ಮೈ ನವಿರೇಳಿಸಿದ ವಿದ್ಯಾರ್ಥಿಗಳ ಸಾಹಸ ಪ್ರದರ್ಶನ

Public TV
3 Min Read

– ಮುದ್ದೇನಹಳ್ಳಿಯಲ್ಲಿ ವಿದ್ಯಾರ್ಥಿಗಳ ಸಾಹಸಕ್ಕೆ ಶಿಕ್ಷಣ ಸಚಿವರ ಮೆಚ್ಚುಗೆ

ಚಿಕ್ಕಬಳ್ಳಾಪುರ: ಮಕರ ಸಂಕ್ರಾಂತಿ ಹಬ್ಬದ ನಡುವೆ ಜಾಗತಿಕ ಒಲಂಪಿಕ್ ಕ್ರೀಡೋತ್ಸವವನ್ನು ನೆನಪಿಸುವಂತೆ ಶ್ರೀಸತ್ಯಸಾಯಿ ಲೋಕಸೇವಾ ಸಮೂಹ ಸಂಸ್ಥೆಗಳ ವಾರ್ಷಿಕ ಕಲಾ ಮತ್ತು ಕ್ರೀಡೋತ್ಸವ ಇಂದು ನಡೆಯಿತು.

ತಾಲ್ಲೂಕಿನ ಸತ್ಯಸಾಯಿ ಗ್ರಾಮದಲ್ಲಿ ಆಯೋಜನೆಗೊಂಡ ಸಂಸ್ಥೆಗಳ 45ನೇ ವರ್ಷದ ಸಾಂಸ್ಕೃತಿಕ ಮತ್ತು ಕ್ರೀಡೋತ್ಸವವನ್ನು ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಉದ್ಘಾಟಿಸಿದರು. ಶ್ರೀ ಸತ್ಯಸಾಯಿ ಸಮಾಗಮ್ ಕ್ರೀಡಾಂಗಣದ ಪಶ್ಚಿಮ ದಿಕ್ಕಿನಲ್ಲಿರುವ ಸಾನರಾಯಿ ಬೆಟ್ಟದ ಮೇಲೆ ಸ್ಥಾಪಿತವಾದ ಅಗ್ನಿ ಕುಂಡಕ್ಕೆ ಜ್ಯೋತಿರ್ ವಾಹನ ಶ್ವೇತ ನಂದಿ ಕ್ರೀಡಾ ಜ್ಯೋತಿಯನ್ನು ಹೊತ್ತೊಯ್ದು ನಿರಂತರ ಐದು ದಿನಗಳ ಕಾಲ ಪ್ರಜ್ವಲಿಸುವ ಪ್ರಕಾಶಕ್ಕೆ ಸಾಂಕೇತಿಕ ಚಾಲನೆ ನೀಡುವುದರೊಂದಿಗೆ ಕಾರ್ಯಕ್ರಮಗಳು ಆರಂಭವಾದವು.

ಕರ್ನಾಟಕ ರಾಜ್ಯದ 17 ಜಿಲ್ಲೆಗಳು ಮತ್ತು ತೆಲಂಗಾಣ ರಾಜ್ಯದ ಒಂದು ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 30 ವಿದ್ಯಾಸಂಸ್ಥೆಗಳ 4 ಸಾವಿರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕ್ರಮಬದ್ಧವಾಗಿ ವರ್ಣರಂಜಿತ ಸಮವಸ್ತ್ರದೊಂದಿಗೆ ಪಥಸಂಚಲನ ನಡೆಸಿ ಕ್ರೀಡೋತ್ಸವದಲ್ಲಿ ತಮ್ಮ ತಮ್ಮ ವಿದ್ಯಾನಿವೇಶನಗಳ ಪ್ರಾತಿನಿಧ್ಯವನ್ನು ಪ್ರದರ್ಶಿಸಿದರು. ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೂಕವಿಸ್ಮಿತರನ್ನಾಗಿಸುವ ಬಗೆಬಗೆಯ ಯೋಗ ಭಂಗಿಗಳು, ಪ್ರಾದೇಶಿಕ ಸೊಗಡನ್ನು ಬಿಂಬಿಸುವ ಜಾನಪದ ಕಲೆಗಳು, ಭಾರತದ ಸುಪ್ರಸಿದ್ಧ ನೃತ್ಯ ಪ್ರಕಾರಗಳು, ಕರಾಟೆ ಪ್ರದರ್ಶನ, ನೆರೆಯ ಕೇರಳ ರಾಜ್ಯದ ವೀರಕಲೆ ಕಲರಿ ಯುದ್ಧ ಪ್ರಾತ್ಯಕ್ಷಿಕೆ, ಜನರನ್ನು ತುದಿಗಾಲಲ್ಲಿ ನಿಲ್ಲಿಸಿರುವ ಜಾರುಗಾಲಿ ಚಮತ್ಕಾರ, ನೆಟ್ಟ ನೋಟವನ್ನು ಅತ್ತಿತ್ತ ಕದಲಿಸದೆ ಬೆರಗಿನಿಂದ ವೀಕ್ಷಿಸುವಂತೆ ನಡೆಯಿತು.

ವಾಯುಕ್ರೀಡೆಯಲ್ಲಿ 120 ಅಡಿ ಎತ್ತರದಲ್ಲಿ ಚಮತ್ಕಾರಿಕ ವಿನ್ಯಾಸ ರಚನೆ, ಬಿಸಿಗಾಳಿ ಬುಗ್ಗೆಯಿಂದ ಹಗ್ಗದ ಸಹಾಯವನ್ನು ಪಡೆದು ಜಾರುತ್ತಾ ನೆಲ ಸ್ಪರ್ಶ ಮಾಡುವ ವಾಯುವೀರರ ಸಾಹಸ, ಪ್ಯಾರಾಗ್ಲೈಡಿಂಗ್ ವಾಯುವಿಹಾರ, ನಾಗಾಲೋಟದಲ್ಲಿ ಜಿಗಿಯುತ್ತಾ ಮಿಂಚಿನ ವೇಗದಲ್ಲಿ ಓಡುತ್ತಿದ್ದ ಕುದುರೆಯನ್ನು ನಿಯಂತ್ರಿಸುತ್ತಾ ಸಾಹಸದ ಭಂಗಿಯನ್ನು ಪ್ರದರ್ಶಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ನೋಡುಗರ ಉಸಿರನ್ನೇ ಬಿಗಿಹಿಡಿದು, ಕಣ್ಣುರೆಪ್ಪೆ ಮಿಟುಕಿಸದಂತೆ ಮಿಂಚಿನ ಸಂಚಾರದಲ್ಲಿ ಹೊಸ ಸಾಹಸ ಪ್ರಪಂಚವನ್ನು ಸೃಷ್ಟಿಸಿದರು.

ಮೋಟಾರ್ ಸೈಕಲ್ ಸವಾರಿ, ಯಾವ ಸಾಹಸಕ್ಕೂ ಕಡಿಮೆಯಿಲ್ಲದಂತೆ ಕೌಶಲ್ಯವನ್ನು ಮೆರೆದ ಏಕ ಚಕ್ರ ಸೈಕಲ್ ಸವಾರಿ, ಬಗೆಬಗೆಯ ಯೋಗಾಂಗ ಸಾಧನೆಗಳು, ಕ್ರಿಕೆಟ್ ಆಟದ ಚಮತ್ಕಾರಿಕ ತಂತ್ರಗಳು, ಭೂಕೇಂದ್ರಿತ ಬಹುರೂಪಿ ಕಸರತ್ತುಗಳು, ವರ್ತುಲ ವಿನ್ಯಾಸದ ರಚನೆಯಲ್ಲಿ ಸಾಹಸ ಪ್ರದರ್ಶನ ಮುಂತಾದವುಗಳು ಆರಂಭೋತ್ಸವದಲ್ಲಿ ಪ್ರದರ್ಶನಗೊಂಡು ನೆರೆದ ಸಹಸ್ರಾರು ಮಂದಿಗೆ ಸಂಕ್ರಾಂತಿ ಶುಭಾಶಯ ಸಾರುವುದರೊಂದಿಗೆ ಮನೋರಂಜನೆ, ಮನೋಲ್ಲಾಸವನ್ನು ನೀಡುವಲ್ಲಿ ಯಶಸ್ವಿಯಾದವು.

ಉದ್ಘಾಟನಾ ಸಮಾರಂಭದಲ್ಲಿ ಉತ್ತರಾಖಂಡ ರಾಜ್ಯದ ನಗರಾಭಿವೃದ್ಧಿ ಮಂತ್ರಿಗಳಾದ ಮದನ್ ಕೌಶಿಕ್, ಶಿಕ್ಷಣ ತಜ್ಞ ಅತುಲ್ ಕೊಠಾರಿ, ನಾನಾ ರಾಜ್ಯಗಳ ಹಲವಾರು ಶಾಸಕರು, ವಿನಯಾನಂದ ಸ್ವಾಮೀಜಿ, ಆಂಟನಿ ಟ್ಯಾನಿ, ಡೇವಿಡ್ ಕಾರ್ನ್‍ಸ್ವೀಟ್, ಪ್ರೊ. ಶಶಿಧರ್ ಪ್ರಸಾದ್, ಬಿ.ಎನ್.ನರಸಿಂಹಮೂರ್ತಿ, ಬಿ.ನಾರಾಯಣ ರಾವ್, ಕರಾಯ ಸಂಜೀವ ಶೆಟ್ಟಿ ಮೊದಲಾದ ಗಣ್ಯರು ಭಾಗವಹಿಸಿದ್ರು.

ಇದೇ ವೇಳೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸರಿ ಸಮಾರು 4 ಗಂಟೆಗಳ ಕಾಲ ನಡೆದ ವಿದ್ಯಾರ್ಥಿಗಳ ಭಿನ್ನ ವಿಭಿನ್ನ ಸಾಹಸಮಯ ಪ್ರದರ್ಶನಗಳನ್ನ ಕಂಡು ನಾನು ಮೂಕವಿಸ್ಮತನಾದೆ. ಇಲ್ಲಿ ಭಾಗವಹಿಸಿದ ಮಕ್ಕಳು ಯಾರೂ ಶ್ರೀಮಂತರಲ್ಲ, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸದ ಜೊತೆ ಜೊತೆಗೆ ಈ ರೀತಿಯ ಸಾಹಸಮಯ ಪ್ರವೃತ್ತಿಗಳನ್ನು ಕಲಿಸುವುದರ ಮೂಲಕ ಸತ್ಯಸಾಯಿ ವಿದ್ಯಾಸಂಸ್ಥೆ ವಿಶೇಷವಾಗಿದೆ. ಹೀಗಾಗಿ ಜಿಲ್ಲೆಗೊಂದು ಸರ್ಕಾರಿ ಶಾಲೆಯಂತೆ ಈ ರೀತಿಯ ಸಾಹಸ ಪ್ರವೃತ್ತಿಗಳನ್ನು ವಿದ್ಯಾರ್ಥಿಗಳ ಕಲಿಸಿ ತಯಾರಿ ಮಾಡಿದರೆ ಬಹಳ ಅನೂಕೂಲ ಆಗುತ್ತೆ ಎಂದು ಅಭಿಪ್ರಾಯಪಟ್ಟರು.

ನಾನು ಬಹಳಷ್ಟು ಶಾಲೆಗಳಗೆ ಆನೇಕ ಕಾರ್ಯಕ್ರಮಗಳಿಗೆ ಭೇಟಿ ಕೊಟ್ಟಿದ್ದೇನೆ. ಆದರೆ ಇವತ್ತಿನ ಈ ವಿದ್ಯಾರ್ಥಿಗಳ ಈ ಕಾರ್ಯಕ್ರಮ ಅವಿಸ್ಮರಣೀಯ. ಸತ್ಯ ಸಾಯಿ ವಿದ್ಯಾಸಂಸ್ಥೆಗಳು ಸಮಾಜಕ್ಕೆ ಉತ್ತಮ ಕೊಡುಗೆ ಕೊಡುತ್ತಿವೆ ಅನ್ನೋದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದರು.

Share This Article
Leave a Comment

Leave a Reply

Your email address will not be published. Required fields are marked *