಹ ಈಗ ಬಾಹ್ಯಾಕಾಶವನ್ನು ಯಶಸ್ವಿಯಾಗಿ ತಲುಪಿದೆ. ವಿಶ್ವಕ್ಕಾಗಿ ಭಾರತದಲ್ಲಿ ತಯಾರಿಸಲ್ಪಟ್ಟಿದೆ ಎಂದು ಎಕ್ಸ್‌ನಲ್ಲಿ ಬರೆದಿದೆ.

ಸುಮಾರು 190 ಕೆಜಿ ತೂಕವಿರುವ ಉಪಗ್ರಹ ಭಾರತದ ಖಾಸಗಿ ವಲಯದಲ್ಲಿ ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಉಪಗ್ರಹವಾಗಿದೆ. ಇದು ಸಿಂಥೆಟಿಕ್‌ ಅಪರ್ಚರ್ ರಾಡಾರ್ (SAR) ಮತ್ತು ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್ (MSI) ಎರಡನ್ನೂ ಏಕಕಾಲದಲ್ಲಿ ಹೊಂದಿರುವ ವಿಶ್ವದ ಮೊದಲ ಉಪಗ್ರಹವಾಗಿದೆ.

ಭೂಮಿಯಿಂದ 500 ಕಿ.ಮೀ ಎತ್ತರದ ಕಕ್ಷೆಯಲ್ಲಿ ಸುತ್ತುವ ಈ ಉಪಗ್ರಹ ಸುಮಾರು 1.2 ರಿಂದ 1.8 ಮೀಟರ್‌ವರೆಗಿನ ಸ್ಪಷ್ಟ ಚಿತ್ರಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.

ಗ್ಯಾಲಕ್ಸ್ ಐ ಕಂಪನಿಯು 2029 ರ ವೇಳೆಗೆ ಸುಮಾರು 8 ರಿಂದ 12 ಉಪಗ್ರಹಗಳ ಸಮೂಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಯೋಜಿಸಿದೆ. ಇದರಿಂದ ಭೂಮಿಯ ಯಾವುದೇ ಭಾಗವನ್ನು ಪ್ರತಿ 4 ದಿನಕ್ಕೊಮ್ಮೆ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಮರು-ವೀಕ್ಷಿಸಲು ಸಾಧ್ಯವಾಗುತ್ತದೆ.

ಪಾಕ್‌, ಚೀನಾಗೆ ಯಾಕೆ ತಲೆನೋವು?
ಉಪಗ್ರಹದಲ್ಲಿರುವ OptoSAR ವಿಶೇಷ ತಂತ್ರಜ್ಞಾನದ ಮೂಲಕ ಮೋಡ ಕವಿದ ವಾತಾವರಣ ಅಥವಾ ಕತ್ತಲೆಯಲ್ಲೂ ಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದರಿಂದ ಗಡಿಯಲ್ಲಿ ನಡೆಯುವ ಅಕ್ರಮ ನುಸುಳುವಿಕೆ ಅಥವಾ ಮಿಲಿಟರಿ ಚಟುವಟಿಕೆಗಳನ್ನು ಪಾಕಿಸ್ತಾನ, ಚೀನಾ (Pakistan) ಭಾರತದ ಕಣ್ಣಿನಿಂದ ಮರೆಮಾಡಲು ಸಾಧ್ಯವಾಗುವುದಿಲ್ಲ.

ಮಿಷನ್ ದೃಷ್ಟಿ ಉಪಗ್ರಹದಲ್ಲಿ NVIDIA Jetson Orin ಎಂಬ ಸುಧಾರಿತ AI ಪ್ರೊಸೆಸರ್ ಇದೆ. ಇದು ಬಾಹ್ಯಾಕಾಶದಲ್ಲಿಯೇ ಚಿತ್ರಗಳನ್ನು ವಿಶ್ಲೇಷಿಸಿ, ಅಪಾಯದ ಮುನ್ಸೂಚನೆಯನ್ನು ಅತ್ಯಂತ ವೇಗವಾಗಿ ಭೂಮಿಗೆ ರವಾನಿಸುತ್ತದೆ. ಇದರಿಂದ ಭಾರತಕ್ಕೆ ಪ್ರತಿಕ್ರಿಯಿಸಲು ಕಡಿಮೆ ಸಮಯ ಸಾಕಾಗುತ್ತದೆ.

ಭಾರತವು ಈಗಾಗಲೇ 100ಕ್ಕೂ ಹೆಚ್ಚು ಉಪಗ್ರಹಗಳನ್ನು ಹೊಂದಿದ್ದರೆ, ಪಾಕಿಸ್ತಾನವು ಕೇವಲ 8-9 ಉಪಗ್ರಹಗಳನ್ನು ಹೊಂದಿದೆ. ಮಿಷನ್ ದೃಷ್ಟಿಯಂತಹ ಖಾಸಗಿ ವಲಯದ ಅತ್ಯಾಧುನಿಕ ಉಪಗ್ರಹಗಳು ಬಾಹ್ಯಾಕಾಶದಲ್ಲಿ ಭಾರತದ ಮೇಲುಗೈಯನ್ನು ಮತ್ತಷ್ಟು ಹೆಚ್ಚಿಸಿವೆ. ಇತ್ತೀಚಿನ ವರ್ಷಗಳಲ್ಲಿ ಗಡಿಯಲ್ಲಿ ನಡೆದ ಸಂಘರ್ಷಗಳ ನಂತರ, ಭಾರತವು ತನ್ನ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಿದೆ.


ಒಂದು ವೇಳೆ ಈ ಉಪಗ್ರಹ ಒಂದು ವರ್ಷದ ಮೊದಲೇ ಉಡಾವಣೆಯಾಗಿದ್ದರೆ ಭಾರತ ಅಮೆರಿಕದ ವಾಣಿಜ್ಯ ಉಪಗ್ರಹಗಳನ್ನು ಅವಲಂಬಿಸುವ ಬದಲು ಆಪರೇಷನ್ ಸಿಂಧೂರದಿಂದ ಪಾಕಿಸ್ತಾನದಲ್ಲಿ ಆಗಿದ್ದ ಹಾನಿಯ ಮೌಲ್ಯಮಾಪನಗಳ ಗುಣಮಟ್ಟದ ಚಿತ್ರಗಳನ್ನು ಸುಲಭವಾಗಿ ಪಡೆಯಬಹುದಿತ್ತು.

ಸದ್ಯ ಈಗ ವಿಶ್ವದಲ್ಲೇ ಬಾಹ್ಯಾಕಾಶ ತಂತ್ರಜ್ಞಾನ, ಭೂಮಿಯ ವೀಕ್ಷಣೆ (Earth Observation), ಉಪಗ್ರಹ ಚಿತ್ರಣ ಮತ್ತು ಜಿಯೋಸ್ಪೇಷಿಯಲ್ ಡೇಟಾ ವಿಶ್ಲೇಷಣೆಯಲ್ಲಿ ವ್ಯಾಂಟರ್(ಈ ಹಿಂದೆ ಮ್ಯಾಕ್ಸರ್‌) ಜಾಗತಿಕವಾಗಿ ಮುಂಚೂಣಿಯಲ್ಲಿರುವ ಅಮೆರಿಕದ ಕಂಪನಿಯಾಗಿದೆ. ಬೇರೆ ದೇಶಗಳಿಗೆ ಈ ಕಂಪನಿಯ ಚಿತ್ರಗಳನ್ನು ನೀಡಲು ಅಮೆರಿಕ ನಿರ್ಬಂಧಿಸಿದೆ. ಇನ್ನು ಮುಂದೆ ಭಾರತ ಚಿತ್ರಗಳನ್ನು ಪಡೆಯಲು ಬೇರೆ ದೇಶಗಳನ್ನು ಅವಲಂಬಿಸಬೇಕಾಗಿಲ್ಲ.

ಬೇರೆ ಏನು ಲಾಭ?
ಪ್ರವಾಹ ಅಥವಾ ಚಂಡಮಾರುತದಂತಹ ತುರ್ತು ಸಂದರ್ಭಗಳಲ್ಲಿ ಮೋಡಗಳ ನಡುವೆಯೇ ಭೂಮಿಯ ಚಿತ್ರಣವನ್ನು ನೀಡುವುದರಿಂದ ರಕ್ಷಣಾ ಕಾರ್ಯಗಳಿಗೆ ಅನುಕೂಲವಾಗಲಿದೆ.

ಭೂ ವೀಕ್ಷಣೆಗಾಗಿ (Earth Observation) ವಿನ್ಯಾಸಗೊಳಿಸಲಾದ ಈ ಉಪಗ್ರಹವು 500 ಕಿ.ಮೀ ಎತ್ತರದಿಂದ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಒದಗಿಸುತ್ತದೆ. ಇದು ಕೃಷಿ, ರಕ್ಷಣೆ ಮತ್ತು ನೈಸರ್ಗಿಕ ವಿಕೋಪಗಳ ನಿರ್ವಹಣೆಗೆ ಸಹಕಾರಿಯಾಗಲಿದೆ. ಬೆಳೆಗಳ ಆರೋಗ್ಯ, ಮಣ್ಣಿನ ತೇವಾಂಶ ಮತ್ತು ಬೆಳೆ ಇಳುವರಿಯನ್ನು ಅಂದಾಜು ಮಾಡಲು ಇದರ ಮಲ್ಟಿಸ್ಪೆಕ್ಟ್ರಲ್ ಸೆನ್ಸರ್‌ಗಳು ಸಹಾಯ ಮಾಡುತ್ತವೆ.

Share This Article