ಶ್ರೀಮಂತ ಪಾಟೀಲ್ ಹೇಳಿದ್ದು ಸತ್ಯ, ಎಸಿಬಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಲಿ :ಡಿಕೆಶಿ

Public TV
2 Min Read

ಬೆಳಗಾವಿ: ವಲಸಿಗ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ್ ಹೇಳಿದ್ದು ಸತ್ಯವಾಗಿದೆ. ಎಸಿಬಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಹರಿಹಾಯ್ದರು.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋಲಿನ ಬಗ್ಗೆ ಜಿಲ್ಲೆಯಲ್ಲೇ ಇಂದು ನಗರದ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ನಾಯಕರ ಜೊತೆಗೆ ಡಿ.ಕೆ.ಶಿವಕುಮಾರ್ ಪರಾಮರ್ಶೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫಲಿತಾಂಶ ನನಗೆ ಸಮಾಧಾನ ತಂದಿದೆ ಎಂದು ಹೇಳುವುದಿಲ್ಲ. ಆದರೆ ಬಿಜೆಪಿಯ ವಿರುದ್ಧ ಸುಮಾರು 1,50,000 ವೋಟ್ ಬಂದಿವೆ. ಆದರೂ ಅವರದ್ದು ಹೆಚ್ಚು ನಂಬರ್ ಬಂದಿದೆ. ನಂಬರ್ ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಕಲಿಕೆಯ ಮೆಟ್ಟಿಲಾಗಿರುವ ಅಂಗನವಾಡಿ ಕೇಂದ್ರವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಬೇಕು: ಜೊಲ್ಲೆ 

ಹಣದ ಆಫರ್!

ಬಿಜೆಪಿಯಿಂದ ನನಗೆ ಹಣದ ಆಫರ್ ಬಂದಿತ್ತು ಎಂಬ ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶ್ರೀಮಂತ ಪಾಟೀಲ್ ಸತ್ಯ ನುಡಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಎಸಿಬಿ ಈ ಬಗ್ಗೆ ಸ್ವಯಂ ದೂರು ದಾಖಲು ಮಾಡಿಕೊಳ್ಳಬೇಕು. ಈ ಬಗ್ಗೆ ಕೂಡಲೇ ಕೇಸ್ ದಾಖಲು ಮಾಡಿ, ತನಿಖೆ ಕೈಗೊಳ್ಳಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ. ಶುದ್ಧವಾಗಿ ಆಡಳಿತಕ್ಕೆ ಬಂದಿದ್ದೇವೆ ಎಂದು ಬಿಜೆಪಿ ಹೇಳಿದೆ. ಈಗ ಹೊರಗೆ ಶ್ರೀಮಂತ ಪಾಟೀಲ್ ಈ ರೀತಿ ಹೇಳಿದ್ದಾರೆ ಎಂದು ಹರಿಹಾಯ್ದರು.

ಪೆಟ್ರೋಲ್, ಡಿಸೇಲ್, ಗ್ಯಾಸ್ ಗಗನಕ್ಕೆ ಏರಿಸುತ್ತಿದೆ. ನಾಳೆ ನಾನು ಮತ್ತು ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಎತ್ತಿನ ಗಾಡಿಯಲ್ಲಿ ಹೋಗುತ್ತೇವೆ. ಜನರಿಗೆ ಸಮಸ್ಯೆ ಆಗದಂತೆ ಪ್ರತಿಭಟನೆ ಮಾಡುತ್ತೇವೆ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಆಕಾಶಕ್ಕೆ ಏರುತ್ತಿದೆ. ಹೀಗಾಗಿ ನಾಳೆ ಶಾಸಕಾಂಗ ಪಕ್ಷದ ನಾಯಕರು ಮತ್ತು ನಾನು ಎತ್ತಿನ ಗಾಡಿಯಲ್ಲಿ ಅಧಿವೇಶನಕ್ಕೆ ಹೋಗುತ್ತೇವೆ. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು. ಇದನ್ನೂ ಓದಿ:  ಅಕ್ಷಯ್ ತಾಯಿಯ ಸಾವಿಗೆ ಮಿಡಿದ ಮೋದಿ ಹೃದಯ

ಎಲೆಕ್ಷನ್ ಕಮಿಷನರ್ ನಮ್ಮ ಅಭ್ಯರ್ಥಿಗೆ ಒಂದು ವೋಟರ್ ಲಿಸ್ಟ್ ಕೊಟ್ಟಿದ್ದಾರೆ. ಬಿಜೆಪಿಯವರಿಗೆ ಬೇರೆಯ ವೋಟರ್ ಲಿಸ್ಟ್ ಕೊಟ್ಟಿದ್ದಾರೆ. ಅಲ್ಲದೇ ಎಂಇಎಸ್ ಅವರಿಗೂ ಅನ್ಯಾಯ ಆಗಿದೆ. ಅವರಿಗೂ ಬೇರೆ ಮತದಾರರ ಪಟ್ಟಿ ನೀಡಿದ್ದಾರೆ. ಇನ್ನು ಸೋಲನ್ನು ಎಐಸಿಸಿ ಗಂಭೀರವಾಗಿ ಪರಿಗಣಿಸಿದ್ದು, ಎಐಸಿಸಿಯಿಂದ ಸತ್ಯಶೋಧನೆಗಾಗಿ ಒಂದು ವಿಶೇಷ ತಂಡ ಬರಲಿದೆ ಎಂದು ಹೇಳಿದರು.

ಗುಜರಾತ್ ಸಿಎಂ ಬದಲಾವಣೆ!

ಗುಜರಾತ್ ಸಿಎಂ ಬದಲಾವಣೆ ವಿಚಾರಕ್ಕೆ ಉತ್ತರಿಸಿದ ಅವರು, ಕೊರೊನಾ ಸಂದರ್ಭದಲ್ಲಿ ಸರಿಯಾಗಿ ನಿಭಾಯಿಸಲು ಆಗಲಿಲ್ಲ ಎಂದು ದೇಶದ ಹಲವು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸುತ್ತಿದ್ದಾರೆ. ಹೀಗಾಗಿ ದೇಶದಲ್ಲಿ, ರಾಜ್ಯದಲ್ಲಿ ಎಲ್ಲಾ ಕಡೆ ಆಡಳಿತ ಸರಿ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:  ಸಮಯ ಪ್ರಜ್ಞೆ ಮೆರೆದ KSRTC ಚಾಲಕ – 50ಕ್ಕೂ ಅಧಿಕ ಮಂದಿ ಪ್ರಯಾಣಿಕರು ಪಾರು

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಧ್ರುವನಾರಾಯಣ, ಶಾಸಕರಾದ ಮಹಾಂತೇಶ್ ಕೌಜಲಗಿ, ಗಣೇಶ್ ಹುಕ್ಕೇರಿ, ಮಾಜಿ ಸಚಿವ ಎ.ಬಿ.ಪಾಟೀಲ್, ಮಾಜಿ ಶಾಸಕರಾದ ಫಿರೋಜ್ ಸೇಠ್, ಅಶೋಕ ಪಟ್ಟಣ ಸೇರಿದಂತೆ ಇನ್ನು ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *