ತಾಯಿ ಆಸ್ಪತ್ರೆಯಲ್ಲಿದ್ದರೂ ದೇಶಕ್ಕಾಗಿ ಓಡೋಡಿ ಬಂದ ಅಶ್ವಿನ್‌!

Public TV
1 Min Read

– ಟೀಂ ಇಂಡಿಯಾ ಅಭಿಮಾನಿಗಳಿಂದ ಮೆಚ್ಚುಗೆ

ರಾಜ್‌ಕೋಟ್‌:‌ ಭಾರತ ಮತ್ತು ಇಂಗ್ಲೆಂಡ್‌ ನಡುವಿನ 3ನೇ ಟೆಸ್ಟ್​ ಪಂದ್ಯದ 2ನೇ ದಿನದಿಂದ ಅಲಭ್ಯರಾಗಿದ್ದ ಟೀಂ ಇಂಡಿಯಾ ಸ್ಪಿನ್‌ ಮಾಂತ್ರಿಕ ರವಿಚಂದ್ರನ್ ಅಶ್ವಿನ್ (Ravichandran Ashwin) 4ನೇ ದಿನದಂದು ತಂಡಕ್ಕೆ ಮರಳಿದ್ದಾರೆ.‌

ಕುಟುಂಬದ ಕಾಳಜಿ ಒಂದುಕಡೆಯಾದ್ರೆ ದೇಶಕ್ಕಾಗಿ ಆಡಬೇಕು ಎನ್ನುವ ಬದ್ಧತೆ ಮತ್ತೊಂದು ಕಡೆ ಎಂಬುದನ್ನು ಅಶ್ವಿನ್‌ ಸಾಬೀತು ಮಾಡಿದ್ದಾರೆ. ಅಶ್ವಿನ್‌ ಅವರ ಈ ಬದ್ಧತೆಗೆ ಟೀಂ ಇಂಡಿಯಾ ಅಭಿಮಾನಿಗಳು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ಚಾರ್ಟರ್ಡ್ ಫ್ಲೈಟ್ ವ್ಯವಸ್ಥೆ ಮಾಡಿದ ನಂತರ ಅಶ್ವಿನ್‌ ಯಾವುದೇ ಅಡೆತಡೆಗಳಿಲ್ಲದೇ ರಾಜ್‌ಕೋಟ್‌ಗೆ ಬಂದು ಟೀಂ ಇಂಡಿಯಾ ಪ್ಲೇಯಿಂಗ್‌-11 ನಲ್ಲಿ ಸೇರಿಕೊಂಡಿದ್ದಾರೆ. ಫ್ಲೈಟ್‌ ವ್ಯವಸ್ಥೆ ಕಲ್ಪಿಸಿದ ಬಿಸಿಸಿಐಗೆ ಅಶ್ವಿನ್‌ ಧನ್ಯವಾದ ಸಲ್ಲಿಸಿದ್ದಾರೆ. ಸದ್ಯ ಅಶ್ಚಿನ್‌ ಅವರ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಾಗಿತ್ತು?
ಅನಾರೋಗ್ಯದ ಹಿನ್ನೆಲೆಯಲ್ಲಿ ಅಶ್ವಿನ್‌ ಅವರ ತಾಯಿ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಅಶ್ವಿನ್‌ ಟೀಂ ಇಂಡಿಯಾವನ್ನು ತೊರೆದಿದ್ದರು. ಅಶ್ವಿನ್‌ ಅವರ ಸೇವೆ ಇನ್ನುಮುಂದೆ ತಂಡಕ್ಕೆ ಸಿಗುವುದಿಲ್ಲ ಎಂದೇ ಭಾವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಸಹ 10 ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ಫೀಲ್ಡಿಂಗ್‌ನಲ್ಲಿ ಮಾತ್ರ ಬದಲಿ ಆಟಗಾರನಿಗೆ ಅವಕಾಶವಿದ್ದ ಕಾರಣ ಅಶ್ವಿನ್‌ ಬದಲಿಗೆ ದೇವದತ್‌ ಪಡಿಕಲ್‌ ಅವರನ್ನು ಫೀಲ್ಡಿಂಗ್‌ಗೆ ಬಳಸಿಕೊಳ್ಳಲಾಗಿತ್ತು. ಆದ್ರೆ ಇಂದು ಮೈದಾನಕ್ಕೆ ಆಗಮಿಸಿರುವ ಅಶ್ವಿನ್‌ ಟೀಂ ಇಂಡಿಯಾ ಸೇರಿಕೊಂಡು ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

Share This Article