ಸುಳ್ಳು ಆರೋಪ ಮಾಡಿದ ಮಾಜಿ ಶಾಸಕನ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀನಿ: ಪಾಪೇಶ್

Public TV
2 Min Read

ಚಿತ್ರದುರ್ಗ: ಆಧಾರ ರಹಿತವಾಗಿ ನನ್ನ ಮೇಲೆ ಸುಳ್ಳು ಆರೋಪ ಮಾಡಿರುವ ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಸಚಿವ ಶ್ರೀರಾಮುಲು ಆಪ್ತ ಸಹಾಯಕ ಪಾಪೇಶ್ ಗುಡುಗಿದ್ದಾರೆ.

ನಿನ್ನೆ ಮಾಜಿ ಶಾಸಕ ತಿಪ್ಪೇಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸಚಿವರ ಪಿಎಗಳಾದ ಹನುಮಂತ ರಾಯ ಹಾಗೂ ಪಾಪೇಶ್ ವಿರುದ್ಧ 772 ಜನ ಫಲಾನುಭವಿಗಳ ನೇರ ಸಾಲದ ಹಣವನ್ನು ನುಂಗಿದ್ದಾರೆಂಬ ಆರೋಪ ಮಾಡಿದ ಬೆನ್ನಲ್ಲೇ ಇಂದು ಶ್ರೀರಾಮುಲು ಪಿಎ ಪಾಪೇಶ್ ಹಾಗೂ ಬೆಂಬಲಿಗ ಜಯಪಾಲಯ್ಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಇದನ್ನೂ ಓದಿ: ಪೊಲೀಸ್‍ಗೆ ಕಪಾಳಮೋಕ್ಷ ಮಾಡಿದ ಮಾಜಿ ಶಾಸಕ ಎ.ಪಾಪಾರೆಡ್ಡಿ

ಈ ವೇಳೆ ಮಾತನಾಡಿದ ಪಾಪೇಶ್, ಮಾಜಿ ಶಾಸಕ ತಿಪ್ಪೇಸ್ವಾಮಿ ಸುಖಾಸುಮ್ಮನೆ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಹೇಳಲು ಹೆಸರಿಲ್ಲದಂತಾಗಿದ್ದ ತಿಪ್ಪೇಸ್ವಾಮಿಗೆ ನಮ್ಮ ಸಚಿವರಾದ ಶ್ರೀರಾಮುಲು ಅವರು ಇವರಿಗೆ ಕೊಟ್ಟ ಭಿಕ್ಷೆಯಿಂದ ಬಿಎಸ್‍ಆರ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದರು. ಈಗ ಮಾಜಿ ಶಾಸಕರಾಗಿರೋದು ಸಹ ಸಚಿವರ ಕೃಪೆಯಿಂದಲೇ ಎಂಬುದನ್ನು ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದೀಪಾವಳಿ ಗಿಫ್ಟ್ ಅಲ್ಲ, ಪೆಟ್ರೋಲ್, ಡೀಸೆಲ್ ಬೆಲೆ ಇನ್ನೂ ಕಡಿಮೆಯಾಗಬೇಕು: ಸತೀಶ್ ಜಾರಕಿಹೊಳಿ

ನಮ್ಮ ಮೇಲೆ ಬಂದಿರುವ ಆರೋಪಗಳೆಲ್ಲಾ ಸುಳ್ಳು. ಮಾಜಿ ಶಾಸಕರನ್ನು ಜನರು ಮರೆಯುತ್ತಾರೆಂದು ಈ ರೀತಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನೇರ ಸಾಲ ಫಲಾನುಭವಿಗಳಿಗೆ ಹಣ ತಲುಪದ ಬಗ್ಗೆ ಮಾಹಿತಿ ಇಲ್ಲ. ಒಂದು ವೇಳೆ ಅಕ್ರಮವಾಗಿದ್ದರೆ, ಸಚಿವರ ಗಮನಕ್ಕೆ ತಂದು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇವೆ. ಅಲ್ಲದೇ ನಮ್ಮ ಮೇಲೆ ಮರಳು ದಂಧೆ ಆರೋಪ ಸಹ ಮಾಡಿರುವ ಮಾಜಿ ಶಾಸಕರು, ಒಮ್ಮೆ ಭೂ ವಿಜ್ಞಾನ ಇಲಾಖೆ ಹಾಗೂ ಡಿಸಿ ಕಚೇರಿಯಿಂದ ಮಾಹಿತಿ ಪಡೆಯಬೇಕು. ಅವುಗಳೆಲ್ಲವೂ ಅವರ ಅವಧಿಯಲ್ಲೇ ಪರ್ಮಿಟ್ ಪಡೆದ ಪ್ರದೇಶಗಳಾಗಿವೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ನಿಮ್ಮ ಪಾದಕ್ಕೆ ನಮಸ್ಕಾರ ಮಾಡ್ತೀನಿ, ಪುನೀತ್‍ಗೆ ಕೆಟ್ಟ ಹೆಸ್ರು ತರಬೇಡಿ: ರಾಘವೇಂದ್ರ ರಾಜ್ ಕುಮಾರ್

ಮಾಜಿ ಶಾಸಕರು ಪದೇ ಪದೇ ನಮ್ಮ ಸಚಿವರ ವಿರುದ್ಧ ಏಕವಚನದಲ್ಲಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಅಲ್ಲದೇ ಪಿಎಗಳು ಕೇವಲ ಸಚಿವರ ಪಟ್ಟಿಯನ್ನು ಅಧಿಕಾರಿಗಳಿಗೆ ತಲುಪಿಸುವ ಕಾರ್ಯ ಮಾಡುತ್ತೇವೆ. ಆದರೆ ತಿಪ್ಪೇಸ್ವಾಮಿ ಪೂರ್ವಗ್ರಹ ಪೀಡಿತರಾಗಿ ಮಾತನಾಡುತ್ತಿದ್ದಾರೆ. ಒಂದು ವೇಳೆ ಮಾಜಿ ಶಾಸಕರ ಆರೋಪ ಸಾಭೀತಾದ್ರೆ ಅವರ ಮನೆಯಲ್ಲಿ ಕೆಲಸ ಮಾಡುತ್ತೇವೆ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ರಾಮುಲು ಬೆಂಬಲಿಗರಾದ ಜಯಪಾಲಯ್ಯ, ಮಂಜುನಾಥ್, ತಾಯಮ್ಮ ಉಪಸ್ಥಿತರಿದ್ದರು. ಇದನ್ನೂ ಓದಿ: ಕಂಠೀರವ ಸ್ಟುಡಿಯೋ ಬಳಿ ಬಿಗಿ ಪೊಲೀಸ್ ಭದ್ರತೆ

Share This Article
Leave a Comment

Leave a Reply

Your email address will not be published. Required fields are marked *