ವಾಷಿಂಗ್ಟನ್: ಜಗತ್ತಿನ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಜೆಪಿ ಮೋರ್ಗಾನ್ ಚೇಸ್ನ (JPMorgan Chase) ಕಾರ್ಯನಿರ್ವಾಹಕ ನಿರ್ದೇಶಕಿ ಲೋರ್ನಾ ಹಜ್ದಿನಿ(Lorna Hajdini) ವಿರುದ್ಧ ಭಾರತೀಯ (India) ಮೂಲದ ಜೂನಿಯರ್ ಉದ್ಯೋಗಿಯೊಬ್ಬರು ಗಂಭೀರ ಲೈಂಗಿಕ ಕಿರುಕುಳ ಮತ್ತು ಜನಾಂಗೀಯ ನಿಂದನೆಯ ಆರೋಪ ಹೊರಿಸಿ ನ್ಯೂಯಾರ್ಕ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ತನ್ನನ್ನು ಲೈಂಗಿಕ ಗುಲಾಮನಂತೆ ನಡೆಸಿಕೊಳ್ಳಲಾಗುತ್ತಿತ್ತು ಮತ್ತು ಕಚೇರಿಯಲ್ಲಿಯೇ ಲೈಂಗಿಕ ಬೇಡಿಕೆಗಳನ್ನು(Sexually Abuse) ಇಟ್ಟು, ಅಕ್ರಮವಾಗಿ ದೈಹಿಕ ಸ್ಪರ್ಶ ಮಾಡಲಾಗುತ್ತಿತ್ತು ಎಂದು ಉದ್ಯೋಗಿ ಆರೋಪಿಸಿದ್ದಾರೆ.
ದೂರಿನಲ್ಲಿ ಏನಿದೆ?
ಸಂತ್ರಸ್ತನ ಇಚ್ಛೆಗೆ ವಿರುದ್ಧವಾಗಿ ಆತನಿಗೆ ರೋಹಿಪ್ನಾಲ್ ನಂತಹ ಮಾದಕ ದ್ರವ್ಯಗಳು ಮತ್ತು ವಯಾಗ್ರದಂತಹ ಲೈಂಗಿಕ ಪ್ರಚೋದಕಗಳನ್ನು ನೀಡಲಾಗಿತ್ತು. ಉದ್ಯೋಗಿಯನ್ನು “ಲಿಟಲ್ ಬ್ರೌನ್ ಬಾಯ್” ಎಂದು ಕರೆದು ಜನಾಂಗೀಯವಾಗಿ ಅವಮಾನಿಸಲಾಗುತ್ತಿತ್ತು. ಅಲ್ಲದೆ, ಆತನ ಪತ್ನಿಯ ಬಗ್ಗೆಯೂ ಅವಹೇಳನಕಾರಿ ಮಾತುಗಳನ್ನು ಆಡುತ್ತಿದ್ದರು.
ನನ್ನ ಲೈಂಗಿಕ ಬೇಡಿಕೆಗಳನ್ನು ಈಡೇರಿಸದಿದ್ದರೆ ನಿನ್ನ ವೃತ್ತಿಜೀವನವನ್ನು ಹಾಳು ಮಾಡುತ್ತೇನೆ ಎಂದು ಲೋರ್ನಾ ಹಜ್ದಿನಿ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ:ಪತ್ನಿಗೆ ಹಲವರ ಜೊತೆ ಅನೈತಿಕ ಸಂಬಂಧ, ವಿಡಿಯೋ ವೈರಲ್ – 19 ಪುಟ ಡೆತ್ನೋಟ್ ಬರೆದಿಟ್ಟು ಟೆಕ್ಕಿ ಆತ್ಮಹತ್ಯೆ
ಬ್ಯಾಂಕ್ನ ಪ್ರತಿಕ್ರಿಯೆ ಏನು?
ಈ ಕುರಿತು ಪ್ರತಿಕ್ರಿಯಿಸಿರುವ ಜೆಪಿ ಮೋರ್ಗಾನ್ ಚೇಸ್ ಸಂಸ್ಥೆಯು ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ. ನಮ್ಮ ಆಂತರಿಕ ತನಿಖೆಯಲ್ಲಿ ಈ ದೂರುಗಳಿಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ಹೀಗಾಗಿ ಹಜ್ದಿನಿ ಅವರು ಇನ್ನೂ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಪ್ರಸ್ತುತ ಈ ಪ್ರಕರಣವು ನ್ಯೂಯಾರ್ಕ್ ನ್ಯಾಯಾಲಯದಲ್ಲಿದ್ದು, ಪ್ರತಿಷ್ಠಿತ ಬ್ಯಾಂಕ್ನ ಆಂತರಿಕ ಕೆಲಸದ ವಾತಾವರಣದ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

