ಜಗ್ಗೇಶ್ ಕನ್ನಡದ ರಜನಿಕಾಂತ್ ಎಂದು ಅಪ್ಪುಗೆ ಪರಿಚಯಿಸಿದ್ದರಂತೆ ಅಣ್ಣಾವ್ರು

Public TV
3 Min Read

ಪುನೀತ್ ರಾಜ್ ಕುಮಾರ್ (Puneeth Raj Kumar) ಕಂಡೆ ಜಗ್ಗೇಶ್ ಅವರಿಗೆ ಎಲ್ಲಿಲ್ಲದ ಪ್ರೀತಿ. ಅಪ್ಪು ಸಾಯುವ ಮೂರು ದಿನದ ಮುಂಚೆ ಈ ಇಬ್ಬರೂ ಕಲಾವಿದರು ಬೆಂಗಳೂರಿನ ಮಲ್ಲೇಶ್ವರದಲ್ಲಿ ಸಿಕ್ಕು ಸಾಕಷ್ಟು ಮಾತನಾಡಿದ್ದಿದೆ. ಅನೇಕ ಸಾರಿ ರಾಯರ ದರ್ಶನಕ್ಕೆ ಒಟ್ಟಿಗೆ ಹೋಗಿದ್ದೂ ಇದೆ. ಅಲ್ಲದೇ, ಡಾ.ರಾಜ್ ಕುಮಾರ್ ಕಂಡರೆ ಜಗ್ಗೇಶ್ ಗೆ ಸಾಕಷ್ಟು ಗೌರವ. ಅಣ್ಣಾವ್ರು ಕೂಡ ಜಗ್ಗೇಶ್ (Jaggesh) ಅವರನ್ನು ಪ್ರೀತಿಯಿಂದ ನೋಡಿಕೊಂಡಿದ್ದು ಇದೆ. ಇಂತಹ ಜಗ್ಗೇಶ್ ತಮ್ಮ ಮನದಾಳದಿಂದ ಪುನೀತ್ ಮತ್ತು ಡಾ.ರಾಜ್ ಕುಟುಂಬದ ಬಗ್ಗೆ ಬರೆದುಕೊಂಡಿದ್ದಾರೆ. ಅದರ ಯಥಾವತ್ತು ಬರಹ ಇಲ್ಲಿದೆ.

ರಾಘಣ್ಣನ ಮದುವೆಗೆ ವಜ್ರೇಶ್ವರಿ ಮ್ಯಾನೇಜರ್ ಕಂಠೀರವ ಕುಮಾರ್ ಬರಬೇಕು ಎಂದು ತಿಳಿಸಿದ. ಅಣ್ಣನ (Raj Kumar) ಮನೆಯ ಮದುವೆ ಸಡಗರದಲ್ಲಿ ಭಾಗಿಯಾಗುವ ಸೌಭಾಗ್ಯ. ಪರಿಮಳಗೆ ತಯಾರಾಗಲು ಹೇಳೀದೆ. ಆಗ ನನ್ನ ಬಳಿ ಇದ್ದದ್ದು ಬುಲೆಟ್. ಅದನ್ನು ಏರಿ ಪುನೀತ್ ಫಾರ್ಮಗೆ ಹೋದೆವು. ಅಣ್ಣನ ಪ್ರೀತಿಗೆ ಏನು ಹೇಳಬೇಕೋ. ‘ಬಾಯ್ಯ ಬಾ’ ಎಂದು ಕೂಗಿ ಮೈಸವರಿ ಅವರೇ ಕುಡಿಯಲು ಪಾನಿಯ ನೀಡಿದರು. ಬಂದವರಿಗೆಲ್ಲಾ ನನ್ನ ಪರಿಚಯಿಸಿದರು. ಅದರಲ್ಲಿ ನನ್ನ ವಿಶೇಷ ಪುನೀತ್. ‘ಕಂದಾ ಇದು ಯಾರು ಗೊತ್ತಾ? ನಮ್ಮ ರಜನಿಕಾಂತ’ (Rajinikanth) ಎಂದರು. ಬಾಲಕ ಪುನೀತ್ ಆಶ್ವರ್ಯದಿಂದ ನನ್ನ ನೋಡಿದ. ನನಗು ಆತನ ನೋಡಿ ಆನಂದವಾಯಿತು. ಇದನ್ನೂ ಓದಿ:ನಗೋದಕ್ಕೂ ನಿನ್ನ ಪರ್ಮಿಷನ್ ಕೇಳಬೇಕಾ ಎಂದು ರಾಕಿ ವಿರುದ್ಧ ಕಾವ್ಯ ಗರಂ

ಕೆಲ ದಿನದ ನಂತರ ರಣರಂಗ ಶಿವಣ್ಣನ ಚಿತ್ರದ ಕ್ಲೈಮ್ಯಾಕ್ಸ್ ಸಮಯದಲ್ಲಿ ವೆಂಕಟೇಶ ಎಂಬ ಜ್ಯೂನಿಯರ್ ಆರ್ಟಿಸ್ಟ್ ಲೋ ತಗಳೋ ರಾಜಣ್ಣನ ಜೊತೆ ಫೋಟೋ ಎಂದು ನೀಡಿದ. ಆನಂದ ತಡೆಯಲಾಗಲಿಲ್ಲ. ಕಾರಣ ಆ ಕಾಲದಲ್ಲಿ ರಾಜಣ್ಣನ ಜೊತೆ ಫೋಟೋ ಅಸಾಧ್ಯ. ನೋಡಿದರೆ ಅದು ನನ್ನ ಹುಡುಕಿ ಬಂತು. ವೆಂಕಟೇಶ್ ಹೊಟ್ಟೆಪಾಡಿಗೆ ಸಣ್ಣ ಕ್ಯಾಮೆರಾ ಇಟ್ಟುಕೊಂಡಿದ್ದ. ಒಂದು ಫೋಟೋಗೆ 5 ರೂಪಾಯಿ ಪಡೆಯುತ್ತಿದ್ದ. ಬಡವ ಎಂದು ಅಣ್ಣನೆ ಸಹಕರಿಸಿದ್ದರು.

ಕೆಲ ವರ್ಷದ ನಂತರ ಪುನೀತ್, ಅಣ್ಣನ ಜೊತೆ ಕಲಾವಿದರ ಸಂಘದ ಕಾರ್ಯಕ್ರಮದಲ್ಲಿ ನರ್ತಿಸಿದ. ಆಗ ಅಮ್ಮ (Parvathamma), ‘ಜಗ್ಗೇಶ್ ಅವನು ಪ್ರೀತಿಸುವ ಹುಡುಗಿ ಬಂದಿದ್ದಾಳೆ’ ಎಂದರು. ಜನರ ಮಧ್ಯೆ ನನ್ನ ಕಣ್ಣಿಗೆ ಅಶ್ವಿನಿ ಕಾಣಲಿಲ್ಲ. ನಂತರ ಮದುವೆ. ಸೂಪರ್  ಸ್ಟಾರ್ ಎಲ್ಲ ಆದರು. ಅದೇನು ವಿಪರೀತ ಇಷ್ಟಪಡುತ್ತಿದ್ದ. ನಮ್ಮ ಸ್ನೇಹ ವರ್ಣಿಸಲಾಗದ ಸಂಕೋಲೆ.

ಕಡೆದಿನಗಳು ಎಂದು ಭಾವಿಸಲಿಲ್ಲ. ನಿರ್ದೇಶಕ ಸಂತೋಷ, ಪುನೀತ್ ಜೊತೆ ಮಂತ್ರಾಲಯಕ್ಕೆ ಕರೆದುಕೊಂಡು ಹೋದ ಆ ದಿನ ಮನಬಿಚ್ಚಿ ಮಾತಾಡಿ, ನಕ್ಕು ಸಮಯ ಕಳೆದೆವು. ಕಡೆ 3 ದಿನದ ಹಿಂದೆ ಯೋಗಿಯು ಪುನೀತ್ ಮಲ್ಲೇಶ್ವರಕ್ಕೆ ಬಂದ ವಿಷಯ ತಿಳಿಸಿದ. ಕರೆಮಾಡಿದೆ. ಅಣ್ಣ ಮಲ್ಲೇಶ್ವರದಲ್ಲೇ ಇರುವೆ ಎಂದ. ಹಾಗೆ ಎದ್ದು ಕಾರು ಡ್ರೈವ್ ಮಾಡಿಕೊಂಡು ಹೋಡೆ. ಪೂಜೆಗೆ ಕುಳಿತು ತೊಡೆ ನೋವಾಗಿದೆ. ಹಾಗಾಗಿ ಚಿಕಿತ್ಸೆಗೆ ಬಂದೆ ಎಂದ. ಚಿಕಿತ್ಸೆ ಮುಗಿದ ಮೇಲೆ ಸತೀಶ್ ಮತ್ತು ನಾನು ಪುನೀತ್ ಜೊತೆ ಕೆಲ ಸಮಯ ಮಾತಾಡಿ ನಿರ್ಗಮಿಸಿದೆವು.

ಇದಾದ ಮೂರು ದಿನಕ್ಕೆ ಪುನೀತ್ ಹೋಗಿ ಬಿಟ್ಟ ಅಂದರು. ಹೃದಯ ಒಡೆದು ಚೂರಾಯಿತು. ಜೀವನದ ಆಸಕ್ತಿ, ಬದುಕಿನ ಮೇಲೆ ನಂಬಿಕೆ. ನಾವು ಯಾರು. ಈ ಭೂಮಿಗೆ ಏಕೆ ಬಂದೆವು. ಎಲ್ಲಾ ಇದೆ. ಮುಂದೆ ಇರದು. ಯಾವುದು ಸತ್ಯ, ಯಾವುದು ಮಿತ್ಯ, ನಾನು ಹೇಗೆ ಇರಬೇಕು, ಏನು ಮಾಡಬೇಕು? ಬದುಕು ನಶ್ವರ ಎಂಬ ಅನೇಕ ಪ್ರಶ್ನೆ ನನ್ನ ಕಾಡುತ್ತಿದೆ. ನನ್ನೊಳಗೆ ನಾನು ಬಚ್ಚಿಕೊಂಡು ಸುಮ್ಮನೆ ಇರುವಂತೆ ನಟಿಸಿ ಬದುಕುತ್ತಿರುವೆ. ನನ್ನವರು ಎಂದು ಸಿಕ್ಕಾಗ ಮನಬಿಚ್ಚೆ ಮಾತಾಡುವೆ. ಕೆಲಸ ಇದ್ದಾಗ ಮಾಡುವೆ. ಮಿಕ್ಕಂತೆ ಯಾರಿಗು ಸಿಗದೆ ಏಕಾಂತಕ್ಕೆ ಜಾರುವೆ. ಇದು ಪುನೀತ್ ಸಿಕ್ಕಾಗ, ಇದ್ದಾಗ, ಹೋದ ಮೇಲೆ ನನ್ನ ಹೃದಯದ ಅನಿಸಿಕೆ.

ಕಡೆಯ ಮಾತು ಪುನೀತ್ ಅವರ ತಂದೆಯ ಮೀರಿ ಬೆಳೆದು ಉಳಿದ ದೇವಮಾನವ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *