ಕಸ್ಟಡಿಯಲ್ಲಿರುವ ʼಗಜ’ನಿಗೆ ಕರಗಿದ ಗತ್ತು- ನನ್ನಿಂದ ತಪ್ಪಾಗಿದೆ, ಬಿಟ್ಟು ಬಿಡಿ ಎಂದ ದರ್ಶನ್!

Public TV
2 Min Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಹತ್ಯೆ ಕೇಸಲ್ಲಿ ಪೊಲೀಸರ ತನಿಖೆ ತೀವ್ರವಾಗಿದೆ. ಒಂದು ವಾರದ ಬಳಿಕ ದರ್ಶನ್‍ಗೆ ಜ್ಞಾನೋದಯವಾದಂತೆ ಕಾಣುತ್ತಿದೆ. ಪರಿಚಯಸ್ಥ ಪೊಲೀಸ್ ಅಧಿಕಾರಿಗಳನ್ನು ಕಾಣುತ್ತಿದ್ದಂತೆ, ದರ್ಶನ್ (Challenging Star Darshan) ನನ್ನಿಂದ ತಪ್ಪಾಗಿದೆ, ಬಿಟ್ಟು ಬಿಡಿ ಎಂದು ಅಲವತ್ತುಕೊಂಡಿದ್ದಾರೆ.

ಸಾರ್ ನಾನು ತಪ್ಪು ಮಾಡಿಬಿಟ್ಟೆ. ಮುಂಗೋಪದಿಂದ ತಪ್ಪು ಮಾಡಿಬಿಟ್ಟೆ. ಅನಗತ್ಯವಾಗಿ ನಾನು ಕೇಸಲ್ಲಿ ಸಿಕ್ಕಿಬಿಟ್ಟೆ. ಸ್ನೇಹಿತರನ್ನು ನಂಬಿ ನಾನು ಹಾಳಾದೆ. ನನ್ನ ಜೀವನದಲ್ಲಿ ಇದೊಂದು ಕಪ್ಪುಚುಕ್ಕಿ ಎಂದು ಪೊಲೀಸರ ಬಳಿ ದರ್ಶನ್ ಪಶ್ಚಾತ್ತಾಪಪಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಇತ್ತ ಪೊಲೀಸರ ವಿಚಾರಣೆ ವೇಳೆ ಎ-1 ಆರೋಪಿ ಪವಿತ್ರಾಗೌಡ ಬಾಯಿ ಬಿಡುತ್ತಿಲ್ಲ. ಇದು ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ಏನೇ ಕೇಳಿದ್ರೂ ಪವಿತ್ರಾ ಗೌಡ ನನಗೇನೂ ಗೊತ್ತಿಲ್ಲ. ನಿಮಗೆ ಏನ್ ಬೇಕೋ ಹಾಗೆ ಬರೆದುಕೊಳ್ಳಿ ಅಂತ ಉತ್ತರ ನೀಡುತ್ತಿದ್ದಾರೆ. ಇದರಿಂದಾಗಿ ಪವಿತ್ರಾ ಗೌಡ ಹೇಳಿಕೆ ದಾಖಲಿಸಿಕೊಳ್ಳಲು ವಿಳಂಬವಾಗಿದೆ. ಇದನ್ನೂ ಓದಿ: ಸದ್ಯಕ್ಕಿನ್ನು ಆರೋಪಿಯಷ್ಟೇ, ಅಪರಾಧಿಯಾಗಿಲ್ಲ- ಅನುಷಾ ರೈ ರಿಯಾಕ್ಷನ್

ಮರ್ಡರ್ ಕೇಸಲ್ಲಿ ರಕ್ತಸಿಕ್ತ ಬಟ್ಟೆಗಳೇ ಸಾಕ್ಷಿ: ಇಡೀ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವೇ ಬಟ್ಟೆಗಳು. ಸ್ಪಾಟ್ ಮಹಜರು ವೇಳೆ, ಕೊಲೆ ನಡೆದ ದಿನದಂದು ದರ್ಶನ್ ಹಾಗೂ ಪವಿತ್ರಾ ಗೌಡ ಧರಿಸಿದ್ದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಟ್ಟೆಗಳನ್ನು ಡ್ರೈ ಕ್ಲಿನಿಂಗ್‍ಗೆ ಕೊಟ್ಟಿದ್ದರು ಕೂಡ ರಕ್ತದ ಕಲೆಗಳು ಪತ್ತೆಯಾಗಿವೆ. ಇದೇ ತನಿಖೆಗೆ ಸಹಕಾರಿಯಾಗಲಿದೆ. ಇನ್ನೂ ರಕ್ತದ ಕಲೆಗಳು ಇಲ್ಲದಿದ್ದರೂ, ಚಿತ್ರದುರ್ಗದ ರಾಘವೇಂದ್ರ ತಾನೇ ಬಟ್ಟೆಯನ್ನು ಎರಡೆರಡು ಬಾರಿ ಒಗೆದು ಹಾಕಿದ್ದ. ಮತ್ತೊಂದು ಕಡೆ ಜಗ್ಗ ಬಟ್ಟೆಯನ್ನು ಎತ್ತಿ ಬಿಸಾಡಿದ್ದ. ಈ ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ನಾಳೆ ಮೈಸೂರಲ್ಲೂ ಸ್ಥಳ ಮಹಜರು: ಇನ್ನೂ ಬೆಂಗಳೂರಿನಲ್ಲಿ ತನಿಖೆ ಮುಗಿಸಿರೋ ಪೊಲೀಸರು ಮಂಗಳವಾರ ಮೈಸೂರಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ. ದರ್ಶನ್ ಉಳಿದುಕೊಂಡಿದ್ದ ಹೋಟೆಲ್, ಅರೆಸ್ಟ್ ಆಗೋ ಮುನ್ನ ದರ್ಶನ್ ಹೋಗಿದ್ದ ಜಿಮ್ ಹಾಗೂ ಹೋಟೆಲ್ ಮುಂಭಾಗ ಇರೋ ಕಾರಿನ ಮಹಜರು ನಡೆಸಲಿದ್ದಾರೆ. ಹತ್ಯೆ ಬಳಿಕ ಮೈಸೂರಿಗೆ ಹೋಗಲು ಬಳಸಿದ್ದ ಐಷಾರಾಮಿ ಕಾರನ್ನೂ ಪೊಲೀಸರು ವಶಕ್ಕೆ ಪಡೆಯೋ ಸಾಧ್ಯತೆಗಳಿವೆ.

ಒಟ್ಟಿನಲ್ಲಿ ದರ್ಶನ್ ಕೇಸಲ್ಲಿ ಪೊಲೀಸರು ಶರವೇಗದಲ್ಲಿ ತನಿಖೆ ನಡೆಸುತ್ತಿದ್ದು, ಇನ್ನೇನು ಪ್ರಕರಣದ ತನಿಖೆ ಕೊನೆ ಹಂತಕ್ಕೆ ಬಂದಿದೆ….ದರ್ಶನ್ ಜೈಲಿಗೋಗೆ ದಿನವೂ ಹತ್ತಿರವಾದಂತೆ ಕಾಣುತ್ತಿದೆ.

Share This Article