ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು, ಮಾಜಿ ಸಚಿವರೂ ಆಗಿದ್ದ ಶಾಮನೂರು ಶಿವಶಂಕರಪ್ಪ (94) (Shamanur Shivashankarappa) ಅವರಿಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಮಕ್ಕಳು ಮುಂದಿನ ಕಾರ್ಯಗಳ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ನಾಳೆ ದಾವಣಗೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದಾರೆ.
ಸೋಮವಾರ ಬೆಳಗ್ಗೆ 9 ಗಂಟೆ ವೇಳೆ ಆಸ್ಪತ್ರೆಯಿಂದ (Hospital) ವೀರಶೈವ ಮಹಾಸಭಾ ಕಚೇರಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ. ಬೆಳಗ್ಗೆ 10 ರಿಂದ 10:30ರ ವೇಳೆಗೆ ಮಹಾಸಭಾ ಕಚೇರಿಯಿಂದ ದಾವಣಗೆರೆಗೆ ರವಾನೆ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸದ್ಯ ಶಿವಶಂಕರಪ್ಪ ಅವರ ಪುತ್ರಿಯರು ಬೆಂಗಳೂರಿನಲ್ಲೇ ಇದ್ದು, ಎಸ್.ಎಸ್ ಮಲ್ಲಿಕಾರ್ಜುನ್ ಅವರ ಬರುವಿಕೆಗಾಗಿ ಕಾಯುತ್ತಿದ್ದಾರೆ. ದಾವಣಗೆರೆಯಲ್ಲಿ ಎಲ್ಲಿ? ಎಷ್ಟೊತ್ತಿಗೆ ಅಂತ್ಯಕ್ರಿಯೆ ನಡೆಸಬೇಕು? ಅಂತಿಮ ದರ್ಶನಕ್ಕೆ ಎಲ್ಲಿ ವ್ಯವಸ್ಥೆ ಮಾಡಬೇಕು ಅನ್ನೋದು ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಆಸ್ಪತ್ರೆಗೆ ಬಿಗಿ ಬಂದೋಬಸ್ತ್
ಸದ್ಯ ಶಿವಶಂಕರಪ್ಪ ಅವರು ನಿಧನರಾದ ಹಿನ್ನೆಲೆ ದರ್ಶನಕ್ಕೆ ಗಣ್ಯರು, ರಾಜಕೀಯ ನಾಯಕರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಈ ಹಿನ್ನೆಲೆ ಆಸ್ಪತ್ರೆಗೆ ಡಿಜಿ ಅಂಡ್ ಐಜಿಪಿ ಎಂ.ಎ ಸಲೀಂ ಅವರ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಕೂಡ ಸ್ಥಳಕ್ಕಾಗಮಿಸಿ ಮಾಹಿತಿ ಪಡೆದಿದ್ದಾರೆ.


