ನಟಿ ಶೃತಿ ಹರಿಹರನ್ #MeToo ಆರೋಪಕ್ಕೆ ಧರ್ಮದ ನಂಟು..!

Public TV
3 Min Read

ಬೆಂಗಳೂರು: ನಟಿ ಶೃತಿ ಹರಿಹರನ್ ಅವರು ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ `ಲೈಂಗಿಕ ಕಿರುಕುಳ’ ಆರೋಪ ಮಾಡಿರುವುದು ಇದೀಗ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಇದಕ್ಕೆ ಇದೀಗ ಧರ್ಮದ ನಂಟು ಅಂಟಿಸಲಾಗಿದೆ.

ಅರ್ಜುನಾ ಸರ್ಜಾ ಅವರು ಹನುಮ ಭಕ್ತ, ಆರೋಪದ ಹಿಂದೆ ಹಿಂದೂ ವಿರೋಧಿ ಅಜೆಂಡಾವಿದೆ. ಸರ್ಜಾ ಅವರು ಹಿಂದೂಧರ್ಮ ಅನುಸರಿಸುತ್ತಾರೆ. ಅವರು ಚೆನ್ನೈನಲ್ಲಿ ಹನುಮನ ಮೂರ್ತಿ ನಿರ್ಮಿಸಿದ್ದಾರೆ. ಅರ್ಜುನ್ ಸರ್ಜಾ ಅವರ ತಂದೆ ಆರ್‍ಎಸ್‍ಎಸ್‍ನಲ್ಲಿದ್ದವರು ಎಂದು ಅರ್ಜುನ್ ಸರ್ಜಾ ಪರ ಕನ್ನಡ ಹೋರಾಟಗಾರ, ಉದ್ಯಮಿ ಪ್ರಶಾಂತ್ ಸಂಬರ್ಗಿ ನಿಂತಿದ್ದಾರೆ.

ಶೃತಿ ಹರಿಹರನ್ ತಂದೆ ಕಮ್ಯೂನಿಸ್ಟ್ ಬೆಂಬಲಿಗರು. ಶೃತಿ ಹರಿಹರನ್ ಅವರ ಮೀಟೂ ಆರೋಪದ ಹಿಂದೆ ಮೋದಿ ವಿರೋಧಿ, ಹಿಂದೂ ವಿರೋಧಿ, ಬಿಜೆಪಿ ವಿರೋಧಿ ಅಜೆಂಡಾವಿದೆ. ಕವಿತಾ ಲಂಕೇಶ್, ನಟ ಚೇತನ್, ರೂಪಾ ಅಯ್ಯರ್ ಇವರೆಲ್ಲ ಕನ್ನಡ ಸಿನಿಮಾ ಲೋಕದ ಎಡಪಂಥಿಯರು. ಪ್ರಕಾಶ್ ರೈ ಅಂತ ವುಮೆನೈಜರ್ ಹಿಂದೆ ಮುಂದೆ ನೋಡದೆ ಸಪೋರ್ಟ್ ಮಾಡ್ತಿದ್ದಾರೆ. ಇದು ಸಂಪೂರ್ಣ ವ್ಯವಸ್ಥಿತವಾದ ಪೊಲಿಟಿಕಲ್ ಡ್ರಾಮಾ ಎಂದು ಪ್ರಶಾಂತ್ ಸಂಬರ್ಗಿ ಕಿಡಿಕಾರಿದ್ದಾರೆ. ಇದನ್ನು ಓದಿ: ತಾವೇ ಆಂಜನೇಯ ಮೂರ್ತಿಗೆ ಕೆತ್ತನೆ ಮಾಡಿದ ಅರ್ಜುನ್ ಸರ್ಜಾ – ವಿಡಿಯೋ

ಶೃತಿ ಹರಿಹರನ್ ಆರೋಪವೇನು?:
ಮ್ಯಾಗಜೀನ್‍ವೊಂದರ ಸಂದರ್ಶನದ ವೇಳೆ ನಟ ಅರ್ಜುನ್ ವಿರುದ್ಧ ಆರೋಪ ಮಾಡಿದ ಶೃತಿ ಹರಿಹರನ್, ವಿಸ್ಮಯ ಚಿತ್ರೀಕರಣದ ವೇಳೆ ತನ್ನ ಮೇಲಾದ ಲೈಂಗಿಕ ಕಿರುಕುಳವಾದ ಅನುಭವವನ್ನು ಬಿಚ್ಚಿಟ್ಟಿದ್ದರು. ಕಳೆದ ವರ್ಷ `ವಿಸ್ಮಯ’ ಅನ್ನೋ ಸಿನಿಮಾವೊಂದನ್ನು ನಾನು ಮಾಡಿದ್ದೆ. ಚಿತ್ರದಲ್ಲಿ ಅರ್ಜುನ್ ಅರ್ಜಾ ಅವರು ನನ್ನ ಸಹನಟನಾಗಿ ಅಭಿನಯಿಸಿದ್ದರು. ಚಿತ್ರದಲ್ಲಿ ನಾನು ಅವರ ಹೆಂಡತಿಯಾಗಿ ನಟಿಸುತ್ತಿದ್ದೆ, ಅದರ ಪ್ರ್ಯಾಕ್ಟೀಸ್ ಮಾಡುತ್ತಿದ್ದೆವು. ಆಗ ಸರ್ಜಾ `ಇನ್ನೊಂಚೂರು ಹೀಗೆ ಪ್ರಾಕ್ಟೀಸ್ ಮಾಡಬಹುದಲ್ವಾ?’ ಅಂತ ಹೇಳಿ ಅವರು ನನ್ನನ್ನು ಜೋರಾಗಿ ತಬ್ಬಿಕೊಂಡರು. ಅವರ ಆ ಅಪ್ಪುಗೆಯಿಂದ ಒಮ್ಮೆಲೆ ನಾನು ತಬ್ಬಿಬ್ಬಾಗಿದ್ದು, ಆ ವರ್ತನೆ ತುಂಬಾನೇ ಅಸಹ್ಯವಾಗಿತ್ತು. ಇದರಿಂದ ನನಗೆ ಇರಿಸು ಮುರುಸು ಉಂಟಾಗಿದ್ದು, ಕೂಡಲೇ ನಿರ್ದೇಶಕರ ಬಳಿ ತೆರಳಿ `ಇನ್ನು ಮುಂದೆ ನಾನು ರಿಹರ್ಸಲ್ ಗೆ ಬರಲ್ಲ, ಬರೀ ಶೂಟಿಂಗ್ ಗಷ್ಟೇ ಕರೆಯಿರಿ’ ಅಂತ ಹೇಳಿ ಬಂದುಬಿಟ್ಟೆ. ಆ ಬಳಿಕ ನಾನು ಬರೀ ಶೂಟಿಂಗ್ ಗೆ ಮಾತ್ರ ಹೋಗಿ ಬರುತ್ತಿದ್ದೆ ಅಂತ ಶೃತಿ ಹೇಳಿದ್ದರು.

ಇಷ್ಟೆಲ್ಲಾ ಆದ್ರೂ ಅರ್ಜುನ್ ಸರ್ಜಾ ಮಾತ್ರ ವಿಚಲಿತನಾದಂತೆ ಕಾಣಲಿಲ್ಲ. ಯಾಕಂದ್ರೆ ಅದಾದ ಬಳಿಕ ಅವರು ನನ್ನ ಜೊತೆ ಮಾತನಾಡುವಾಗಲೂ ಬಳಸಿದ ಭಾಷೆ ಸಭ್ಯವಾಗಿರಲಿಲ್ಲ. ಪದೇ ಪದೇ ಡಿನ್ನರ್ ಗೆ ಕರೆಯುತ್ತಿದ್ದರು. `ರೆಸಾರ್ಟ್ ಗೆ ಹೋಗೋಣ ಬಾ’ ಎಂದು ಕರೆಯಲು ಆರಂಭಿಸಿದ್ರು. ಹೀಗೆ ಕರೆಯುವಾಗ ನಾನು ನೇರವಾಗಿ `ಇಲ್ಲ, ನಾನು ಬರಲ್ಲ’ ಅಂತ ಹೇಳುತ್ತಿದ್ದೆನು. ನನ್ನ ಈ ಮಾತುಗಳನ್ನೂ ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. `ನೋ ಅಂದ್ರೆ ನೋ’ ಎಂಬುದರ ಅರ್ಥವೇ ಅವರಿಗೆ ಆಗುತ್ತಿಲ್ಲವಲ್ಲ ಅಂತ ನನಗೆ ನಿಜವಾಗಿಯೂ ಅಚ್ಚರಿಯಾಗುತ್ತಿತ್ತು. ಯಾಕಂದ್ರೆ ಅವರಿಗೆ ಹೀಗೆ ಕರೆದಾಗ ಯಾರೂ `ನೋ’ ಅಂತ ಹೇಳಿರಲಿಲ್ಲವೋ ಏನೋ, ಅದಕ್ಕೆ ಅವರು ನನ್ನ ನೇರ ಮಾತುಗಳನ್ನು ಕಡೆಗಣಿಸುತ್ತಿದ್ದರು ಅಂತ ಅವರು ತನಗಾದ ಅನುಭವವನ್ನು ಬಿಚ್ಚಿಟ್ಟಿದ್ದರು.

ಅರ್ಜುನ್ ಸರ್ಜಾ ಹೇಳಿದ್ದೇನು?
ಶೃತಿ ಆರೋಪದಿಂದ ನನಗೆ ತುಂಬಾ ನೋವಾಗಿದೆ. ಇದೂವರೆಗೂ ನಾನು 60 ರಿಂದ 70 ನಟಿಯರ ಜೊತೆ ನಟಿಸಿದ್ದೇನೆ. ಯಾರೂ ಸಹ ಈ ರೀತಿಯ ಆರೋಪ ಮಾಡಿಲ್ಲ. ಜೊತೆಯಲ್ಲಿಯೂ ಕೂರಿಸಿಕೊಂಡು ದೃಶ್ಯದಲ್ಲಿ ಹೇಗೆ ನಟಿಸಬೇಕು? ಡೈಲಾಗ್ ನಲ್ಲಿ ಏನಾದರೂ ಬದಲಾವಣೆ ಮಾಡಬೇಕು ಎಂಬುದರ ಕುರಿತು ಚರ್ಚಿಸುತ್ತೇವೆ. ನಮ್ಮ ವೃತ್ತಿಯನ್ನು ಮುಂದಿಟ್ಟುಕೊಂಡು ಇಂತಹ ಕೆಳಮಟ್ಟದಲ್ಲಿ ನಾನು ಎಂದೂ ಇಳಿದಿಲ್ಲ. ನಮ್ಮ ಪ್ರೊಫೆಶನ್ ಮುಂದೆ ಇಟ್ಟುಕೊಂಡು ಒಂದು ಹೆಣ್ಣಿನ ಮೈ ಮುಟ್ಟಬೇಕು ಎಂಬ ಚೀಪ್ ಮೆಂಟಾಲಿಟಿ ನನ್ನಲ್ಲಿ ಇಲ್ಲ. ನಾನು ಮೀಟೂ ವೇದಿಕೆ ಬಗ್ಗೆ ತುಂಬಾ ಗೌರವ ಹೊಂದಿದ್ದೇನೆ. ಈ ದೊಡ್ಡ ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶೃತಿ ಮಾತನಾಡುವ ಮಾತುಗಳಿಗೆ ಯಾವುದಾದರೂ ಆಧಾರವಿದೆಯಾ? ಶೃತಿ ಆರೋಪದ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಅಂತ ಹೇಳಿದ್ದರು.

ನಾನು ಪ್ರತಿಕ್ರಿಯಿಸಬಾರದು ಅಂತಾ ನಿರ್ಧರಿಸಿದ್ದೆ. ಆದ್ರೆ `ಮೌನಂ ಸಮ್ಮತಿ ಲಕ್ಷ್ಮಣಂ’ ಎಂದು ಅರ್ಥವಾಗುತ್ತದೆ ಎಂದು ಪಬ್ಲಿಕ್ ಟಿವಿ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದೇನೆ. ಒಂದೂವರೆ ವರ್ಷದ ಹಿಂದೆ ನಡೆದ ಸಿನಿಮಾ ಮುಗಿದಿದೆ. ಅಂದೇ ನಿರ್ದೇಶಕರಿಗೆ ಅಥವಾ ಚಲನಚಿತ್ರ ಮಂಡಳಿಗೆ ದೂರು ಕೊಡಬೇಕಿತ್ತು. ಇಷ್ಟು ದಿನ ಸುಮ್ಮನಿದ್ದು ಈವಾಗ ಯಾಕೆ ಹೇಳುತ್ತಿದ್ದಾರೆಂದು ಗೊತ್ತಿಲ್ಲ ಎಂದು ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=LFKlX3O1iuM

https://www.youtube.com/watch?v=CT09s2HQWKY

Share This Article
Leave a Comment

Leave a Reply

Your email address will not be published. Required fields are marked *