ಮುಡಾ ಹಗರಣದ ದೂರುದಾರನೇ ಅರೆಸ್ಟ್ – ಸ್ನೇಹಮಯಿ ಕೃಷ್ಣ ಮನೆ, ಕಚೇರಿ ಮೇಲೆ ದಾಳಿ

2 Min Read

– ಬೆಂಗಳೂರಲ್ಲಿ ಅರೆಸ್ಟ್.. ಮೈಸೂರಿನಲ್ಲಿ ತಲಾಶ್

ಬೆಂಗಳೂರು: ಮುಡಾ ಸೈಟ್‌ಗಳ ಹಗರಣದ ದೂರುದಾರನನ್ನೇ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಡಾ ಮಾಜಿ ಆಯುಕ್ತ ನಟೇಶ್ ನೀಡಿದ ದೂರಿನನ್ವಯ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣನನ್ನ ಬಂಧಿಸಿದ್ದಾರೆ.

ಮುಂಬಡ್ತಿಗಾಗಿ ನಟೇಶ್ ಅವ್ರು ಸಿಎಸ್ ಶಾಲಿನಿ ರಜನೀಶ್‌ಗೆ ಒಂದೂವರೆ ಕೋಟಿ ಲಂಚ ನೀಡಿದ್ದಾರೆಂದು ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ರು. ಅಲ್ಲದೇ ಸಿಎಸ್ ಕೂಡ ತಮ್ಮ ವಿರುದ್ಧದ ಆರೋಪ ನಿರಾಧಾರ ಎಂದ್ದಿದ್ದರು. ಇದರ ಬೆನ್ನಲ್ಲೇ ನಿನ್ನೆ ಮತ್ತೊಂದು ದಾಖಲೆಯನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ರು. ಈ ಸಂಬಂಧ ಇಂದು ಬೆಳಗ್ಗೆ ಪೊಲೀಸ್ ಆಯುಕ್ತರಿಗೆ ಮುಡಾ ಮಾಜಿ ಆಯುಕ್ತ ನಟೇಶ್ ದೂರು ನೀಡಿದ್ದರು. ಅದರಂತೆ ಅರೆಸ್ಟ್ ಮಾಡಲಾಗಿದೆ.

ಸ್ನೇಹಮಯಿ ಕೃಷ್ಣ ನಕಲಿ ಆಡಿಯೋ, ನಕಲಿ ವಿಡಿಯೋ ಸೃಷ್ಟಿಸಿ ಆರೋಪ ಮಾಡಿದ್ದಾರೆಂದು ನಟೇಶ್ ದೂರು ನೀಡಿದ್ದರು. ಐಟಿ ಆಕ್ಟ್, ನಕಲಿ ದಾಖಲೆ ಸೃಷ್ಟಿ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಅರೆಸ್ಟ್ ಮಾಡಲಾಗಿದೆ. ಅಲ್ಲದೇ, ಇದೇ ವಿಚಾರವಾಗಿ ಬೆಂಗಳೂರಿನ ಶಾಂತಿನಗರದಲ್ಲಿರುವ ಸಿಸಿಬಿ ಕಚೇರಿಯಲ್ಲಿ ಸ್ನೇಹಮಯಿ ಕೃಷ್ಣನನ್ನು ವಿಚಾರಣೆ ಮಾಡಿದ್ದಾರೆ..

`ನನ್ನ ತಂದೆ ಜೀವಕ್ಕೆ ಕುತ್ತು ಬಂದ್ರೆ ಸರ್ಕಾರವೇ ಹೊಣೆ’
ಇತ್ತ ಶಾಂತಿನಗರದಲ್ಲಿರುವ ಸಿಸಿಬಿ ಕಚೇರಿ ಬಳಿ ಸ್ನೇಹಮಯಿ ಕೃಷ್ಣ ಪುತ್ರ ವಿವೇಕ್ ಆಗಮಿಸಿದ್ರು. ಈ ವೇಳೆ ಸರ್ಕಾರದ ವಿರುದ್ಧ ಕಿಡಿಕಾರಿದ್ರು. ಅರೆಸ್ಟ್ ಬಗ್ಗೆ ನಮಗೆ ಯಾವುದೇ ಮಾಹಿತಿ ಮತ್ತು ಕಾರಣವನ್ನೂ ನೀಡಿಲ್ಲ. ನಮಗೆ ತುಂಬಾ ಆತಂಕವಾಗಿದೆ. ನನ್ನ ತಂದೆಯವರ ಜೀವಕ್ಕೆ ತೊಂದ್ರೆ ಬಂದ್ರೆ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತೆ ಎಂದ್ರು.

ಸ್ನೇಹಮಯಿ ಕೃಷ್ಣ ಮನೆ, ಕಚೇರಿ ಮೇಲೆ ದಾಳಿ
ಅತ್ತ ಬೆಂಗಳೂರಿನಲ್ಲಿ ಸ್ನೇಹಮಯಿ ಕೃಷ್ಣನನ್ನ ಬಂಧಿಸಿದ ಬೆನ್ನಲ್ಲೇ, ಮೈಸೂರಿನಲ್ಲಿರುವ ಸ್ನೇಹಮಯಿ ಕೃಷ್ಣ ಮನೆ ಹಾಗೂ ಕಚೇರಿ ಮೇಲೆ ಸಿಸಿಬಿ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಸ್ನೇಹಮಯಿ ಕೃಷ್ಣ ಬಳಸುತ್ತಿದ್ದ ಕಂಪ್ಯೂಟರ್‌ನಲ್ಲಿ ನೂರಾರು ಆಡಿಯೋ ಸಂದೇಶಗಳು ಸೇವ್ ಆಗಿರುವುದು ಪತ್ತೆಯಾಗಿದೆ. ಕಳೆದ 4 ದಿನಗಳ ಹಿಂದೆ ನಟೇಶ್ ಸಂಬಂಧ 6 ಸೆಕೆಂಡ್‌ಗಳ ಆಡಿಯೋವೊಂದನ್ನು ರಿಲೀಸ್ ಮಾಡಿದ್ರು. ಆ ಆಡಿಯೋಗಳ ಬಗ್ಗೆಯೂ ಪೊಲೀಸರು ತಲಾಶ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಸ್ನೇಹಮಯಿ ಕೃಷ್ಣ ಅವರ ಪತ್ನಿಯನ್ನ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ರು. ಈ ಬಗ್ಗೆ ಸ್ನೇಹಮಯಿ ಕೃಷ್ಣ ಪುತ್ರ ಕೂಡ ಮಾಹಿತಿ ನೀಡಿದ್ದಾರೆ. ಅತ್ತ ಸ್ನೇಹಮಯಿ ಅರೆಸ್ಟ್ ಬಗ್ಗೆ ವಿಪಕ್ಷ ನಾಯಕ ಅಶೋಕ್ ಕಿಡಿಕಾರಿದ್ದಾರೆ.

Share This Article