ನಿಮಗೆ ಜನ ಸೇವಕ ಬೇಕೋ? ಅಳುವ ನಾಯಕ ಬೇಕೋ? ನೀವೇ ನಿರ್ಧರಿಸಿ: ನಟ ಉಪೇಂದ್ರ

Public TV
2 Min Read

ಚಿಕ್ಕಬಳ್ಳಾಪುರ: ನಿಮಗೆ ಜನ ಸೇವಕ ಬೇಕೋ? ಅಳುವ ನಾಯಕ ಬೇಕೋ ಎನ್ನುವುದನ್ನು ನೀವೇ ನಿರ್ಧರಿಸಿ ಎಂದು ನಟ ಉಪೇಂದ್ರ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮುನಿರಾಜು ಪರ ಪಕ್ಷದ ಸಂಸ್ಥಾಪಕ ನಟ ಉಪೇಂದ್ರ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮದು ರಾಜಕಾರಣ ಅಲ್ಲ ಪ್ರಜಾಕಾರಣ, 72 ವರ್ಷಗಳಿಂದಲೂ ಇರುವ ರಾಜಕಾರಣದ ಮನಸ್ಥಿತಿಯನ್ನು ಜನರಿಂದ ಬದಲಾವಣೆ ಮಾಡುವ ಸದುದ್ದೇಶದಿಂದಲೇ ಪಕ್ಷ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ನಾವು ನಾಯಕರೂ ಅಲ್ಲ, ನಾವೂ ಜನರ ಸೇವಕರು, ಜನರಿಗಾಗಿ ಕೂಲಿ ಪಡೆದು ಕೆಲಸ ಮಾಡುವ ಕಾರ್ಮಿಕರಾಗಿರುತ್ತೇವೆ ಎಂದರು.

ಎಲ್ಲಾ ರಾಜಕಾರಣಿಗಳು, ಪಕ್ಷಗಳಂತೆ ನಾವು ಯಾವುದೇ ಚುನಾವಣಾ ರ್ಯಾಲಿ, ಸಭೆ, ಸಮಾರಂಭಗಳನ್ನು ನಡೆಸುವುದಿಲ್ಲ, ಯಾವುದೇ ಪೊಳ್ಳು ಭರವಸೆಗಳ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವುದಿಲ್ಲ. ಕೇವಲ ಪ್ರಚಾರದ ಭಿತ್ತಿ ಪತ್ರಗಳನ್ನಷ್ಟೇ ಜನರಿಗೆ ನೀಡಿ ತಮ್ಮ ಅಭ್ಯರ್ಥಿಯ ಆಟೋ ಗುರುತಿಗೆ ಮತ ನೀಡಿ ಎಂದು ಮನವಿ ಮಾಡ್ತೇವೆ. ಅದೇ ಭಿತ್ತಿ ಪತ್ರದಲ್ಲಿ ನಿಮ್ಮ ಸಮಸ್ಯೆಗಳು, ಬೇಡಿಕೆಗಳು. ಆದೇಶಗಳನ್ನು ನಮಗೆ ಕೊಡುವಂತೆ ಜನರ ಬಳಿ ತಿಳಿಸುತ್ತೇವೆ ಎಂದು ಹೇಳಿದರು.

ಜನರೇ ಪ್ರಜಾಕಾರಣದ ಸಿದ್ದಾಂತಗಳನ್ನು ಮೆಚ್ಚಿ ಮತ ನೀಡಬೇಕು ಹೊರತು ನಾವು ರ್ಯಾಲಿ ಸಭೆ ಸಮಾರಂಭಗಳ ಮೂಲಕ ಮತದಾರರನ್ನು ಮುಟ್ಟುವುದಿಲ್ಲ. ಒಬ್ಬರಿಂದ ಒಬ್ಬರಿಗೆ ಮಾಧ್ಯಮಗಳ ಮೂಲಕ ಜನರಿಗೆ ಪ್ರಜಾಕಾರಣದ ಸಿದ್ದಾಂತಗಳು ತಿಳಿದು ಒಂದು ದಿನ ಪ್ರಜಾಕಾರಣ ಪಕ್ಷ ಮೇಲೆ ಬರುತ್ತದೆ. ಹೀಗಾಗಿ ಒಂದು ವೇಳೆ ಪ್ರಜಾಕಾರಣ ಸಿದ್ದಾಂತಗಳ ವಿಭಿನ್ನ ಪ್ರಯತ್ನ ಯಶಸ್ವಿಯಾದರೆ ಇಡೀ ಇಂಡಿಯಾವೇ ಪ್ರಜಾಕಾರಣಕ್ಕೆ ಬದಲಾಗುತ್ತೆ. ಒಂದಲ್ಲ ಒಂದು ದಿನ ಪ್ರಜಾಕಾರಣಕ್ಕೆ ಯಶಸ್ಸು ಸಿಕ್ಕೇ ಸಿಗುತ್ತೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು.

ನಟ ಉಪೇಂದ್ರ ಜೊತೆ ಸೆಲ್ಫಿಗಾಗಿ ಸಾಕಷ್ಟು ಮಂದಿ ಮುಗಿಬಿದ್ದರು. ಮತ್ತೊಂದೆಡೆ ಸುದ್ದಿಗೋಷ್ಠಿಯಲ್ಲಿ ಉಪೇಂದ್ರ ಜೊತೆ ಖಾಕಿ ಶರ್ಟ್, ಕರಿ ಪ್ಯಾಂಟ್, ಟೈ ಧರಿಸಿ, ಗುರುತಿನ ಚೀಟಿ ಹಾಕಿ ಅಭ್ಯರ್ಥಿ ಮುನಿರಾಜು ಭಾಗವಹಿಸಿದ್ದು ವಿಶೇಷವಾಗಿತ್ತು. ಅಭ್ಯರ್ಥಿಗಳ ಪರ ಮತಯಾಚನೆ ಮಾಡುವ ಉದ್ದೇಶದಿಂದ ತಾವು ಸ್ಪರ್ಧೆ ಮಾಡುತ್ತಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಉಪೇಂದ್ರ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *