ಎಲ್ಲರನ್ನೂ ಪ್ರೀತಿಸುವುದು, ಒಟ್ಟಿಗೆ ಬಾಳುವುದು ಮಾನವೀಯತೆಯ ಗುರುತು – ಕ್ರೈಸ್ತ ನಮನ ಕಾರ್ಯಕ್ರಮದಲ್ಲಿ ಗೆಹ್ಲೋಟ್

Public TV
3 Min Read

ಬೆಂಗಳೂರು: ಭಾರತೀಯ ಸಂಸ್ಕೃತಿಯು ಯಾವಾಗಲೂ ವಿಶ್ವ ಸಹೋದರತ್ವ, ವಿಶ್ವ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯನ್ನು ಪ್ರೇರೇಪಿಸುತ್ತದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಹೇಳಿದರು.

ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಆಯೋಜಿಸಿದ್ದ ಕ್ರೈಸ್ತ ನಮನ (Krista Namama) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಪ್ರಪಂಚದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದೆ. ವಿವಿಧ ಧರ್ಮಗಳು, ಸಂಪ್ರದಾಯಗಳು ಮತ್ತು ಪದ್ಧತಿಗಳ ವಿಶಿಷ್ಟ ಸಂಯೋಜನೆಯಾಗಿದೆ. ಹಬ್ಬಗಳ ದೇಶ ಎಂದು ಕರೆಯಲ್ಪಡುವ ವಿಶ್ವದ ಏಕೈಕ ದೇಶ ಭಾರತ. ವಿವಿಧ ಧರ್ಮದ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಪ್ರತಿಯೊಂದು ಧರ್ಮದ ಜನರು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಪ್ರಕಾರ ಹಬ್ಬವನ್ನು ಆಚರಿಸುತ್ತಾರೆ ಎಂದರು.

 

ಇಲ್ಲಿನ ಹಬ್ಬಗಳು ಭಾರತದ ವೈವಿಧ್ಯತೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಾರವನ್ನು ಪ್ರತಿಬಿಂಬಿಸುತ್ತವೆ. ಇವು ರಾಷ್ಟ್ರೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಸಮಾಜವನ್ನು ಸಂಘಟಿತವಾಗಿಡುವಲ್ಲಿ ಧರ್ಮ ಮತ್ತು ಸಂಸ್ಕೃತಿಯು ಪ್ರಮುಖ ಪಾತ್ರವನ್ನು ಹೊಂದಿದೆ. ಧರ್ಮವು ಯಾವುದೇ ವ್ಯಕ್ತಿಯ ಮೇಲೆ ಧಾರ್ಮಿಕವಾಗಿ, ಸಾಮಾಜಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿಣಾಮ ಬೀರುತ್ತದೆ ಮತ್ತು ಅದೇ ಸಮಯದಲ್ಲಿ ಧರ್ಮವು ಸಮಾಜದಲ್ಲಿ ಒಗ್ಗಟ್ಟಿನ ಭಾವನೆಯನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಧರ್ಮಾತ್ಮರು ಎಲ್ಲಾ ಧರ್ಮಗಳ ಸಮಾನತೆಯನ್ನು ನಂಬುತ್ತಾರೆ. ಅವರ ಅಭಿಪ್ರಾಯದಲ್ಲಿ, ಎಲ್ಲಾ ಧರ್ಮಗಳು ಸಮಾನ ಗೌರವಕ್ಕೆ ಅರ್ಹವಾಗಿವೆ. ಎಲ್ಲರನ್ನೂ ಪ್ರೀತಿಸುವುದು ಮತ್ತು ಒಟ್ಟಿಗೆ ಬಾಳುವುದು ಮಾನವೀಯತೆಯ ಗುರುತಾಗಿದೆ. ಒಬ್ಬರ ಸ್ವಂತ ಧರ್ಮವನ್ನು ಅನುಸರಿಸುವುದು ಮತ್ತು ಇತರ ಧರ್ಮಗಳನ್ನು ಗೌರವಿಸುವುದು ಎಲ್ಲಾ ಧರ್ಮಗಳ ಸಮಾನತೆಯಾಗಿದೆ. ಇದು ಲೋಕದ ಏಳಿಗೆಗೆ ದಾರಿಯಾಗಲಿದೆ ಎಂದು ತಿಳಿಸಿದರು.

ಯೇಸು ಕ್ರಿಸ್ತನು ತೋರಿಸಿದ ಈ ಪವಿತ್ರ ಮಾರ್ಗವನ್ನು ಅನುಸರಿಸುವ ಅವಶ್ಯಕತೆಯಿದೆ. ಸತ್ಯ, ಪ್ರೀತಿ ಮತ್ತು ಕರುಣೆಯಿಂದ ತುಂಬಿದ ಮಾರ್ಗವನ್ನು ಅನುಸರಿಸುವವನು ಖಂಡಿತವಾಗಿಯೂ ಆಶೀರ್ವದಿಸಲ್ಪಡುತ್ತಾನೆ. ಅದರ ಮೇಲೆ ನಿಜವಾದ ಹೃದಯದಿಂದ, ಪ್ರಾಮಾಣಿಕವಾಗಿ ನಡೆಯಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು. ಇದನ್ನೂ ಓದಿ: ಒಂದೇ ಏಟಿಗೆ ಎರಡು ಹಕ್ಕಿ – ಬಿಜೆಪಿ `ಸಾವರ್ಕರ್’ ಅಸ್ತ್ರ ಸೀಕ್ರೆಟ್ ಏನು?

ಇಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಜಾಗೃತಿಯ ಅಗತ್ಯ ಹೆಚ್ಚಿದ್ದು, ಇದರ ಜವಾಬ್ದಾರಿ ನಮ್ಮ ಯುವ ಪೀಳಿಗೆ ಮೇಲಿದೆ. ಯುವಕರು ಧರ್ಮ-ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಅದನ್ನು ಜಗತ್ತಿನಲ್ಲಿ ವಿಸ್ತರಿಸುವ ಕೆಲಸ ಮಾಡಬೇಕು. ನಮ್ಮ ತತ್ತ್ವಶಾಸ್ತ್ರ, ಧರ್ಮ-ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯು ಅತ್ಯಂತ ಪುರಾತನವಾಗಿರುವುದರಿಂದ ಇಂದಿಗೂ ಪ್ರಸ್ತುತವಾಗಿದೆ, ಅವುಗಳನ್ನು ಅಳವಡಿಸಿಕೊಳ್ಳಲು ಮತ್ತು ಲೋಕಕಲ್ಯಾಣದ ದಿಕ್ಕಿನಲ್ಲಿ ಪಾಲುದಾರರಾಗಬೇಕು ಎಂದು ಯುವಪೀಳಿಗೆಗೆ ಕರೆ ನೀಡಿದರು.

ಕ್ರಿಸ್‌ಮಸ್ ಆಚರಣೆಯನ್ನು ದೇಶ ಮತ್ತು ಪ್ರಪಂಚದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಹಬ್ಬವು ಎಲ್ಲರನ್ನು ಪ್ರೀತಿಸಿ, ಎಲ್ಲರಿಗೂ ಸೇವೆ ಸಲ್ಲಿಸಲು, ಎಲ್ಲರನ್ನು ಗೌರವಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಇದರಿಂದ ಪ್ರೇರಣೆ ಪಡೆದು ಸಮಾಜ ಬಾಂಧವರಾದ ನಾವೆಲ್ಲರೂ ದಾನ ಸೇವೆ, ಸಮಾಜ ಸೇವೆ, ಮಾನವ ಸೇವೆಯೊಂದಿಗೆ ದೇಶ ಸೇವೆ ಮಾಡುವ ಸಂಕಲ್ಪದಿಂದ ಕೆಲಸ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ದತ್ತಪೀಠದ ಮಾರ್ಗದಲ್ಲಿ ಮೊಳೆ – ಕೋರ್ಟ್‍ಗೆ ಶರಣಾದ ಆರೋಪಿ

ಬೆಂಗಳೂರಿನ ಆರ್ಚ್ ಬಿಷಪ್ ಮತ್ತು ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ನ ಅಧ್ಯಕ್ಷ ಡಾ. ಪೀಟರ್ ಮಕಾಡೊ, ಪ್ರಾಂತೀಯ ಸುಪೀರಿಯರ್, ಸಿಸ್ಟರ್ ಬೆನೆಡಿಕ್ಟ್ ಮೇರಿ ಜೋಸೆಫ್, ಎಸ್‌ಡಿಎ ಯ ರಾಷ್ಟ್ರೀಯ ಅಧ್ಯಕ್ಷ ಪೀಟರ್, ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್ನ ಮೆಟ್ರೋಪಾಲಿಟನ್ ಬಿಷಪ್ ಡಾ. ಅಬ್ರಹಾಂ, ಕಾರ್ಯದರ್ಶಿ ಫ್ರಾನ್ಸಿಸ್ ಗೇಬ್ರಿಯಲ್ ಲೋಬೋ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *